More

    ವಿವಿ ಸಾಗರದಿಂದ ಸುವರ್ಣಮುಖಿ ನದಿಗೆ ನೀರು

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ವಿವಿ ಸಾಗರ ಜಲಾಶಯದಿಂದ ಸುವರ್ಣಮುಖಿ ನದಿಗೆ 0.1 ಟಿಎಂಸಿ ಅಡಿ ನೀರು ಹರಿಸಲು ಸರ್ಕಾರ ಆದೇಶಿಸಿದ್ದು, ನದಿ ಪಾತ್ರದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

    ವಿವಿ ಸಾಗರದ ಬಲ ದಂಡೆ ನಾಲೆಯ ಮೂಲಕ ಕುಂದಲಗುರ ಗ್ರಾಮದ ಬಳಿ ನಿರ್ಮಿಸಿರುವ ಬ್ಯಾರೇಜ್‌ನಿಂದ ಸುವರ್ಣಮುಖಿ ನದಿಗೆ ನೀರು ಹರಿಯಲಿದೆ. ವೇದಾವತಿ ನದಿ-ಸುವರ್ಣಮುಖಿ ನದಿಗೆ ನೀರು ಹರಿಸುವುದರಿಂದ ನದಿಯ ಜೀವಂತಿಕೆ ಕಾಪಾಡುವುದರ ಜತೆಗೆ ನದಿ ಪಾತ್ರದ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿ, ವರ್ಷ ಪೂರ್ತಿ ಕೃಷಿ ಚಟುವಟಿಕೆ ಜನ-ಜಾನುವಾರುಗಳ ಕುಡಿವ ನೀರಿಗೆ ಅನುಕೂಲವಾಗಲಿದೆ.

    ವಿವಿ ಸಾಗರದಿಂದ ವೇದಾವತಿ ನದಿ ಮೂಲಕ ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿಗೆ ನೀರು ಹರಿಸುತ್ತಿದ್ದು, ಸುವರ್ಣಮುಖಿ ನದಿಗೆ ನೀರು ಹರಿಸುವಂತೆ ಸ್ಥಳೀಯ ರೈತರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಶಾಸಕಿ ಕೆ.ಪೂರ್ಣಿಮಾ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ 0.1 ಟಿಎಂಸಿ ಅಡಿ ನೀರು ಹರಿಸಲು ಯಶಸ್ವಿಯಾಗಿದ್ದಾರೆ.

    ಶಿಡ್ಲಯ್ಯನಕೋಟೆ ಬ್ಯಾರೇಜ್‌ನ ಎಡ ಭಾಗದ ಪರಶುರಾಂಪುರ ಫೀಡರ್ ಗೇಟ್ ಕಾಲುವೆ ಮುಖಾಂತರ 0.03 ಟಿಎಂಸಿ ಅಡಿ ನೀರನ್ನು ರೈತರ ಜಮೀನುಗಳಿಗೆ ಹಾಗೂ ಕುಡಿವ ನೀರಿನ ಉದ್ದೇಶಕ್ಕೆ ಬಳಸಬಹುದಾಗಿದೆ.

    ವೇದಾವತಿ ನದಿಯಿಂದ ಗುರುತ್ವಾಕರ್ಷಣೆ ಕಾಲುವೆ ಮೂಲಕ ಕೆರೆಗಳಿಗೆ ನೀರು ತುಂಬಿಸಲು ನೀರಾವರಿ ಇಲಾಖೆ ಆದೇಶದಲ್ಲಿ ಸೂಚಿಸಲಾಗಿದ್ದು, ಜಲಾಶಯದ ನೀರಿನ ಲಭ್ಯತೆ ಆಧಾರದ ಮೇಲೆ ಕ್ರಮವಹಿಸಿ, ಸದರಿ ಆದೇಶ ಪ್ರಸಕ್ತ ಸಾಲಿಗೆ ಮಾತ್ರ ಅನ್ವಯಿಸಲಿದೆ.

    ಧರ್ಮಪುರ ಕೆರೆ ತುಂಬಿಸಿ: ಜಿಲ್ಲೆಯ 2ನೇ ಅತಿ ದೊಡ್ಡ ಧರ್ಮಪುರ ಕೆರೆ ದಶಕಗಳಿಂದ ನೀರಿಲ್ಲದೆ ಒಣಗಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಅಂತರ್ಜಲ ಅಪಾಯದ ಮಟ್ಟ ತಲುಪಿದೆ. ಜನ-ಜಾನುವಾರು ಹನಿ ನೀರಿಗೂ ಪರಿತಪಿಸುತ್ತಿದ್ದು, ಹೂವಿನಹೊಳೆ ಬಳಿ ಹರಿವ ಸುವರ್ಣಮುಖಿ ನದಿಯಿಂದ ನೈಸರ್ಗಿಕವಾಗಿ ಧರ್ಮಪುರ ಕೆರೆಗೆ ನೀರು ಹರಿಸಬಹುದಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಇಚ್ಛಾಶಕ್ತಿ ಪ್ರದರ್ಶಿಸಿ, ರೈತರ ಶತಮಾನದ ಕನಸನ್ನು ನನಸು ಮಾಡಬೇಕಾಗಿದೆ.

    ಶಾಸಕಿ ಕೆ.ಪೂರ್ಣಿಮಾ ಹೇಳಿಕೆ: ಹಿರಿಯೂರು ತಾಲೂಕಿನ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಿಎಂ ಬಿಎಸ್‌ವೈ ಅವರು ಪೂರಕವಾಗಿ ಸ್ಪಂದಿಸಿದ್ದು, ವಿವಿ ಸಾಗರಕ್ಕೆ ಪೂರ್ಣ ಪ್ರಮಾಣದಲ್ಲಿ ಭದ್ರೆ ನೀರು ಹರಿದ ನಂತರ ತಾಲೂಕಿನ ಎಲ್ಲ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ವಿಶೇಷ ಆದ್ಯತೆ ನೀಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts