More

    ಬೆಲೆ ಕಳೆದುಕೊಂಡ ಹಿಂಗಾರು ಬೆಳೆ ಸಮೀಕ್ಷೆ

    ಶ್ರವಣ್‌ಕುಮಾರ್ ನಾಳ ಪುತ್ತೂರು

    ಭತ್ತ ಬೆಳೆ ಹಾಗೂ ಬೆಳೆಗಾರರಿಗೆ ಸಹಾಯಧನ ನೀಡುವ ಉದ್ದೇಶದಿಂದ ಕೈಗೊಂಡ ಬೆಳೆ ಸಮೀಕ್ಷೆಯಲ್ಲಿ ವಿರ್ಸ್ತೀಣದ ಕೊರತೆಯಿಂದಾಗಿ ಪುತ್ತೂರು, ಕಡಬ ಹಾಗೂ ಸುಳ್ಯ ಹಿಂಗಾರು ಬೆಳೆ ರಹಿತ ತಾಲೂಕುಗಳು ಎಂಬ ವರದಿ ಸಲ್ಲಿಕೆಯಾಗಿದೆ.

    ರೈತರೇ ಮೊಬೈಲ್ ಆ್ಯಪ್ ಉಪಯೋಗಿಸಿ ಸ್ವತಂತ್ರವಾಗಿ ಹಿಂಗಾರು ಬೆಳೆ ಸಮೀಕ್ಷೆ ನಡೆಸಲು ಕೃಷಿ ಇಲಾಖೆ ಸೂಚಿಸಿತ್ತು. ಆದರೆ ಈ ಮೂರು ತಾಲೂಕುಗಳಲ್ಲಿ ಹಿಂಗಾರು ಬೆಳೆ ಸಮೀಕ್ಷೆಗೆ ಬೆಳೆ ವಿಸ್ತೀರ್ಣ ಸಾಲುತ್ತಿಲ್ಲ. ಪರಿಣಾಮ, ಹಿಂಗಾರು ಅವಧಿಯ ಬೆಳೆಗೆ ಸಹಾಯಧನ ಹಾಗೂ ಬೆಳೆಹಾನಿ ಪರಿಹಾರದಿಂದ ಈ ತಾಲೂಕುಗಳು ವಂಚಿತವಾಗುವ ಆತಂಕವಿದೆ.

    ಏನಿದು ಬೆಳೆ ಸಮೀಕ್ಷೆ?: ಸರ್ರ್ವೇ ನಂಬರ್, ಹಿಸ್ಸಾ ನಂಬರ್‌ವಾರು ಬೆಳೆ ಮಾಹಿತಿ ಸಂಗ್ರಹ ಮತ್ತು ನಿಖರ ದತ್ತಾಂಶದ ಕೊರತೆ ನಿವಾರಿಸಲು ಮೊಬೈಲ್ ಆ್ಯಪ್ ಮೂಲಕ ರೈತರೇ ಬೆಳೆ ಮಾಹಿತಿಯನ್ನು ಛಾಯಾಚಿತ್ರ ಸಹಿತ ದಾಖಲಿಸಿ, ಅಪ್‌ಲೋಡ್ ಮಾಡಲು ಸರ್ಕಾರ ವ್ಯವಸ್ಥೆ ಕಲ್ಪಿಸಿತ್ತು. ಕನಿಷ್ಠ ಬೆಂಬಲ ಬೆಲೆ ನಿಗದಿ, ಬೆಳೆ ಪರಿಹಾರ, ಬೆಳೆ ವಿಮಾ ಯೋಜನೆ, ಎನ್‌ಡಿಆರ್‌ಎ್, ಎಸ್‌ಡಿಆರ್‌ಎ್ ಅಡಿಯಲ್ಲಿ ಸಹಾಯಧನ, ಪ್ರಾಕೃತಿಕ ವಿಕೋಪ ಸಂದರ್ಭ ಬೆಳೆ ಹಾನಿ ಕುರಿತು ವರದಿ, ಹಾನಿಗೀಡಾದ ಬೆಳೆ ವಿಸ್ತೀರ್ಣದ ವಿವರ, ಅರ್ಹ ಲಾನುಭವಿಗಳನ್ನು ಗುರುತಿಸುವುದು, ಪಹಣಿ ಪತ್ರದಲ್ಲಿ ಬೆಳೆ ವಿವರ ದಾಖಲಾತಿ ಇತ್ಯಾದಿ ಈ ಸಮೀಕ್ಷಾ ವರದಿ ಆಧರಿಸಿ ಮಾಡಲಾಗುತ್ತದೆ.

    ಹಿಂಗಾರು ಬೆಳೆಗೂ ವಿಸ್ತರಣೆ: ಕೋವಿಡ್-19 ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಮುಂಗಾರು ಬೆಳೆಗೆ ಈ ಕ್ರಮ ಜಾರಿ ಮಾಡಲಾಗಿತ್ತು. ಅದನ್ನು ಹಿಂಗಾರು ಬೆಳೆಗೂ ವಿಸ್ತರಿಸಲಾಗಿತ್ತು. ರೈತರು ಹಿಂಗಾರು ಬೆಳೆ ಸಮೀಕ್ಷೆ ಮಾಡಿ, ಅಪ್‌ಲೋಡ್ ಮಾಡಲು ಡಿಸೆಂಬರ್‌ನಲ್ಲಿ 15 ದಿನಗಳ ಕಾಲಾವಕಾಶ ನೀಡಲಾಗಿತ್ತು.

    ಗುರಿ ತಲುಪಿದ ಮುಂಗಾರು ಸಮೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ ಒಟ್ಟು 9,09,656 ಕೃಷಿ ಜಮೀನುಗಳ ಸಮೀಕ್ಷೆ ಮಾಡಲಾಗಿದ್ದು, ಆ ಮೂಲಕ ಶೇ.100ರಷ್ಟು ಗುರಿ ದಾಖಲಾಗಿತ್ತು. 2,32,768 ಜಮೀನುಗಳ ಬೆಳೆ ವಿವರಗಳನ್ನು ಸ್ವತಃ ರೈತರೇ ಅಪ್‌ಲೋಡ್ ಮಾಡಿದ್ದರು. ಉಳಿದಂತೆ ಬೆಳೆ ಸಮೀಕ್ಷೆಗೆ ನಿಯೋಜಿಸಲ್ಪಟ್ಟ 876 ಮಂದಿಯ ಮೂಲಕ 6,76,889 ಜಮೀನುಗಳ ಬೆಳೆ ವಿವರವನ್ನು ಅಪ್‌ಲೋಡ್ ಮಾಡಲಾಗಿತ್ತು.

    ಸಮಸ್ಯೆ ಆಗಿರುವುದು ಎಲ್ಲಿ?: ಹಿಂಗಾರಿನಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಭತ್ತದ ಕೃಷಿ ಐದು ಹೆಕ್ಟೇರು ಮೇಲ್ಪಟ್ಟಿರುವ ಗ್ರಾಮಗಳಲ್ಲಿ ಮಾತ್ರ ಬೆಳೆ ಸಮೀಕ್ಷೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಸುಳ್ಯ, ಪುತ್ತೂರಿನ 22, ಕಡಬದಲ್ಲಿ 15 ಗ್ರಾಮಗಳನ್ನು ಗುರುತಿಸಲಾಗಿತ್ತು. ಆದರೆ ಅಲ್ಲಿ ಸಮೀಕ್ಷೆಗೆ ಪೂರಕವಾಗಿ ಯಾವುದೇ ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಐದು ಹೆಕ್ಟೇರು ಮೇಲ್ಪಟ್ಟು ಭತ್ತದ ಕೃಷಿ ಇಲ್ಲದ ಕಾರಣ ಹಿಂಗಾರು ಬೆಳೆ ರಹಿತ ತಾಲೂಕು ಎಂಬ ವರದಿ ಸಲ್ಲಿಸಲಾಗಿದೆ.

    ಕಡಬ, ಪುತ್ತೂರು, ಸುಳ್ಯ ತಾಲೂಕಿನಲ್ಲಿ ಹಿಂಗಾರು ಬೆಳೆ ಸಮೀಕ್ಷೆ ಸಂಬಂಧಿಸಿ ಸೂಚಿತ ಪ್ರಮಾಣದಷ್ಟು ಬೆಳೆ ಕಂಡು ಬಾರದ ಕಾರಣ ಅಪ್‌ಲೋಡ್ ಆಗಿಲ್ಲ. ಸಮೀಕ್ಷೆಗೆ 5 ಹೆಕ್ಟೇರು ಮೇಲ್ಪಟ್ಟು ಭತ್ತದ ಕೃಷಿ ಇರಬೇಕು. ಅಷ್ಟು ಪ್ರಮಾಣದ ಭತ್ತದ ಕೃಷಿ ಕಂಡು ಬಂದಿಲ್ಲ.
    -ನಾರಾಯಣ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts