More

    ದೇಶೀಯ ಏಕದಿನ ಕ್ರಿಕೆಟ್‌ಗೆ ಹೊಸ ಚಾಂಪಿಯನ್ ; ತಮಿಳುನಾಡು ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದ ಹಿಮಾಚಲ ತಂಡ

    ಜೈಪುರ: ಯುವ ಆಟಗಾರ ಶುಭಮ್ ಅರೋರ (136ರನ್, 131 ಎಸೆತ, 13 ಬೌಂಡರಿ, 1 ಸಿಕ್ಸರ್) ಹಾಗೂ ಅಮಿತ್ ಕುಮಾರ್ (74ರನ್, 79 ಎಸೆತ, 6 ಬೌಂಡರಿ) ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಹಿಮಾಚಲ ಪ್ರದೇಶ ತಂಡ ಪ್ರತಿಷ್ಠಿತ ದೇಶೀಯ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಡೇ ಹಂತದಲ್ಲಿ ಪಂದ್ಯಕ್ಕೆ ಮಂದ ಬೆಳಕು ಅಡ್ಡಿಯುಂಟು ಮಾಡಿದ ಹಿನ್ನೆಲೆಯಲ್ಲಿ ವಿ.ಜಯದೇವನ್ (ವಿಜೆಡಿ) ನಿಯಮದನ್ವಯ ಹಿಮಾಚಲ ತಂಡ 11 ರನ್‌ಗಳಿಂದ 5 ಬಾರಿ ಚಾಂಪಿಯನ್ ತಮಿಳುನಾಡು ತಂಡವನ್ನು ಸೋಲಿಸಿತು. ಪ್ರಸಕ್ತ ವರ್ಷ ದೇಶೀಯ ಕ್ರಿಕೆಟ್‌ನಲ್ಲಿ ಸತತ ಎರಡನೇ ಟ್ರೋಫಿ ಜಯಿಸುವ ತಮಿಳುನಾಡು ತಂಡದ ಕನಸು ಭಗ್ನಗೊಂಡಿತು. ಕಳೆದ ತಿಂಗಳು ಕರ್ನಾಟಕ ತಂಡವನ್ನು ಮಣಿಸಿ ತಮಿಳುನಾಡು ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಗೆದ್ದುಕೊಂಡಿತ್ತು.

    ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು, ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ (116ರನ್, 103 ಎಸೆತ, 8 ಬೌಂಡರಿ, 7 ಸಿಕ್ಸರ್) ಹಾಗೂ ಬಾಬಾ ಇಂದ್ರಜಿತ್ (80ರನ್, 71 ಎಸೆತ, 8 ಬೌಂಡರಿ, 1 ಸಿಕ್ಸರ್) ಜೋಡಿ 5ನೇ ವಿಕೆಟ್‌ಗೆ ಪೇರಿಸಿದ 202 ರನ್ ಜತೆಯಾಟದ ಫಲವಾಗಿ 49.4 ಓವರ್‌ಗಳಲ್ಲಿ 314 ರನ್ ಕಲೆಹಾಕಿತು. ಬಳಿಕ ಹಿಮಾಚಲ ಪ್ರದೇಶ ತಂಡ ಶುಭಮ್ ಅರೋರಾ ಅಜೇಯ ಶತಕದಾಟದ ನೆರವಿನಿಂದ 47.3 ಓವರ್‌ಗಳಲ್ಲಿ 299 ರನ್‌ಗಳಿಸಿದ್ದ ವೇಳೆ ಮಂದ ಬೆಳಕಿನಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಈ ವೇಳೆ ಹಿಮಾಚಲ ತಂಡ ಜಯಿಸಲು 15 ಎಸೆತಗಳಲ್ಲಿ 16 ರನ್‌ಗಳ ಅವಶ್ಯಕತೆಯಿತ್ತು. ವಿಜೆಡಿ ನಿಯಮದನ್ವಯ ಹಿಮಾಚಲ ತಂಡ ಮುನ್ನಡೆ ಸಾಧಿಸಿದ್ದ ಹಿನ್ನೆಲೆಯಲ್ಲಿ ವಿಜಯಿ ಎಂದು ಘೋಷಿಸಲಾಯಿತು.

    ತಮಿಳುನಾಡು: 49.4 ಓವರ್‌ಗಳಲ್ಲಿ 314 (ದಿನೇಶ್ ಕಾರ್ತಿಕ್ 116, ಬಾಬಾ ಇಂದ್ರಜಿತ್ 80, ಶಾರುಖ್ ಖಾನ್ 42, ವಿಜಯ್ ಶಂಕರ್ 22, ರಿಷಿ ಧವನ್ 62ಕ್ಕೆ 3, ಪಂಕಜ್ ಜೈಸ್ವಾಲ್ 59ಕ್ಕೆ 4, ವಿನಯ್ ಗಲೆತಿಯಾ 35ಕ್ಕೆ 1), ಹಿಮಾಚಲ ಪ್ರದೇಶ: 47.3 ಓವರ್‌ಗಳಲ್ಲಿ 4 ವಿಕೆಟ್‌ಗೆ 299 (ಶುಭಮ್ ಅರೋರ 136*, ಅಮಿತ್ ಕುಮಾರ್ 74, ರಿಷಿ ಧವನ್ 42*, ಪ್ರಶಾಂತ್ ಚೋಪ್ರಾ 21, ವಾಷಿಂಗ್ಟನ್ ಸುಂಧರ್ 47ಕ್ಕೆ 1, ಎಂ.ಅಶ್ವಿನ್ 57ಕ್ಕೆ 1, ಬಾಬಾ ಇಂದ್ರಜಿತ್ 45ಕ್ಕೆ 1).

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts