More

    ಅಜ್ಜಂಪುರ ರೈಲ್ವೆ ಸೇತುವೆ ನಿರ್ಮಾಣ ಶೀಘ್ರ ಪೂರ್ಣ

    ಹಿರಿಯೂರು: ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರದ ಇಚ್ಛಾಶಕ್ತಿ, ಸಂಸದ, ಶಾಸಕರ ಹೋರಾಟದ ಫಲವಾಗಿ ಅಜ್ಜಂಪುರ ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು, ಭದ್ರಾ ನೀರು ವಿವಿ ಸಾಗರಕ್ಕೆ ಹರಿಯುವುದು ಖಚಿತವಾಗಿದೆ.

    ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಯೋಜನೆ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ರೈಲ್ವೆ ಕಾಮಗಾರಿ ವೀಕ್ಷಿಸಿದರು.

    ಅಜ್ಜಂಪುರದ ಬಳಿ ರೈಲು ಓಡಾಟಕ್ಕೆ ಪರ್ಯಾಯ ಹಳಿ ಜೋಡಣೆ ಪೂರ್ಣಗೊಂಡಿದ್ದು, ಪ್ರಯೋಗಾರ್ಥ ರೈಲು ಓಡಿಸಲಾಗುತ್ತದೆಂದು ವೀಕ್ಷಿಸಲು ತೆರಳಿದ್ದ ರೈತರಿಗೆ ಅಚ್ಚರಿ ಕಾದಿತ್ತು. ಅಲ್ಲಿ ಮಂಗಳವಾರದಿಂದಲೇ ರೈಲು ಓಡಾಟ ಆರಂಭಗೊಂಡಿದ್ದು, ರೈಲು ಹಳಿ ಕೆಳಗೆ ಬಾಕಿ ಇದ್ದ ನಾಲೆ ನಿರ್ಮಾಣದ ಕೆಲಸ ಭರದಿಂದ ನಡೆದಿತ್ತು.

    ಜೂನ್ 12ರೊಳಗೆ ಸಿಮೆಂಟ್ ಸ್ಲ್ಯಾಬ್‌ನ ನಾಲೆ ಕೆಲಸ ಮುಗಿಯಲಿದೆ. ಅಕಸ್ಮಾತ್ ಮಳೆ ಬಂದರೂ ತೊಂದರೆ ಆಗದು ಎಂದು ರೈಲ್ವೆ ಇಲಾಖೆ ಸಹಾಯಕ ಇಂಜಿನಿಯರ್ ಮುರಳಿ ಮಾಹಿತಿ ನೀಡಿದರು.

    ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿ, ಪ್ರಸ್ತುತ ಮುಂಗಾರಿನಲ್ಲಿ ವಾಣಿ ವಿಲಾಸಕ್ಕೆ ನೀರು ಬರುವ ಬಗ್ಗೆ ಇದ್ದ ಸಂಶಯ ನಿವಾರಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಸಮಿತಿ ಕಾರ್ಯಾಧ್ಯಕ್ಷ ಎಚ್.ಆರ್.ತಿಮ್ಮಯ್ಯ ಮಾತನಾಡಿ, ನೀರು ಹರಿಯುವಿಕೆಗೆ ದೊಡ್ಡ ಅಡ್ಡಿಯಾಗಿದ್ದ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಮೂರ‌್ನಾಲ್ಕು ದಿನದಲ್ಲಿ ಮುಗಿಯಲಿದೆ ಎಂದು ಹೇಳಿದರು.

    ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಸಿದ್ದರಾಮಣ್ಣ, ಭದ್ರೆಯ ನೀರು ಹರಿಸಲು ತೋರಿಸಿರುವ ಬದ್ಧತೆಯನ್ನು ಸಂಸದ ನಾರಾಯಣಸ್ವಾಮಿ ಅವರು, ರೈಲು ಮಾರ್ಗ ನಿರ್ಮಾಣ, ಧರ್ಮಪುರ ಫೀಡರ್ ನಾಲೆ ಅನುಷ್ಠಾನಕ್ಕೆ ಪ್ರಯತ್ನ ನಡೆಸಬೇಕು ಎಂದರು.

    ರೈತ ಮುಖಂಡರಾದ ಆರನಕಟ್ಟೆ ಶಿವಕುಮಾರ್, ಬಬ್ಬೂರು ಸುರೇಶ್, ಉದಯ್‌ಕುಮಾರ್, ಶ್ರೀನಿವಾಸ್, ಬಿ.ರಾಜಶೇಖರ್, ಆರ್.ಕೆ.ಗೌಡ, ಎಲ್.ಆನಂದಶೆಟ್ಟಿ, ಶಫೀವುಲ್ಲಾ ಸಾಬ್, ವಕೀಲ ಮಾರಿಕಣಿವೆ ವಿಶ್ವನಾಥ್, ರಾಮಚಂದ್ರ ಇತರರಿದ್ದರು.

    ಪರ್ಯಾಯ ಮಾರ್ಗದ ಮೂಲಕ ವೇದಾವತಿ ನದಿಗೆ ನೀರು ಸೇರುವ ಹಳ್ಳದಲ್ಲಿ ಹೂಳು ತೆಗೆಸುವ ಕಾರ್ಯವೂ ಭರದಿಂದ ನಡೆದಿದ್ದು, ಹಿಂದಿನ ವರ್ಷಕ್ಕಿಂತ ವಾಣಿವಿಲಾಸಕ್ಕೆ ನೀರು ಬರುವ ವಿಶ್ವಾಸ ಹೆಚ್ಚಾಗಿದೆ.
    ಎಚ್.ಆರ್.ತಿಮ್ಮಯ್ಯ
    ರೈತರ ಹಿತರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts