More

    ನೇರ ರೈಲು ಮಾರ್ಗಕ್ಕೆ ಭೂ ಸ್ವಾಧೀನ

    ಹಿರಿಯೂರು: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಪ್ರಚುರಪಡಿಸುವ ಉದ್ದೇಶದಿಂದ ತಾಲೂಕಿನ ಆದಿವಾಲದಲ್ಲಿ ಮಂಗಳವಾರ ಸಭೆ ಜರುಗಿತು.

    ಭೂ ಸ್ವಾಧೀನ ಕುರಿತು ಸಮರ್ಪಕ ಮಾಹಿತಿ ನೀಡಬೇಕು ಹಾಗೂ ತೋಟಗಾರಿಕೆ ಜಮೀನುಗಳಿಗೆ ಹೆಚ್ಚು ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.

    ಕರಿಯಾಲ ಗ್ರಾಮದಿಂದ ಆರಂಭವಾಗಿ ಪಾಲವ್ವನಹಳ್ಳಿ ವರೆಗೆ 55.06 ಕಿಮೀ ವ್ಯಾಪ್ತಿಯಲ್ಲಿನ 19 ಹಳ್ಳಿಗಳ 950 ಕುಟುಂಬಗಳು ಭೂ ಬಾಧಿತವಾಗಲಿದ್ದು, ಉಪನೋಂದಣಿ ಕಚೇರಿಯಲ್ಲಿ ದಾಖಲಾಗಿರುವ ದರಕ್ಕೆ ಅನ್ವಯಿಸುವಂತೆ ಪರಿಹಾರ ನೀಡಲಾಗುವುದು. ಆದರೆ, ಕೆಲವು ಕಡೆ ಈ ಮೊತ್ತದಲ್ಲಿ ವ್ಯತ್ಯಾಸಗಳಿದ್ದು, ಸೂಕ್ತ ಮಾನದಂಡ ಅನುಸರಿಸಲಾಗುವುದು ಎಂದು ಅಪಾರ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

    ಗಿಡ, ಮರ ಹಾಗೂ ತೋಟಗಾರಿಕೆ ಬೆಳೆಗಳಿಗೆ ಪ್ರತ್ಯೇಕವಾಗಿ ಪರಿಹಾರ ನೀಡಲಾಗುವುದು. ಭೂ ಬಾಧಿತ ವ್ಯಾಪ್ತಿಯಲ್ಲಿನ ಜಮೀನುಗಳಲ್ಲಿ ಸ್ವಾಧೀನ ಪ್ರಕ್ರಿಯೆಗೆ ಒಳಪಡುವ ಕಟ್ಟಡಗಳ ಮೌಲ್ಯವನ್ನು ಲೋಕೋಪಯೋಗಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಬೆಳೆಗಳ ಮೌಲ್ಯದ ಬಗ್ಗೆ ನಿರ್ಧರಿಸಲಾಗುವುದು.

    ಸೂಕ್ತ ಕಾನೂನಾತ್ಮಕ ಪರಿಹಾರದಿಂದ ರೈತರು ವಂಚಿತರಾಗದಂತೆ ಕರಡು ಪ್ರತಿಯನ್ನು ತಯಾರಿಸಿದ್ದು, ಅಧಿಸೂಚನೆ ನಂತರದ ಮೂರು ವರ್ಷದ ಮಾರುಕಟ್ಟೆ ಮೌಲ್ಯಕ್ಕಿಂತ ನಾಲ್ಕು ಪಟ್ಟು ಪರಿಹಾರ ನೀಡಲಾಗುವುದು. ಶೇ.50ಕ್ಕಿಂತ ಹೆಚ್ಚು ಜಮೀನು ಕಳೆದು ಕೊಳ್ಳುವ ರೈತರು ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡಿದರೆ 5 ಲಕ್ಷ ರೂ. ಹೆಚ್ಚುವರಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಎಸಿ ಪ್ರಸನ್ನ ಮಾತನಾಡಿ, ಎಲ್ಲ ಹಂತದಲ್ಲೂ ರೈತರ ಸಮ್ಮುಖದಲ್ಲಿ ಯೋಜನೆ ಜಾರಿಗೆ ನಿರ್ಧಾರ ಮಾಡಲಾಗುವುದು. ಅನುಮಾನಗಳಿದ್ದಲ್ಲಿ ಇಲಾಖೆ ಅಧಿಕಾರಿಗಳ ಜತೆ ಮುಕ್ತವಾಗಿ ಚರ್ಚಿಸಬಹುದು. 2013ರ ನಂತರ ರಚನೆಯಾಗಿರುವ ಭೂಸ್ವಾಧೀನ ನಿಯಮದಡಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು.

    ರಾಷ್ಟ್ರೀಯ ಹೆದ್ದಾರಿ ಅನುಷ್ಠಾನದ ಸಂದರ್ಭದಲ್ಲಿ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿತ್ತು. ಈ ಯೋಜನೆಯಲ್ಲಿ ಅಂತಹ ತಾರತಮ್ಯ ಮರುಕಳಿಸಬಾರದು ಎಂದು ರೈತ ಮುಖಂಡರು ಆಗ್ರಹಿಸಿದರು.

    ತಹಸೀಲ್ದಾರ್ ಸತ್ಯನಾರಾಯಣ, ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ, ರೈಲ್ವೆ ಅಧಿಕಾರಿ ಶ್ರೀಧರ್, ಗ್ರಾಪಂ ಉಪಾಧ್ಯಕ್ಷ ಕೃಷ್ಣಾನಾಯ್ಕಾ, ಜಬೀವುಲ್ಲಾ, ರೈತ ಮುಖಂಡರಾದ ಎಸ್.ರಂಗಯ್ಯ, ಗೋಪಾಲಪ್ಪ, ರಾಮ್‌ಕುಮಾರ್, ದೇವೇಂದ್ರಪ್ಪ, ರಾಮಣ್ಣ ನಿರಂಜನ್ ಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts