More

    ಸೂರ್ಯಕಿರಣ ಆಧಾರಿತ ಕೃಷಿ ಪದ್ಧತಿ ಲಾಭದಾಯಕ

    ಹಿರಿಯೂರು: ಸೂರ್ಯನ ಕಿರಣಗಳ ಸದ್ಬಳಕೆ ಮಾಡಿಕೊಂಡು ಬೇಸಾಯ ಮಾಡಿದರೆ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಲಾಭದಾಯಕ ಕೃಷಿ ಮಾಡಬಹುದು ಎಂದು ಮೈಸೂರಿನ ಕೃಷಿಕ ಹಾಗೂ ಲೇಖಕ ಟಿ.ಜಿ.ಎಸ್ ಅವಿನಾಶ್ ಅಭಿಪ್ರಾಯಪಟ್ಟರು.

    ಪ್ರವಾಸಿಮಂದಿರದಲ್ಲಿ ಮಂಗಳವಾರ ಉಳುಮೆ ಪ್ರತಿಷ್ಠಾನ ಹಾಗೂ ಹಿರಿಯ ರೈತರು ಮತ್ತು ತಜ್ಞರ ಸಹಯೋಗದಲ್ಲಿ ಆಯೋಜಿಸಿದ್ದ ಬೆಳಕಿನ ಬೇಸಾಯ- ಕೃಷಿ ಪದ್ಧತಿಯ ಕಾರ್ಯಾಗಾರದಲ್ಲಿ ಮಾತನಾಡಿದರು.

    ಈ ಪದ್ಧತಿಯಲ್ಲಿ ಕೃಷಿ ಮಾಡಿದರೆ ಒಂದು ಎಕರೆ ಪ್ರದೇಶದಲ್ಲಿ ವಾರ್ಷಿಕ ಸುಮಾರು 22 ಸಾವಿರ ಕೆ.ಜಿ. ಆಹಾರ ಧಾನ್ಯಗಳನ್ನು ಬೆಳೆಯಬಹುದು ಎಂದರು. ಉತ್ತಮ ಆಹಾರ ಬೆಳೆಗಳನ್ನು ಬೆಳೆಯಬೇಕಾದರೆ ಅಂದಾಜು 15-35ಡಿಗ್ರಿ ಸೆಲ್ಶಿಯಸ್ ತಾಪಮಾನ ಅವಶ್ಯಕ. ಆದರೆ, ಪ್ರಸ್ತುತ 40 ಡಿಗ್ರಿ ಸೆಲ್ಶಿಯಸ್‌ಗೂ ಹೆಚ್ಚಿದೆ. ಇಂತಹ ಸಮಯದಲ್ಲಿ ಸೂರ್ಯಕಿರಣಗಳನ್ನು ಪೂರ್ಣಪ್ರಮಾಣದಲ್ಲಿ ಗಣನೆಗೆ ತಗೆದುಕೊಂಡರೆ ಕೃಷಿಕನ ಆರ್ಥಿಕತೆ ಹೆಚ್ಚಿಸಲು ಅನುಕೂಲವಾಗುತ್ತದೆ. ಇದು ಸಾಧ್ಯವಾಗಲು ಒಂದು ಎಕರೆಯಲ್ಲಿ 1,500 ಮರ ನೆಡಬಹುದಾಗಿದೆ. ಇದು ಪ್ರಕೃತಿದತ್ತವಾಗಿ ರೋಗರುಜಿನಗಳನ್ನು ತಡೆಗಟ್ಟುವ ಜತೆಗೆ ಭೂಮಿಯ ಫಲವತ್ತತೆ ಕಾಪಾಡುತ್ತದೆ ಎಂದರು.

    ಕೃಷಿ ಕಾರ್ಯಾಗಾರ ನಡೆಸುವ ಜತೆಗೆ ಈ ವರ್ಷ ರಾಜ್ಯದ 15ಜಿಲ್ಲೆಗಳಲ್ಲಿ ಒಂದು ಎಕರೆ ಪ್ರದೇಶದಲ್ಲಿ ಆಹಾರ ಬನದ ಮಾದರಿ ತೋಟ ನಿರ್ಮಿಸುವ ಗುರಿ ಹೊಂದಿದ್ದು, ಮಾದರಿ ತೋಟ ನಿರ್ಮಿಸಲು ಈಗಾಗಲೇ ಹಲವು ರೈತರು ಮುಂದೆ ಬಂದಿದ್ದಾರೆ ಎಂದರು.

    ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ಕೆ.ಸಿ.ಹೊರಕೇರಪ್ಪ, ದಸ್ತಗಿರಿಸಾಬ್, ಶಿವಕುಮಾರ್, ಆರ್.ಚೇತನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts