More

    ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ, ಬೆಳೆ ಉಳಿಸಿ

    ಹಿರಿಯೂರು: ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಜ.31 ರೊಳಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಹೇಳಿದರು.

    ನಗರದ ವೀರಶೈವ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ಶತಮಾನದ ಇತಿಹಾಸವಿರುವ ವಿವಿ ಸಾಗರ 89 ವರ್ಷದ ನಂತರ ಭರ್ತಿಯಾಗಿ ಕೋಡಿ ಬಿದ್ದಿದೆ, ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಅಡಕೆ, ತೆಂಗು, ಬಾಳೆ, ಪಪ್ಪಾಯ ಇತರೆ ತೋಟಗಾರಿಕೆ ಬೆಳೆಗಳಿಗೆ ನೀರು ಬೇಕಾಗಿದೆ.

    ಬೇಸಿಗೆ-ತಾಪಮಾನ ಏರಿಕೆಯಾಗಿ ಬೆಳೆಗಳು ಒಣಗುತ್ತಿವೆ. ವರ್ಷದಲ್ಲಿ ಯಾವ ಸಮಯದಲ್ಲಿ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಹರಿಸುವುದರ ಕುರಿತು ಕ್ಯಾಲೆಂಡರ್ ಪ್ರಕಟಿಸುವಂತೆ ನೀರಾವರಿ ಇಲಾಖೆಗೆ ಮನವಿ ಮಾಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ದೂರಿದರು.

    ನೀರಾವರಿ ಹೋರಾಟ ಸಮಿತಿ ಸಂಚಾಲಕ ಎಸ್.ಬಿ.ಶಿವಕುಮಾರ್ ಮಾತನಾಡಿ, ಧರ್ಮಪುರ ಫೀಡರ್ ನಾಲೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ್ದ ಸಿಎಂ ಬೊಮ್ಮಾಯಿ, ವಿವಿ ಸಾಗರಕ್ಕೆ 5 ಟಿಎಂಸಿ ಅಡಿ ನೀರು ಮಂಜೂರು-ಸಕ್ಕರೆ ಕಾರ್ಖಾನೆ ಮರು ಆರಂಭ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಕಾರ್ಯರೂಪಕ್ಕೆ ಬರುವ ಸೂಚನೆ ಕಾಣುತ್ತಿಲ್ಲ ಎಂದು ಬೇಸರಿಸಿದರು.

    ವರ್ಷದಲ್ಲಿ ಐದು ಬಾರಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಕ್ಯಾಲೆಂಡರ್ ಪ್ರಕಟ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತ ಪೂರ್ಣಗೊಳಿಸಿ ವಿವಿ ಸಾಗರಕ್ಕೆ 5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ವಿವಿ ಸಾಗರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಸಿದ್ದರಾಮಣ್ಣ, ವಕೀಲ ಸುರೇಶ್, ಶ್ರೀನಿವಾಸ್, ನಾರಾಯಣಾಚಾರ್, ಶಿವಣ್ಣ, ಮಂಜುನಾಥ್, ರಾಜೇಂದ್ರನ್, ಮೂಡಲಗಿರಿಯಪ್ಪ, ವಿಶ್ವನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts