More

    ಭಕ್ತರ ಇಷ್ಟಾರ್ಥ ನೆರವೇರಿಸುವ ಹಿರೇಕೆರೂರ ಶ್ರೀ ದುರ್ಗಾದೇವಿ

    ಹಿರೇಕೆರೂರ: ಪಟ್ಟಣದ ಹಿರಿದಾದ ಕೆರೆಯ ಏರಿಯ ಮೇಲೆ ನೆಲೆಸಿರುವ ಶಕ್ತಿರೂಪಿಣಿ ದುರ್ಗಾದೇವಿ ರಾಜ್ಯ, ಹೊರ ರಾಜ್ಯಗಳಲ್ಲೂ ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾಳೆ. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತ ದುಷ್ಟರ ಶಿಕ್ಷಕಿ, ಶಿಷ್ಟರ ರಕ್ಷಕಿಯಾಗಿ ನೆಲೆಸಿದ್ದಾಳೆ.

    ತಾಲೂಕಿನಲ್ಲಿ 7 ತುಂಬುಗಳಲ್ಲಿ ನಿರ್ವಿುತಗೊಂಡ ದುರ್ಗಾದೇವಿ ಕೆರೆ, ಈ ಹಿಂದೆ 9 ನೂರು ಎಕರೆ ಪ್ರದೇಶ ಹೊಂದಿತ್ತು ಎನ್ನಲಾಗುತ್ತಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಒಟ್ಟು 560 ಎಕರೆ ಪ್ರದೇಶ ವಿಸ್ತೀರ್ಣವಿದ್ದು, ತಾಲೂಕಿನಲ್ಲಿ ಅತಿ ಹಿರಿಯದಾದ ಕೆರೆ, ಹಿರೇಕೆರೆ ಎಂದು ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಹಿರೇಕೆರೂರು ಎಂಬ ಹೆಸರು ಪ್ರಚಲಿತವಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ.

    ಈ ಕೆರೆ ಒಮ್ಮೆ ಭರ್ತಿಯಾದರೆ ಕನಿಷ್ಠ ಮೂರು ವರ್ಷಗಳ ಕಾಲ ಬತ್ತುವುದಿಲ್ಲ. ಸುತ್ತಮುತ್ತಲಿನ ಕನಿಷ್ಠ ಸಾವಿರಾರು ಹೆಕ್ಟೇರ್ ಜಮೀನಿಗೆ ನೀರುಣಿಸುತ್ತದೆ. ಸುತ್ತಮುತ್ತಲಿನ ಸುಮಾರು 40 ಹಳ್ಳಿಗಳ ಅಂತರ್ಜಲ ಹೆಚ್ಚಾಗುತ್ತದೆ. ಇದು ಮಳೆಗಾಲದಲ್ಲಿ ಭರ್ತಿಯಾಗಬೇಕಾದರೆ 9 ಕೆರೆಗಳಿಂದ ನೀರು ಹರಿದು ಬರಬೇಕಾಗಿದೆ. ಈ ಬೃಹದಾಕಾರದ ಕೆರೆಯ ದಡದ ಮೇಲೆ ಶ್ರೀ ದುರ್ಗಾದೇವಿ ವಿರಾಜಮಾನಳಾಗಿದ್ದಾಳೆ.

    ದುರ್ಗಾದೇವಿಯ ಚರಿತ್ರೆ:

    ದುರ್ಗಾದೇವಿ ಇಲ್ಲಿಗೆ ಬಂದು ನೆಲೆಸಿದ ಬಗ್ಗೆ ಕುತೂಹಲಕರ ಕಥೆ ಇದೆ. ನೂರಾರು ವರ್ಷಗಳ ಹಿಂದೆ ಇಲ್ಲಿಂದ 20 ಕಿ.ಮೀ. ದೂರದ ಬಂದಳಿಕೆ ಗ್ರಾಮದ ಸಮೀಪ ಅಕ್ಕ ಬನಶಂಕರಿ ದೇವಿಯ ಜತೆಗೆ ಕೆರೆಯ ಏರಿಯ ಮೇಲೆ ಪ್ರತಿಷ್ಠಾಪನೆಗೊಂಡಿದ್ದ ದುರ್ಗಾದೇವಿಗೆ ಭಕ್ತರು ಮಾಂಸಾಹಾರ ನೈವೇದ್ಯ ನೀಡುತ್ತಿದ್ದರು. ಇದನ್ನು ಬನಶಂಕರಿ ಆಕ್ಷೇಪಿಸಿದಾಗ ಭಕ್ತರ ನೈವೇದ್ಯವನ್ನು ತಿರಸ್ಕರಿಸಲು ಆಗದೆ ದುರ್ಗಾದೇವಿಒಂದು ದಿನ ಯುವತಿಯೊಬ್ಬಳ ಮೈಯಲ್ಲಿ ಬಂದು ತನ್ನನ್ನು 7 ತೂಬುಗಳಿರುವ ಕೆರೆಯ ಏರಿಯ ಮೇಲೆ ಪ್ರತಿಷ್ಠಾಪನೆ ಮಾಡುವಂತೆ ತಿಳಿಸುತ್ತಾಳೆ. ಈ ಬಗ್ಗೆ ಗ್ರಾಮದ ಮುಖಂಡರು ರ್ಚಚಿಸಿ ಹಿರೇಕೆರೂರ ಕೆರೆಯ ಮೇಲೆ ಪ್ರತಿಷ್ಠಾಪನೆ ಮಾಡೋಣ ಎಂದು ತೀರ್ವನಿಸುತ್ತಾರೆ.

    ಅದರಂತೆ ದುರ್ಗಾದೇವಿ ಹಾಗೂ ಆಕೆಯ ಪರಿವಾರವಾಗಿರುವ ಸಾವಂತ್ರಮ್ಮ, ಮರಿಯಮ್ಮ, ಕಾಳಮ್ಮ, ದೊಣ್ಣೆಪ್ಪ ಹಾಗೂ ಸವರೆಪ್ಪ ಮೂರ್ತಿಗಳನ್ನು ಕಟ್ಟಿಗೆಯಲ್ಲಿ ನಿರ್ವಿುಸಿಕೊಂಡು ಪೂಜೆ ನೆರವೇರಿಸುತ್ತಾರೆ. ಮಂಗಳವಾರ ಬೆಳಗಿನ ಜಾವದಲ್ಲಿ ಬಾಳಂಬೀಡ ಗ್ರಾಮದ ಸಮೀಪ ಕೆರೆಯ ದಡದಲ್ಲಿ ಗಂಗಾ ಮಾತೆಗೆ ಅರ್ಪಿಸಿ ಹೋಗುತ್ತಾರೆ. ಈ ವಿಷಯ ಗ್ರಾಮದಲ್ಲಿ ಹರಡುತ್ತದೆ. ಇದೇ ವೇಳೆ ವಿಶ್ವಕರ್ಮ ಅರ್ಚಕನ ಕನಸಿನಲ್ಲಿ ಬಂದ ದುರ್ಗಾದೇವಿ ತನ್ನನ್ನು ಕೆರೆಯ ಏರಿಯ ಮೇಲೆ ಪ್ರತಿಷ್ಠಾಪನೆ ಮಾಡಬೇಕೆಂದು ಕೇಳುತ್ತಾಳೆ. ಹೀಗೆ ದೇವಿ ಬಂದು ನೆಲೆಸಿದಳು ಎಂಬ ಪ್ರತೀತಿ ಇದೆ.

    ಮರಾಠರ ಸೇನೆಯಲ್ಲಿದ್ದ ಧೋಂಡೋಷಾ ವಾಘ್ ಎಂಬಾತ ಬೂಟುಗಾಲಿನಿಂದ ದೇವಸ್ಥಾನ ಪ್ರವೇಶಿಸಿ ಅಲ್ಲಿದ್ದವರ ಮೇಲೆ ದರ್ಪ ತೋರಿದ್ದ. ಕೆಲಕ್ಷಣದಲ್ಲಿಯೇ ಅತನ ಕಣ್ಣುಗಳು ಕಾಣದಂತಾದವು. ಆತನ ಕುದುರೆಯ ಕಣ್ಣುಗಳು ಸಹ ಕಾಣದಂತಾಗಿ ದಿಕ್ಕೆಟ್ಟು ಓಡತೊಡಗಿತು. ಇದರಿಂದ ಅಫಾತಗೊಂಡ ವಾಘ್ ಈ ಬಗ್ಗೆ ವಿಚಾರಿಸಿದಾಗ ದುರ್ಗಾದೇವಿ ಮುನಿಸಿಕೊಂಡಿದ್ದರಿಂದ ಹೀಗಾಗಿದೆ ಎಂದು ಅರ್ಚಕರು ತಿಳಿಸುತ್ತಾರೆ. ಬಳಿಕ ಧೋಂಡೋಷಾ ವಾಘ್ ದೇವಿಯ ಮೊರೆ ಹೋಗುತ್ತಾನೆ. ತಕ್ಷಣದಲ್ಲಿ ಆತ ಮೊದಲಿನಂತಾಗುತ್ತಾನೆ. ದೇವಿ ಮಹಿಮೆ ತಿಳಿದ ಆತ ತನ್ನ ಕೊರಳಲ್ಲಿದ್ದ ಸರ ಹಾಗೂ ಬಂಗಾರದ ಒಡವೆಗಳನ್ನು ದೇವಿಗೆ ಅರ್ಪಿಸುತ್ತಾನೆ. ಹೀಗೆ ದುರ್ಗಾದೇವಿಯ ಕುರಿತು ಅನೇಕ ಘಟನೆಗಳು ಪ್ರಚಾರದಲ್ಲಿವೆ.

    ಬಂದಳಿಕೆಯಿಂದ ದುರ್ಗಾದೇವಿ ಇಲ್ಲಿಗೆ ಬಂದು ನೆಲೆಸಿದ್ದರಿಂದ ಆಕೆಯೊಂದಿಗೆ ಸಮಸ್ತ ಶಕ್ತಿಗಳೂ ಇಲ್ಲಿಗೆ ಬಂದಿವೆ. ಈ ಕಾರಣದಿಂದಲೇ ಹಿರೇಕೆರೂರ ಸಮೃದ್ಧವಾಗಿ ಬೆಳೆಯಲಾರಂಭಿಸಿತು. ಸ್ವಾತಂತ್ರ್ಯಾ ನಂತರದಲ್ಲಿ ತಾಲೂಕು ಕೇಂದ್ರವಾಯಿತು. ಅದಕ್ಕೂ ಮೊದಲು ಕೋಡ ಗ್ರಾಮ ತಾಲೂಕು ಕೇಂದ್ರವಾಗಿತ್ತು. ತದನಂತರ ಅದು ಇಲ್ಲಿಗೆ ಸ್ಥಳಾಂತರಗೊಂಡಿತು. ನಾಡ ಹಂಚು ಹೊದಿಸಿದ್ದ ಪುಟ್ಟ ದೇವಸ್ಥಾನ ಇಂದು ಭವ್ಯವಾಗಿ ತಲೆ ಎತ್ತಿದ್ದು, ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಸೇರಿದಂತೆ ಪಕ್ಕದ ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಸಹಿತ ವಿವಿಧ ಕಡೆಗಳಲ್ಲಿನ ಭಕ್ತರು ಆಗಮಿಸುತ್ತಾರೆ. ದುರ್ಗಾದೇವಿ ಜಾತ್ರೆಯನ್ನು ಪ್ರತಿ 3 ವರ್ಷಗಳಿಗೊಮ್ಮೆ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದ್ದು, ಫೆ. 20ರಿಂದ ಮಾ. 5ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

    ದುರ್ಗಾದೇವಿ ಬೇಡಿ ಬರುವ ಭಕ್ತರಿಗೆ ಎಂದೂ ಬರಿ ಕೈಯಲ್ಲಿ ಕಳಿಸಿಲ್ಲ, ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಪವಾಡದ ರೂಪದಲ್ಲಿ ಪರಿಹರಿಸಿದ್ದಾಳೆ. ದೇವಿಯ ಆಶೀರ್ವಾದದಿಂದ ದೇವಸ್ಥಾನಕ್ಕೆ ಭಕ್ತರು ನೀಡಿದ ಕಾಣಿಕೆಯಲ್ಲಿ ಇಲ್ಲಿಗೆ ಆಗಮಿಸುವ ಭಕ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ, ಊಟದ ಹಾಲ್, ರ್ಪಾಂಗ್ ವ್ಯವಸ್ಥೆ, ಉದ್ಯಾನ ಸೇರಿದಂತೆ ಅಗತ್ಯ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುವುದು.

    | ಜಗದೀಶ ತಂಬಾಕದ,

    ಶ್ರೀ ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಹಿರೇಕೆರೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts