More

    ನೀರು ಕೇಳುವರು ಜಲಾಶಯ ತುಂಬಿಸಲಿ

    ಹಿರಿಯೂರು: ನೀರು ತೆಗೆದುಕೊಂಡು ಹೋಗುವ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಜಲಾಶಯ ತುಂಬಿಸುವ ಹಾಗೂ ಹೆಚ್ಚಿನ ನೀರು ಹರಿಸುವ ಕುರಿತು ಯಾರೊಬ್ಬರೂ ಸರ್ಕಾರದ ಗಮನ ಸೆಳೆಯುತ್ತಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ವಿವಿ ಸಾಗರ ಜಲಾಶಯದಿಂದ ವೇದಾವತಿಗೆ ನೀರು ಹರಿಸುತ್ತಿರುವ ಕುರಿತು ಗುರುವಾರ ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

    ವೇದಾವತಿ ನದಿಗೆ ನೀರು ಹರಿಸುತ್ತಿರುವುದು ಅವೈಜ್ಞಾನಿಕ. ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವಾಗ ಎಲ್ಲ ಇಲಾಖೆಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು ಎಂದು ತಿಳಿಸಿದರು.

    ಸರ್ಕಾರದ ಆದೇಶದಂತೆ ನೀರು ಹರಿಸಲಿ, ನಮ್ಮ ಅಭ್ಯಂತರವಿಲ್ಲ. ಆದರೆ, ನೀರು ಹರಿವಿನ ಪ್ರಮಾಣ ತಿಳಿಯುವ ಬಗ್ಗೆ ಯಾವುದೇ ಅಳತೆ ಮಾಪನ ಅಳವಡಿಸಿಲ್ಲ. ಆದೇಶ ಹೊರಡಿಸಿದ ದಿನದಿಂದಲೂ ನೀರು ಹರಿಯುತ್ತಿದೆ. ಇಲ್ಲಿಯವರೆಗೂ ಎಷ್ಟು ಪ್ರಮಾಣದಲ್ಲಿ ನೀರು ಹರಿದಿದೆ ಎಂಬ ಮಾಹಿತಿಯಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

    ಅಲ್ಲದೇ 120 ಕಿಮೀ ದೂರು ನೀರು ಹರಿಯುತ್ತಿದ್ದೂ, ಆದೇಶದಂತೆ ಎರಡು ಕ್ಷೇತ್ರಗಳಿಗೂ 0.25 ಟಿಎಂಸಿ ಅಡಿ ನೀರು ಹರಿಸಿ, ನಿಲ್ಲಿಸಿದರೆ ಮುಂದೆ 50 ಕಿಮೀ ದೂರ ನೀರು ಹರಿಯುತ್ತಲೇ ಇರುತ್ತದೆ. ಇದರಿಂದ ಡ್ಯಾಂನಲ್ಲಿನ ಹೆಚ್ಚಿನ ನೀರು ಹರಿದು ವ್ಯರ್ಥವಾಗುತ್ತದೆ. ಆದ್ದರಿಂದ ಸೋಮವಾರ ನೀರು ಹರಿಸುವುದನ್ನು ನಿಲ್ಲಿಸಿ, ಇಲ್ಲವೇ ಸರಿಯಾದ ಅಳತೆ ಮಾಪನ ಅಳವಡಿಸಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

    ರೈತ ಮುಖಂಡ ಸಿದ್ದರಾಮಣ್ಣ ಮಾತನಾಡಿ, ತಾಲೂಕಿನ ನಾನಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಎಲ್ಲ ಹಳ್ಳಿಗಳಿಗೂ ಜಲಾಶಯದ ನೀರು ಕೊಡಬೇಕು ಎಂದರು.

    ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ. ಸಿಪಿಐ ರಾಘವೇಂದ್ರ, ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ದಸ್ತಗೀರ್‌ಸಾಬ್, ಸಿದ್ದಣ್ಣ ಇತರರಿದ್ದರು.

    ಪ್ರತಿಭಟನೆಯ ಎಚ್ಚರಿಕೆ: ಚಳ್ಳಕೆರೆ ಹಾಗೂ ಮೊಳಕಾಲ್ಮುರು ಕ್ಷೇತ್ರದ ಗಡಿಭಾಗಗಳಲ್ಲಿ ಗೇಜ್ ಹಾಕಿ ಆದೇಶದಂತೆ ನೀರು ಹರಿಸಿ ನಿಲ್ಲಿಸಬೇಕು. ನೀರು ಪೋಲಾಗದಂತೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಮೇ 17ರ ಲಾಕ್‌ಡೌನ್ ನಂತರ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.

    ಸರ್ಕಾರದ ಆದೇಶ ಪಾಲನೆ ನಮ್ಮ ಕರ್ತವ್ಯ: ಸರ್ಕಾರದ ಆದೇಶದಂತೆ ನೀರು ಹರಿಸುವುದು, ನಿಲ್ಲಿಸುವುದು ನಮ್ಮ ಕರ್ತವ್ಯ. ಈಗಾಗಲೇ 0.54 ಟಿಎಂಸಿ ಅಡಿ ನೀರು ಹರಿದಿದೆ. ಇನ್ನೂ ಆದೇಶದ ಪ್ರಕಾರ 0.4 ಟಿಎಂಸಿ ಹರಿಸಬೇಕಾಗುತ್ತದೆ. ಚಳ್ಳಕೆರೆ ಗಡಿಭಾಗದಿಂದ ಮೊಳಕಾಲ್ಮೂರು ಕ್ಷೇತ್ರದ ಹಳ್ಳಿಗಳಿಗೆ 0.25 ಟಿಎಂಸಿ ಅಡಿ ನೀರು ಹರಿಸಲಾಗುತ್ತದೆ. ಪ್ರಸ್ತುತ ಡ್ಯಾಂನಲ್ಲಿ 95 ಅಡಿ ನೀರು ಸಂಗ್ರಹವಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಚಂದ್ರಹಾಸ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts