ಹಿರಿಯೂರು: ವಿವಿ ಸಾಗರ ಜಲಾಶಯದ ನೀರಿನ ಹಂಚಿಕೆ-ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರ ಹಿತ ಕಾಪಾಡಲು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲು ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಸಭೆ ಸೇರಿದ ರೈತರು ನೀರು ಹಂಚಿಕೆ ಕುರಿತು ಚರ್ಚಿಸಿದರು.
ತಾಲೂಕಿನಲ್ಲಿ ಕಳೆದ ಮೂರು ವರ್ಷದಲ್ಲಿ 17 ಸಾವಿರ ಎಕರೆ ತೆಂಗು, ಅಡಕೆ ಇತರೆ ತೋಟಗಾರಿಕೆ ಬೆಳೆ ಒಣಗಿದ್ದು. ಅಚ್ಚುಕಟ್ಟು ಪ್ರದೇಶದ ತೋಟಗಳ ಉಳಿವಿಗೆ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಕನಿಷ್ಠ 10 ಟಿಎಂಸಿ ಅಡಿ ನೀರು ಮೀಸಲಿಡಬೇಕು ಎಂದು ಒತ್ತಾಯಿಸಲಾಯಿತು.
ಮಾ.6 ರಂದು ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಲಾಗಿತ್ತು. ನಂತರ 45 ದಿನದ ನಂತರ ಎರಡನೇ ಬಾರಿ ನೀರು ಬಿಡುವ ಪದ್ಧತಿ ಮುರಿಯಲಾಗಿದೆ. ಜಿಲ್ಲಾಧಿಕಾರಿಗಳು ತಕ್ಷಣ ನೀರು ಬಿಡುವ ಆದೇಶ ಹೊರಡಿಸಬೇಕು ಎಂದು ಮುಖಂಡರು ಮನವಿ ಮಾಡಿದರು.
ಹಿಂದಿನ ವರ್ಷ ಜಲಾಶಯದ ನೀರಿನ ಮಟ್ಟ 103 ಅಡಿ ತಲುಪಿತ್ತು. ರೈತರ ಸಭೆ ನಡೆಸದೆ ಭದ್ರಾ ಮೇಲ್ದಂಡೆ ಯೋಜನೆಯಡಿ ವೇದಾವತಿ ನದಿಗೆ ಈವರೆಗೆ 2.10 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಇದರಿಂದ ಸ್ಥಳೀಯ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು, ಜನಪ್ರತಿನಿಧಿಗಳು, ತೋಟಗಾರಿಕೆ ತಜ್ಞರು ಮತ್ತು ಜಲತಜ್ಞರ ಸಮಿತಿ ರಚಿಸಿ ಅಚ್ಚುಕಟ್ಟು ಪ್ರದೇಶದ ಸ್ಥಿತಿಗತಿ ಅಧ್ಯಯನ ಮಾಡಿಸಬೇಕು. ವರ್ಷದಲ್ಲಿ ಕನಿಷ್ಠ ಎರಡು ಬಾರಿ ನೀರು ಬಿಡುವ ಲೆಕ್ಕದಲ್ಲಿ ಮೂರು ವರ್ಷಕ್ಕೆ 10 ಟಿಎಂಸಿ ಅಡಿ ನೀರು ಕಾಯ್ದಿರಿಸಬೇಕು ಎಂದು ಆಗ್ರಹಿಸಿದರು.
ಸಿರಾ ತಾಲೂಕಿಗೆ ಹೇಮಾವತಿ ಮತ್ತು ಎತ್ತಿನಹೊಳೆ ನೀರು ಬರುವ ಕಾರಣ ಅಲ್ಲಿಗೆ ಮೀಸಲಿಟ್ಟ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸಬೇಕು. ಈ ಕುರಿತು ಸರ್ಕಾರದ ಮೇಲೆ ಒತ್ತಡ ತರಬೇಕು. ನ್ಯಾಯ ಸಿಗದೇ ಹೋದರೆ ಕಾನೂನು ಹೋರಾಟ ನಡೆಸೋಣ ಎಂದು ತೀರ್ಮಾನಿಸಿದರು.
ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಆರನಕಟ್ಟೆ ಶಿವಕುಮಾರ್, ಎಚ್.ಆರ್.ತಿಮ್ಮಯ್ಯ, ಎಂ.ಟಿ.ಸುರೇಶ್, ಮಾರಿಕಣಿವೆ ವಿಶ್ವನಾಥ್, ಶಫೀವುಲ್ಲಾ, ಎಲ್.ಆನಂದಶೆಟ್ಟಿ, ಪಿಟ್ಲಾಲಿ ಶಿವರಾಂ, ಜಗದೀಶ್ ದರೇದಾರ್, ನಾರಾಯಣಾಚಾರ್ ಮಾತನಾಡಿದರು.
ಸಿ. ಸಿದ್ದರಾಮಣ್ಣ, ಎಂ.ಎಂ.ಎಂ. ಮಣಿ, ಗೀತಾ ಕೃಷ್ಣಮೂರ್ತಿ, ಕಸವನಳ್ಳಿ ಶ್ರೀನಿವಾಸ್, ಹಾರ್ಡವೇರ್ ಶಿವಣ್ಣ ಇದ್ದರು.