More

    ಮಾ.6ಕ್ಕೆ ಹರಿಯಲಿದೆ ನಾಲೆಗಳಿಗೆ ನೀರು

    ಹಿರಿಯೂರು: ರೈತರ ಆಶಯದಂತೆ ವಾಣಿವಿಲಾಸ ಸಾಗರ ಎಡ-ಬಲದಂಡೆ ನಾಲೆಗಳಿಗೆ ಮಾ.6ರಿಂದ 30 ದಿನಗಳ ಕಾಲ ನೀರು ಹರಿಸಲು ಜಿಲ್ಲಾಡಳಿತ ತೀರ್ಮಾನ ತೆಗೆದುಕೊಂಡಿದೆ.

    ಈ ಸಂಬಂಧ ವಿವಿ ಸಾಗರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಆದೇಶಿಸಿದ್ದಾರೆ. ಈ ಮೂಲಕ ಕಳೆದ ಒಂದು ವಾರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಕುರಿತು ಜಿಲ್ಲಾಡಳಿತ-ರೈತರ ನಡುವಿನ ತಿಕ್ಕಾಟಕ್ಕೆ ತೆರೆ ಬಿದ್ದಿದೆ.

    ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಂಬಂಧಿತ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮವಾಗಿ ಮಾ.6ರಂದು ನೀರು ಹರಿಸಬಹುದು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನಾಲೆಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಮಾ.5ರೊಳಗೆ ಕಾಮಗಾರಿ ಪೂರ್ಣಗೊಳ್ಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

    ದಶಕದ ಕನಸು ನನಸು: ಭದ್ರೆಗಾಗಿ ದಶಕಗಳಿಂದ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದು ಅನ್ನದಾತರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ವಿವಿ ಸಾಗರ ಒಡಲು ಸೇರಿರುವ ಭದ್ರೆ, ವೇದಾವತಿ ಜತೆಗೂಡಿ ಬಯಲು ಸೀಮೆಯ ಭೂಮಿ ಸ್ಪರ್ಶಿಸುವ ಅಮೃತಗಳಿಗೆ ಕಣ್ತುಂಬಿಕೊಳ್ಳಲು ರೈತರು ಕಾತುರಾಗಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ಶಾಸಕರಾದ ಕೆ.ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ಜಿ.ಎಚ್.ತಿಪ್ಪಾರೆಡ್ಡಿ, ಚಂದ್ರಪ್ಪ, ಸಂಸದ ಎ.ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ.

    ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನ ರೈತರು ಜಿಲ್ಲಾಡಳಿತದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿ, ತಾಲೂಕು ಕಚೇರಿ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದರು.

    ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿಕೆ: ಮಾ.6ರಂದು ಅಚ್ಚುಕಟ್ಟು ಪ್ರದೇಶಕ್ಕೆ ವಿವಿ ಸಾಗರ ನೀರು ಹಾಯಿಸುವುದು ನೂರಕ್ಕೆ ನೂರು ಸತ್ಯ. ಶತಮಾನದ ಇತಿಹಾಸವಿರುವ ಜಲಾಶಯದ ಬಳಿ ಹೋಮ-ಹವನ ಗಂಗಾಪೂಜೆ ನೆರವೇರಿಸಲಾಗುವುದು. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಆಹ್ವಾನಿಸಲಾಗಿದೆ.

    ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಹೇಳಿಕೆ: ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದು, ಜಿಲ್ಲಾಡಳಿತದ ಆದೇಶ ರೈತರಲ್ಲಿ ಸಂತಸ ತಂದಿದೆ. 30 ದಿನಗಳ ಕಾಲ ನಾಲೆಗಳಿಗೆ ನೀರು ಹರಿಯಲಿದ್ದು, ರೈತರು ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು.

    ಜಲಾಶಯದ ಬಳಿ ಹೋಮ-ಹವನ: ಈ ಬಾರಿ ವರುಣನ ಕೃಪೆ ಹಾಗೂ ಭದ್ರಾ ನೀರು ಹರಿದಿರುವುದರಿಂದ ಜಲಾಶಯದಲ್ಲಿ 102 ಅಡಿ ನೀರು ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಮಾ.6ರಂದು ವಿವಿ ಸಾಗರ ಜಲಾಶಯದ ಬಳಿ ಹೋಮ-ಹವನ, ಗಣಪತಿ ಪೂಜೆ, ರಕ್ಷಾಬಂಧ, ಪವಮಾನ ಅಭಿಷೇಕ, ಮಹಾ ಗಣಪತಿ ಹೋಮ, ಚಂಡಿಕಾ ಹೋಮ, ಮಹಾ ಪೂರ್ಣಾಹುತಿ, ಕಣಿವೆ ಮಾರಮ್ಮ ದೇವಿ, ರಂಗನಾಥ ಸ್ವಾಮಿಗೆ ವಿಶೇಷ ಪೂಜೆ, ಅನ್ನ ಸಂತರ್ಪಣೆ ಜರುಗಲಿದೆ. ಈ ಪೂಜಾ ಕಾರ್ಯಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಆಹ್ವಾನಿಸಲಾಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಕಾಮಗಾರಿಗೆ ವೇಗ ನೀಡುವುದು, ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts