More

    ಕನಕಪುರ, ರಾಮನಗರದಲ್ಲಿಲ್ಲ ಖಾತೆಗೆ ಕ್ಯಾತೆ

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ರಾಮನಗರ-ಕನಕಪುರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಇ-ಆಸ್ತಿ ಕಾವೇರಿ ತಂತ್ರಾಂಶವನ್ನು ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಸ್ತರಿಸಿದರೆ ಆಸ್ತಿ ನೋಂದಣಿ ಅಕ್ರಮಗಳಿಗೆ ಕಡಿವಾಣ ಬೀಳಲಿದೆ.

    ಆದರೆ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ತಂತ್ರಾಂಶದ ಜೋಡಣೆ ವಿಳಂಬವಾಗುತ್ತಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಸಂಬಂಧಿಸಿದ ಇಲಾಖೆ ವಿಫಲವಾಗಿದೆ. ನಿತ್ಯ ಸಾವಿರಾರು ಆಸ್ತಿ ನೋಂದಣಿ ಕಾರ್ಯ ನಡೆಯುತ್ತಿದ್ದು, ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.

    ರಾಮನಗರ-ಕನಕಪುರ ಸ್ಥಳೀಯ ಸಂಸ್ಥೆಯಲ್ಲಿ ಕಾವೇರಿ ಇ-ಆಸ್ತಿ ತಂತ್ರಾಂಶ ಜೋಡಣೆ ಮೂಲಕ ಆಸ್ತಿ ನೋಂದಣಿ ಮಾಡಲಾಗುತ್ತಿದೆ. ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿಗೂ ಖಾತೆ ದಾಖಲೆಗಳ ಆಧಾರದ ಮೇಲೆ ಖರೀದಿದಾರರ ಹೆಸರಿಗೆ ನೋಂದಣಿಯಾಗುತ್ತಿದೆ. ಈ ಹಳೆಯ ಪದ್ಧತಿ ವಂಚಕರಿಗೆ ಲಾಭವಾಗುತ್ತಿದೆ.

    ಒಂದೇ ನಿವೇಶನ-ಆಸ್ತಿಯನ್ನು ಹೆಚ್ಚು ಮಂದಿಗೆ ಪರಭಾರೆ ಮಾಡಿ ನೋಂದಣಿ ಮಾಡಲಾಗುತ್ತಿದೆ ಎನ್ನುವ ದೂರು ಕೇಳಿ ಬಂದಿದೆ. ಇದು ಮಧ್ಯವರ್ತಿಗಳು-ಭ್ರಷ್ಟ ಅಧಿಕಾರಿಗಳಿಗೆ ಲಾಭವಾಗುತ್ತಿದೆ. ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ಕಾವೇರಿ ತಂತ್ರಾಂಶ ಅಳವಡಿಸಿದರೆ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ.

    ಆದೇಶಕ್ಕೆ ಕಿಮ್ಮತ್ತಿಲ್ಲ: ಇ-ಆಸ್ತಿ ತಂತ್ರಾಂಶವನ್ನು ಕಾವೇರಿ ತಂತ್ರಾಶದೊಂದಿಗೆ ಜೋಡಣೆ ಮಾಡಲು 10 ಮಹಾನಗರ ಪಾಲಿಕೆಗಳನ್ನು ಒಳಗೊಂಡಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಆದರೆ, ಇಲ್ಲಿಯವರೆಗೆ ತಂತ್ರಾಂಶ ಜೋಡಣೆ ಕಾರ್ಯ ಆಗಿಲ್ಲ.

    ಸುತ್ತೋಲೆ ಹೊರಡಿಸಲಾಗಿದೆ: ಪೌರಾಡಳಿತ ನಿರ್ದೇಶನಾಲಯ ಮತ್ತು ಸುತ್ತೋಲೆಗಳನ್ನು ಹೊರಡಿಸಿ ನಿಯಮಬಾಹಿರವಾಗಿ ತೆರೆದಿರುವ ಖಾತೆಗಳನ್ನು ನಗರಾಭಿವೃದ್ಧಿ ಪ್ರಾಧಿಕಾರ, ಪುರಸಭೆ ಯೋಜನಾ ಪ್ರಾಧಿಕಾರ ಅಥವಾ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಿಂದ ರದ್ದುಪಡಿಸಲು/ಖಾತೆಯನ್ನು ನೀಡಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ವೇಳೆ ಇಂತಹ ಖಾತೆಗಳನ್ನು ವಿಸ್ತರಿಸಿದಲ್ಲಿ ಸಂಬಂಧಿಸಿದ ಸ್ಥಳೀಯ ಸಂಸ್ಥೆಯ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರಗಿಸುವ ಬಗ್ಗೆ ಸೂಚಿಸಿ ನಿರ್ದೇಶನ ನೀಡಲಾಗಿದೆ.

    ಸರ್ಕಾರ ಆದೇಶ ಹೊರಡಿಸಿ 1 ವರ್ಷ ಕಳೆದರು ಇ-ಆಸ್ತಿ ಕಾವೇರಿ ತಂತ್ರಾಂಶ ಜೋಡಣೆ ವಿಳಂಬವಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶ-ನಗರಾಭಿವೃದ್ಧಿ ಇಲಾಖೆ ಸುತ್ತೋಲೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾವೇರಿ ತಂತ್ರಾಂಶ ಜೋಡಣೆ ಆದಲ್ಲಿ ತಮ್ಮ ಅಧೀನದಲ್ಲಿರುವ ಲಾಭಾಂಶದ ಹಕ್ಕು ವರ್ಗಾವಣೆ ಕಾರ್ಯಕ್ಕೆ ಧಕ್ಕೆ ಬರಬಹುದು ಎಂಬ ಕಾರಣಕ್ಕೆ ಅನುಷ್ಠಾನಕ್ಕೆ ತರುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ.
    ಎಲ್.ನಾರಾಯಣಾಚಾರ್ ರಾಜ್ಯಾಧ್ಯಕ್ಷ
    ನಿವೃತ್ತ ಪೌರ ನೌಕರರ ಸಂಘ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts