More

    ಮದ್ಯ ಬಂದ್, ನೀರಾಕ್ಕೆ ಡಿಮ್ಯಾಂಡ್

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಲಾಕ್‌ಡೌನ್‌ನಿಂದ ಮದ್ಯದ ಅಂಗಡಿಗಳು ಬಂದ್ ಹಿನ್ನೆಲೆಯಲ್ಲಿ ನೀರಾ ಖರೀದಿಗೆ ಮದ್ಯ ಪ್ರಿಯರು ಮುಗಿ ಬೀಳುತ್ತಿದಾರೆ.

    ವಿವಿ ಸಾಗರ ಜಲಾಶಯಕ್ಕೆ ಕೂಗಳತೆಯ ದೂರದಲ್ಲಿರುವ ವಿ.ವಿ.ಪುರ ಗ್ರಾಮದ ಸುತ್ತಮುತ್ತ ತೆಂಗಿನ ತೋಟಗಳು ಹೆಚ್ಚಿದ್ದು, ಕೆಲವೆಡೆ ನೀರಾ ಇಳಿಸಲಾಗುತ್ತಿದೆ. ಲಾಕ್‌ಡೌನ್ ಆದೇಶದ ನಂತರ ನೀರಾ ಬೇಡಿಕೆ ಹೆಚ್ಚಾಗಿದೆ.

    ಸದ್ಯ ಗ್ರಾಮದಲ್ಲಿ ಕೆಲವರು ನೀರಾ ಮಾರಾಟ ಮಾಡುತ್ತಿದ್ದು, ಸುತ್ತಮುತ್ತ ಹಳ್ಳಿಗಳು ಸೇರಿ ಹಿರಿಯೂರಿನಿಂದ ಮದ್ಯಪ್ರಿಯರು ನೀರಾ ಖರೀದಿಗೆ ಮಾರಿಕಣಿವೆಗೆ ಲಗ್ಗೆ ಹಾಕುತ್ತಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ ಎಂಬ ಮಾತು ಕೇಳಿ ಬಂದಿವೆ.

    ಬೆಳಗ್ಗೆ ಐದು ಗಂಟೆಗೆ ತೆಂಗಿನ ಮರದಿಂದ ನೀರಾ ಇಳಿಸಿ ಸೂರ್ಯ ಉದಯಿಸುವ ಮುಂಚೆ ಸೇವಿಸಿದರೆ ಮಾತ್ರ ಅದು ಆರೋಗ್ಯ ವೃದ್ಧಿಗೆ ಸಹಕಾರಿ. ಬಳಿಕ ಸೇವಿಸಿದರೆ ಅದು ಹೆಂಡವಾಗಿ ಪರಿವರ್ತಿತವಾಗುತ್ತದೆ. ದಿನಪೂರ್ತಿ ಮಾರಾಟ ಮಾಡುವುದರಿಂದ ಮದ್ಯ ವ್ಯಸನಿಗಳು ಖರೀದಿಗೆ ಮುಗಿಬೀಳುತ್ತಿದ್ದಾರೆ.

    ತೆಂಗಿನ ಬೆಳೆಗೆ ಜೀವ ಕಳೆ: ಕಳೆದ ಐದಾರು ವರ್ಷ ನದಿ ಪಾತ್ರದಲ್ಲಿ ನಾಲೆಗೆ ನೀರಿಲ್ಲದೆ ಹಲವು ತೆಂಗಿನ ತೋಟಗಳು ಒಣಗಿದ್ದವು. ಕೊಳವೆಬಾವಿಯಲ್ಲಿ ಬರುವ ಅಲ್ಪ-ಸ್ವಲ್ಪ ನೀರಿನಿಂದ ಕೆಲ ತೋಟಗಳು ಜೀವ ಉಳಿಸಿಕೊಂಡಿದ್ದವು. ವಿವಿ ಸಾಗರ ಜಲಾಶಯದಿಂದ ಒಂದು ತಿಂಗಳ ಕಾಲ ನದಿ ಪಾತ್ರಕ್ಕೆ ನೀರು ಹರಿಸಿದ್ದರಿಂದ ಒಣಗಿದ್ದ ತೆಂಗಿಗೆ ಜೀವ ಕಳೆ ಬಂದಿದೆ. ಈಗ ನೀರಾ ಇಳಿಸಲು ಬಹಳಷ್ಟು ಸಹಕಾರಿ ಆಗಿದೆ.

    ತಹಸೀಲ್ದಾರ್ ಸತ್ಯನಾರಾಯಣ ಹೇಳಿಕೆ: ಹಿರಿಯೂರು ತಾಲೂಕಿನಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಅಕ್ರಮ ಮದ್ಯ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವಿ.ವಿ.ಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ನಿಯಮ ಉಲ್ಲಂಘಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts