ವೈಭವದ ಐತಿಹಾಸಿಕ ಕರಗ ಮಹೋತ್ಸವ; ದ್ರೌಪದಿ ದೇವಿಯ ಕರಗ ಕಣ್ತುಂಬಿಕೊಳ್ಳಲು ಬಂದ ಸಾವಿರಾರು ಭಕ್ತರು

blank

ಬೆಂಗಳೂರು: ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ ವೈಭವಯುತವಾಗಿ ಮಧ್ಯರಾತ್ರಿ ಆರಂಭಗೊಂಡಿತು. ಸದಾ ಜನ ಜಂಗುಳಿ ಹಾಗೂ ಟ್ರಾಫಿಕ್​ ಸದ್ದಿನಲ್ಲಿ ಗಿಜುಗುಡುತ್ತಿದ್ದ ನಗರದಲ್ಲಿ ರಾತ್ರಿಯಿಂದಲೇ ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಮೇಳಗಳ ನಡುವೆ ಮಧ್ಯರಾತ್ರಿ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಡಲಿರುವ ಹೂವಿನ ಕರಗ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಭಕ್ತರು ಜಮಾವಣೆಯಾಗಿದ್ದಾರೆ.

ಹೂವಿನ ಅಲಂಕಾರ

ಶಕ್ತಿ ದೇವತೆ, ದ್ರೌಪದಿ ಕರಗ ಎಂಬ ಪ್ರಸಿದ್ಧಿಯ ಉತ್ಸವದಲ್ಲಿ ಕುಂಭದಲ್ಲಿ ದುರ್ಗೆಯನ್ನು ಆವಾಹಿಸಿ, ಪೂಜಿಸಿ, ಹೂವಿನಿಂದ ಅಲಂಕಾರ ಮಾಡಲಾಗಿದೆ. ಮಧ್ಯರಾತ್ರಿ ವೇಳೆಗೆ ಹಳದಿ ಸೀರೆ, ಬಳೆ ತೊಟ್ಟಿದ್ದ ಶ್ರೀ ಧರ್ಮರಾಯ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಧಾರ್ಮಿಕ ಆಚರಣೆ

ಧ್ವಜಾರೋಹಣಗೊಂಡ 9ನೇ ದಿನಕ್ಕೆ ನಡೆಯುವುದೇ ಹೂವಿನ ಕರಗೋತ್ಸವ. ಇದನ್ನು ಕರಗ ಶಕ್ತ್ಯುತ್ಸವ ಎಂದು ಕರೆಯಲಾಗುತ್ತದೆ. ಮುಂಜಾನೆ ಅರ್ಚಕರು ಹಾಗೂ ವೀರಕುಮಾರರು ಎಂದಿನಂತೆ ಧರ್ಮರಾಯ ದೇವಸ್ಥಾನದಿಂದ ಕರಗದ ಕುಂಟೆಗೆ ಸಾಗಿ ಗಂಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಹರಕೆ ಹೊತ್ತ ಭಕ್ತರು ದೇವಾಲಯದ ಮುಂದೆ ರಾಶಿಗಟ್ಟಲೆ ಕರ್ಪೂರ ಉರಿಸಿದರು. ಮಧ್ಯಾಹ್ನ 3ಕ್ಕೆ ದೇವಾಲಯದಲ್ಲಿ ಬಳೆತೊಡಿಸುವ ಶಾಸ್ತ್ರ ನೆರವೇರಿತು. ನಂತರ ಅರ್ಜುನ ಮತ್ತು ದ್ರೌಪದಿ ದೇವಿಗೆ ವಿವಾಹ ಶಾಸ್ತ್ರ ಮಾಡಲಾಯಿತು. ಸಂಜೆ ಶಾಂತಿ ಹೋಮ, ಗಣ ಹೋಮ ನಡೆಯಿತು.

ಪಲ್ಲಕ್ಕಿ ಉತ್ಸವ

ಕರಗ ಶಕ್ತ್ಯುತ್ಸವ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನದಿಂದಲೇ ನಗರದ ನಾನಾ ಭಾಗಗಳಿಂದ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಅಣ್ಣಮ್ಮ ದೇವಿ ಸೇರಿ ನಗರದ ಸುತ್ತಮುತ್ತಲ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಹೊತ್ತ ರಥಗಳು ರಾತ್ರಿವೇಳೆಗೆ ಮಾರುಕಟ್ಟೆ ಪ್ರದೇಶ ತಲುಪಿದವು. ಇಲ್ಲಿಂದ ಕೆ.ಆರ್​.ರಸ್ತೆ, ಮೈಸೂರು ಸರ್ಕಲ್, ಚಾಮರಾಜಪೇಟೆ, ಪುರಭವನ, ನೃಪತುಂಗ ರಸ್ತೆ ಸೇರಿ ಮಾರುಕಟ್ಟೆಯ ಸುತ್ತಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನ ಉಂಟಾದ ಸಂಚಾರದಟ್ಟಣೆ ರಾತ್ರಿಯೂ ಮುಂದುವರಿದಿತ್ತು. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುವಂತಾಯಿತು.

ಕುಡಿವ ನೀರಿಗೆ ಅರವಂಟಿಗೆಗಳು

ಕರಗವನ್ನು ಕಣ್ತುಂಬಿಕೊಳ್ಳಲು ಮುಂಜಾನೆಯಿಂದಲೇ ನಗರ ಸೇರಿ ನಾನಾ ಭಾಗಗಳಿಂದ ಲಕ್ಷಾಂತರ ಜನ ದೇವಸ್ಥಾನ ತಲುಪಿದ್ದರು. ಜತೆಗೆ ಮಧ್ಯಾಹ್ನದಿಂದಲೇ ಪಲ್ಲಕ್ಕಿ ಉತ್ಸವ ಇದ್ದಿದ್ದರಿಂದ ಉತ್ಸವ ಸಾಗುವ ದಾರಿಯುದ್ದಕ್ಕೂ ಬಾಯಾರಿಕೆ ತಣಿಸಲು 20&30 ಕಡೆಗಳಲ್ಲಿ ಅರವಂಟಿಗೆಗಳನ್ನು ಸ್ಥಾಪಿಸಿ ನೀರು, ಮಜ್ಜಿಗೆ, ಪಾನಕ, ರಸಾಯನ ಮತ್ತು ಕೋಸಂಬರಿ ವಿತರಣೆ ಮಾಡಲಾಗುತ್ತಿತ್ತು. ಕೆಲವೆಡೆ ಅನ್ನದಾನವೂ ನಡೆಯಿತು.

ಹರಿದುಬಂದ ಭಕ್ತ ಸಮೂಹ

ವಹ್ನಿಕುಲ ಕ್ಷತ್ರಿಯರು ಎಲ್ಲೆಲ್ಲಿ ದಟ್ಟವಾಗಿದ್ದಾರೋ ಅಲ್ಲೆಲ್ಲ ಕರಗೋತ್ಸವಗಳು ನಡೆಯುತ್ತವೆ. ಆದಾಗಿಯೂ ಅವೆಲ್ಲವುಗಳಿಗೂ ಬೃಹತ್​ ಮಟ್ಟದಲ್ಲಿ ಆಚರಣೆಗೊಳ್ಳುವ ಬೆಂಗಳೂರು ಕರಗ ಉತ್ಸವ ವೀಕ್ಷಿಸಲು ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್​, ಸೇಲಂ ಮುಂತಾದ ಕಡೆಗಳಿಂದ ಬೆಂಗಳೂರು ಕರಗಕ್ಕೆ ಭಕ್ತಸಾಗರ ಹರಿದುಬಂದಿತ್ತು. ಇದರ ಜತೆಗೆ ಮಹಾರಾಜರ ಕಾಲದ ಬೆಂಗಳೂರಿನ ತಿಗಳರಪೇಟೆ, ರಾಣಾಸಿಂಗ್​ ಪೇಟೆ, ಅರಳೆಪೇಟೆ, ಅಕ್ಕಿಪೇಟೆ, ಬಳೆಪೇಟೆ, ಕಬ್ಬನ್​ಪೇಟೆ, ಚಿಕ್ಕಪೇಟೆ ಇತ್ಯಾದಿಗಳಲ್ಲೆಲ್ಲ ಅಧಿಕ ಸಂಖ್ಯೆಯಲ್ಲಿರುವ ಕುಲಬಾಂಧವರು ಕಳೆದ ಒಂಭತ್ತು ದಿನಗಳಿಂದ ಕರಗ ಉತ್ಸವ ಆಚರಣೆಯಲ್ಲಿ ತೊಡಗಿದ್ದಾರೆ.

ಸಂಗೀತ ಕಾರ್ಯಕ್ರಮ

ಹೂವಿನ ಕರಗದ ಅಂಗವಾಗಿ ದೇವಳದಲ್ಲಿ ರಾತ್ರಿಪೂರ ಸಂಗೀತ ನೃತ್ಯ ಕಾರ್ಯಕ್ರಮ ನಡೆಯಿತು. ಈ ಉತ್ಸವದಲ್ಲಿ ಭಕ್ತರು ಉಪವಾಸವಿದ್ದು, ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುವುದರಿಂದ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಕಟ್​ಫ್ರೂಟ್ಸ್​ ವಿರತಣೆ ಮಾಡಲಾಯಿತು. ಉತ್ಸವ ಆರಂಭವಾದ ದಿನದಿಂದಲೂ ನಿತ್ಯ ಭಕ್ತರಿಗೆ ದೇವಾಲಯದ ಆವರಣದಲ್ಲಿ ಕಟ್​ಫ್ರೂಟ್ಸ್ ವಿತರಿಸಲಾಗುತ್ತಿದೆ.

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…