More

    ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಆದ್ಯತೆ

    ಹಿರಿಯೂರು: ತಾಲೂಕಿನ ಶೈಕ್ಷಣಿಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಹೇಳಿದರು.

    ತಾಲೂಕಿನ ಜೆ.ಜಿ.ಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 1.20 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ಸರ್ಕಾರಿ ಶಾಲೆಗಳ ಮೂಲ ಸೌಕರ್ಯಕ್ಕೆ ಕಳೆದ ಎರಡು ವರ್ಷದಲ್ಲಿ 10 ಕೋಟಿ ರೂ. ಅನುದಾನ ನೀಡಿದ್ದು, ಗ್ರಾಮೀಣ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಕಲಿಕಾ ಪೂರಕ ವಾತಾವರಣ ನಿರ್ಮಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

    ಶಾಲೆಗಳ ದುರಸ್ತಿ: ತಾಲೂಕಿನ ವಿವಿಧೆಡೆ ಶಿಥಿಲಗೊಂಡಿರುವ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಿದ್ದು, ಕುಡಿವ ನೀರು, ಶಾಲಾ ಕಾಂಪೌಂಡ್, ಉದ್ಯಾನವನ, ಶೌಚಗೃಹ, ಗ್ರಂಥಾಲಯ ಸೇರಿ ವಿದ್ಯಾರ್ಥಿ ಸ್ನೇಹಿ ಶಾಲೆಯನ್ನಾಗಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

    ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಮೂಲಕ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

    ಆಧುನಿಕ ಯುಗದಲ್ಲಿ ವಿದ್ಯೆಯೇ ನಿಜವಾದ ಸಂಪತ್ತು. ಇದನ್ನು ಪಾಲಕರು ಅರಿಯಬೇಕು. ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಶಿಕ್ಷಕರು ನಿತ್ಯ ಅಧ್ಯಯನ ಮಾಡಬೇಕು ಎಂದರು.

    ತಹಸೀಲ್ದಾರ್ ಸತ್ಯನಾರಾಯಣ, ಜಿಪಂ ಸದಸ್ಯ ಪಾಪಣ್ಣ, ತಾಪಂ ಸದಸ್ಯ ಜಯರಾಮಯ್ಯ, ಬಿಇಒ ರಾಮಯ್ಯ, ಅಕ್ಷರ ದಾಸೋಹ ಅಧಿಕಾರಿ ನಾಗರಾಜಾಚಾರ್, ಶಶಿಧರ್ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ದ್ಯಾಮಣ್ಣ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts