More

    ವಿವಿ ಸಾಗರ ಪ್ರವಾಸಿ ಮಂದಿರಕ್ಕೆ ನವೀಕರಣ ಭಾಗ್ಯ

    ಹಿರಿಯೂರು: ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದ ಪ್ರವಾಸಿ ಮಂದಿರಕ್ಕೆ ನವೀಕರಣ ಭಾಗ್ಯ ಸಿಕ್ಕಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರ ಅಚ್ಚುಮೆಚ್ಚಿನ ಸ್ಥಳವಾಗಿದೆ.

    ಜಲಾಶಯದ ಬಲ ಭಾಗದ ಗುಡ್ಡದ ಮೇಲೆ ಹಸಿರು ಪರಿಸರದಲ್ಲಿ ಪ್ರವಾಸಿಗರು, ಗಣ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಂಗಲು 1963ರಲ್ಲೇ ಪ್ರವಾಸಿ ಮಂದಿರ ನಿರ್ಮಿಸಿದ್ದು, ಇತ್ತಿಚೇಗೆ 48 ಲಕ್ಷ ರೂ. ವೆಚ್ಚದಲ್ಲಿ ಅದನ್ನು ನವೀಕರಿಸಲಾಗಿದೆ.

    ಭದ್ರೆ, ವಿವಿ ಸಾಗರದ ಒಡಲು ಸೇರಿದ ನಂತರ ಜಲ ವೈಭವ, ಹಸಿರು ಕಣಿವೆಗಳ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಜಲಾಶಯದ ಮೇಲಿನ ಪ್ರವಾಸಿ ಮಂದಿರಕ್ಕೆ ಬೇಡಿಕೆ ಹೆಚ್ಚಿದೆ. ಜಲಾಶಯ ನೋಡಲು ಬರುವ ಅಧಿಕಾರಿಗಳು, ನ್ಯಾಯಾಧೀಶರು ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಪ್ರವಾಸಿ ಮಂದಿರ ಅಚ್ಚುಮೆಚ್ಚಿನ ಸ್ಥಳವಾಗಿದೆ.

    ಜಲಾಶಯದ ಗುಡ್ಡದ ಮೇಲೆ ಪ್ರವಾಸಿ ಮಂದಿರ ನಿರ್ಮಿಸಿದ್ದರಿಂದ ಇದು ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ಸ್ಥಳವಾಗಿದೆ. ಕಣ್ಣು ಹಾಯಿಸಿದ ಕಡೆಯೆಲ್ಲಾ ಹಚ್ಚ ಹಸಿರಿನ ಗಿಡ-ಮರಗಳು, ಕಿವಿಗೆ ಇಂಪು ನೀಡುವ ಹಕ್ಕಿಗಳ ಚಿಲಿಪಿಲಿ, ಜಲಾಶಯದ ನೀರು, ಕಣಿವೆ ಗುಡ್ಡಗಳಿಗೆ ಚುಂಬಿಸುವ ಇಬ್ಬನಿ, ಪ್ರಶಾಂತ ವಾತಾವರಣ ಮನೋಲ್ಲಾಸದ ಅನುಭವ ನೀಡುತ್ತದೆ. ಮುಂಜಾನೆ ಪ್ರವಾಸಿ ಮಂದಿರ, ಜಲಾಶಯದ ಪರಿಸರ ಮಂಜಿನಿಂದ ಕಂಗೊಳಿಸುತ್ತದೆ.

    ನಿರ್ವಹಣೆ: ಪ್ರವಾಸಿ ಮಂದಿರವನ್ನು ಸಣ್ಣ ನೀರಾವರಿ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ನವೀಕರಣವಾದ ಮೇಲೆ ಪ್ರವಾಸಿ ಮಂದಿರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಪ್ರತಿ ನಿತ್ಯ ಗಣ್ಯರು, ಅಧಿಕಾರಿಗಳು ಇಲ್ಲಿಗೆ ಬರುವುದರಿಂದ ಒಂದು ದಿನ ಕೂಡ ರೂಮ್/ಕೊಠಡಿಗಳು ಖಾಲಿ ಇರುವುದಿಲ್ಲ. ವಿಧಾನ ಸೌಧ, ವಿವಿಧ ಇಲಾಖೆ ಅಧಿಕಾರಿಗಳು, ಸ್ಥಳೀಯ ಗಣ್ಯರು, ಪ್ರವಾಸಿಗರು ರೂಮ್‌ಗೆ ಬೇಡಿಕೆ ಇಡುವುದರಿಂದ ಅಧಿಕಾರಿಗಳು ಹೈರಾಣಾಗಿದ್ದಾರೆ.

    ಪ್ರವಾಸಿ ಮಂದಿರದಲ್ಲಿ ಗಣ್ಯರ ಸುರಕ್ಷತೆ, ಸ್ವಚ್ಛತೆ, ಹೈಟೆಕ್ ಕೊಠಡಿ, ಬಿಸಿ ನೀರು, ಶುದ್ಧ ಕುಡಿಯುವ ನೀರು, ಶೌಚಗೃಹ, ಟಿವಿ ಸೌಲಭ್ಯವಿದೆ. ಇಲ್ಲಿ ಉಳಿದುಕೊಳ್ಳುವ ಅಧಿಕಾರಿಗಳು ಗಣ್ಯರಿಗೆ ಊಟ, ತಿಂಡಿ ವ್ಯವಸ್ಥೆ ಬೇಕೆಂದರೆ ಮೇಟಿಗಳು ತಯಾರಿಸಿ ಕೊಡುತ್ತಾರೆ. ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಮತ್ತ್ಯಾರೇ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗುವಾಗ ಇಲ್ಲಿಗೆ ಭೇಟಿ ನೀಡಿ ವಿಶ್ರಾಂತಿ ಪಡೆಯುವುದು ಸಾಮಾನ್ಯ.

    ಪ್ರವಾಸಿ ಮಂದಿರ ನಿರ್ಮಾಣ: 1907ರಲ್ಲಿ ವಿವಿ ಸಾಗರ ಜಲಾಶಯ ನಿರ್ಮಾಣವಾಗಿದ್ದು, 1963ರಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಅಂದಿನ ಸಿಎಂ ಎಸ್.ನಿಜಲಿಂಗಪ್ಪ ಅವರು ಅಡಿಗಲ್ಲು ಹಾಕಿದ್ದಾರೆ. 1976ರಲ್ಲಿ ಸಹಕಾರ ಸಚಿವರಾಗಿದ್ದ ಕೆ.ಎಚ್.ರಂಗನಾಥ್ ಅವರು ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದರು.

    ವಾಣಿವಿಲಾಸ ಸಾಗರ ಜಲಾಶಯದ ಸುಂದರ ಪರಿಸರದಲ್ಲಿರುವ ಪ್ರವಾಸಿ ಮಂದಿರಕ್ಕೆ ಮೂರು ವರ್ಷಗಳಿಂದ ಬೇಡಿಕೆ ಹೆಚ್ಚಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
    ಪರಶುರಾಮ್, ಜಲಾಶಯದ ಇಂಜಿನಿಯರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts