More

    ಸಿಜೆ ನೇತೃತ್ವದ ಪೂರ್ಣ ಪೀಠಕ್ಕೆ ಹಿಜಾಬ್ ಪ್ರಕರಣ: ತ್ರಿಸದಸ್ಯ ಪೀಠ ರಚನೆ, ಇಂದಿನಿಂದಲೇ ವಿಚಾರಣೆ

    ಬೆಂಗಳೂರು: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ ವಿವಾದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಪೀಠ ಬುಧವಾರ ಸಿಜೆ ಅಂಗಳಕ್ಕೆ ರವಾನಿಸಿದ ಬೆನ್ನಲ್ಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಸೇರಿ ಮೂವರು ನ್ಯಾಯ ಮೂರ್ತಿಗಳನ್ನೊಳಗೊಂಡ ಪೂರ್ಣಪೀಠ ರಚನೆ ಯಾಗಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಹಾಗೂ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರನ್ನೊಳಗೊಂಡ ಈ ಪೂರ್ಣಪೀಠ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆ ಯಾಗಿರುವ ಎಲ್ಲ ಅರ್ಜಿಗಳನ್ನೂ ಗುರುವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

    ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಹಿಜಾಬ್ ಧರಿಸಿದವರ ಪ್ರವೇಶ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಹಾಗೂ ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಫೆ.5ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಹಲವು ತಕರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ಬುಧವಾರ ವಿಚಾರಣೆಗೆತ್ತಿಕೊಂಡ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಪ್ರಕರಣವನ್ನು ವಿಸõತ ಪೀಠದಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದಿಡುವಂತೆ ರಿಜಿಸ್ಟ್ರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಿಜೆ, ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೂರ್ಣ ಪೀಠ ರಚಿಸಿ ಆದೇಶ ಹೊರಡಿಸಿದ್ದಾರೆ.

    ಮಧ್ಯಂತರ ಆದೇಶವಿಲ್ಲ: ಅರ್ಜಿದಾರ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗಳಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಿ ಮಧ್ಯಂತರ ಆದೇಶ ನೀಡುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ನ್ಯಾಯಪೀಠ, ಮುಖ್ಯ ನ್ಯಾಯಮೂರ್ತಿಗಳು ವಿವೇಚನಾಧಿಕಾರ ಬಳಸಿ ರಚನೆ ಮಾಡುವ ವಿಸõತ ಪೀಠವೇ ಮಧ್ಯಂತರ ಮನವಿಗಳನ್ನೂ ಮೆರಿಟ್ ಆಧಾರದಲ್ಲಿ ಪರಿಗಣಿಸಲಿದೆ. ವಿಸõತ ಪೀಠ ರಚನೆ ಕುರಿತು ನಿರ್ಧಾರ ಕೈಗೊಂಡ ನಂತರ ಅರ್ಜಿದಾರರು ಮಧ್ಯಂತರ ಆದೇಶದ ಬಗ್ಗೆ ಮನವಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿತು.

    ನ್ಯಾಯಾಂಗದ ಮೇಲೆ ವಿಶ್ವಾಸವಿದೆ: ಬುಧವಾರ ಬೆಳಗ್ಗೆ ವಿಚಾರಣೆ ಆರಂಭವಾಗುತ್ತಿದಂತೆಯೇ ನ್ಯಾಯಮೂರ್ತಿಗಳು, ಪ್ರಕರಣವನ್ನು ಗಮನಿಸಿದರೆ ವಿಸõತ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತವೆನಿಸುತ್ತದೆ. ಇಲ್ಲವಾದರೆ, ಅರ್ಜಿಯನ್ನು ಪಿಐಎಲ್ ಆಗಿ ಪರಿವರ್ತಿಸಿ ವಿಭಾಗೀಯ ಪೀಠದ ಮುಂದಿಡಬಹುದು. ಎಲ್ಲರೂ ಒಪ್ಪಿದರೆ ಪ್ರಕರಣವನ್ನು ವಿಸõತ ಪೀಠಕ್ಕೆ ವಹಿಸಲಾಗುವುದು ಎಂದು ತಿಳಿಸಿ, ಅರ್ಜಿದಾರರು, ಮಧ್ಯಂತರ ಅರ್ಜಿದಾರರು ಹಾಗೂ ಸರ್ಕಾರದ ಅಭಿಪ್ರಾಯ ಕೇಳಿತು. ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ ಕಾಮತ್, ‘ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ನ್ಯಾಯಾಂಗ ಸೂಕ್ಷ್ಮತೆಗಳನ್ನು ಪರಿಗಣಿಸಿ, ನ್ಯಾಯಮೂರ್ತಿಗಳು ನೀಡುವ ಅಭಿಪ್ರಾಯ ಮುಖ್ಯವಾಗಿದೆ. ವಿಸõತ ಪೀಠಕ್ಕೆ ವಹಿಸುವ ಬಗ್ಗೆ ವಿರೋಧವಿಲ್ಲ. ಅದು ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು. ಆದರೆ, ಶೈಕ್ಷಣಿಕ ವರ್ಷ ಮುಗಿಯಲು 2 ತಿಂಗಳಷ್ಟೇ ಬಾಕಿ ಇದೆ. ಪ್ರಕರಣ ವಿಸõತ ಪೀಠಕ್ಕೆ ವಹಿಸಬಹುದು. ಅದರ ಜತೆಗೆ, ಅರ್ಜಿದಾರ ವಿದ್ಯಾರ್ಥಿನಿಯರಿಗೆ ತಮ್ಮ ನಂಬಿಕೆ, ಆಚರಣೆ ಅನುಸರಿಸಲು ಹಾಗೂ ಮತ್ತೆ ತರಗತಿಗಳಿಗೆ ತೆರಳಲು ಅವಕಾಶ ನೀಡಬೇಕು. ಪ್ರಕರಣದ ಸಂಬಂಧ ಎತ್ತಿರುವ ಪ್ರಶ್ನೆಗಳನ್ನು ಮುಕ್ತವಾಗಿರಿಸಿ, ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

    ಎಜಿ ವಾದವೇನು?: ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ‘ಈ ವಿಚಾರ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಒಳಗೊಂಡಿದೆ. ಪ್ರಕರಣದ ತ್ವರಿತ ವಿಚಾರಣೆಯಾಗಿ, ಶೀಘ್ರ ತೀರ್ಪು ಬರಬೇಕಿದೆ. ಹೀಗಿದ್ದರೂ, ಅಂತಿಮವಾಗಿ ಪ್ರಕರಣವನ್ನು ವಿಸõತ ಪೀಠಕ್ಕೆ ವರ್ಗಾಯಿಸುವುದು ನ್ಯಾಯಾಲಯದ ನಿರ್ಧಾರಕ್ಕೆ ಬಿಟ್ಟಿರುವ ವಿಚಾರವಾಗಿದೆ’ ಎಂದರು.

    ಸಮವಸ್ತ್ರ ಸಂಹಿತೆ ಆದೇಶವನ್ನು ಸಮರ್ಥಿಸಿಕೊಂಡ ಎಜಿ, ಈ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಶೈಕ್ಷಣಿಕ ಸಂಸ್ಥೆಗಳಿಗೇ ಸ್ವಾತಂತ್ರ್ಯ ನೀಡಲಾಗಿದೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಸೂಚಿಸಿದ ಸಮವಸ್ತ್ರ ಸಂಹಿತೆಗೆ ಬದ್ಧರಾಗಿ ತರಗತಿಗೆ ಹಾಜರಾಗುವುದಿದ್ದರೆ ಮಾತ್ರ ಅವಕಾಶ ನೀಡಬೇಕು ಎಂದು ಕೋರಿದರಲ್ಲದೆ, ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಮಧ್ಯಂತರ ಆದೇಶ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡುವುದು ಸಮಂಜಸವಲ್ಲ. ಹಾಗೊಂದು ವೇಳೆ ಮಧ್ಯಂತರ ಆದೇಶ ನೀಡಿದರೆ, ಅದು ಅರ್ಜಿದಾರರ ಪರವಾಗಿಯೇ ಆದೇಶ ನೀಡಿದಂತಾಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

    ಮಧ್ಯಂತರ ಆದೇಶ ಬೇಡವೆಂದ ಸಿಡಿಸಿ: ಸರ್ಕಾರದ ವಾದಕ್ಕೆ ದನಿಗೂಡಿಸಿದ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಪರ ಹಿರಿಯ ವಕೀಲ ಸಜನ್ ಪೂವಯ್ಯ, ‘ಪ್ರತಿ ವರ್ಷವೂ ಕಾಲೇಜಿನಲ್ಲಿ ಸಮವಸ್ತ್ರ ಇರುತ್ತದೆ. ಅದರ ಬಗ್ಗೆ ಈ ಹಿಂದೆ ಯಾರೂ ದೂರು ನೀಡಿರಲಿಲ್ಲ. ಪ್ರತಿ ವರ್ಷ ಸಿಡಿಸಿ ಸಭೆ ನಡೆಸಿ, ಸಂಬಂಧಪಟ್ಟ ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ನಿರ್ಧಾರ ಕೈಗೊಳ್ಳುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷಕ್ಕೂ ಸಿಡಿಸಿಯ ಸಮವಸ್ತ್ರ ನೀತಿ ಅನುಸರಿಸಲಾಗುತ್ತಿದೆ. ಅರ್ಜಿದಾರ ವಿದ್ಯಾರ್ಥಿನಿಯರೂ ಇಷ್ಟು ದಿನ ಸಮವಸ್ತ್ರ ಧರಿಸಿದ್ದಾರೆ. ಈಗ ಏಕಾಏಕಿ ತಕರಾರು ತೆಗೆಯುತ್ತಿದ್ದಾರೆ. ಆದ್ದರಿಂದ, ಮಧ್ಯಂತರ ಆದೇಶ ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

    ಶಿಕ್ಷಣ ಕಾಯ್ದೆಗೂ ಸಮವಸ್ತ್ರಕ್ಕೂ ಸಂಬಂಧವಿಲ್ಲ: ಮತ್ತೊಬ್ಬ ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ್ ಹೆಗಡೆ ವಾದ ಮಂಡಿಸಿ, ಕರ್ನಾಟಕ ಶಿಕ್ಷಣ ಕಾಯ್ದೆಯ ಪ್ರಕಾರ ವಸ್ತ್ರ ಸಂಹಿತೆ ಕುರಿತು ಆದೇಶ ಹೊರಡಿಸಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಶಿಕ್ಷಣ ಕಾಯ್ದೆಗೂ, ಸಮವಸ್ತ್ರಗಳಿಗೂ ಯಾವುದೇ ಸಂಬಂಧವಿಲ್ಲ. ನಾನು ಅದನ್ನು ಸಂಪೂರ್ಣವಾಗಿ ಓದಿದ್ದೇನೆ. ಅದರಲ್ಲಿ ಯಾವ ಉಲ್ಲೇಖವೂ ಇಲ್ಲ. ಜತೆಗೆ, ಸಮವಸ್ತ್ರ ಧರಿಸಬೇಕು ಎಂದು ಸರ್ಕಾರದ ನಿಯಮಗಳಲ್ಲಿ ಹೇಳಲಾಗಿದೆ. ಆದರೆ, ಸಮವಸ್ತ್ರ ಧರಿಸದವರನ್ನು ತರಗತಿಗಳಿಂದ ಹೊರಗಿಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಸಮವಸ್ತ್ರ ಧರಿಸದವರಿಗೆ ದಂಡ ವಿಧಿಸುವ ಬಗ್ಗೆಯೂ ನಿಯಮದಲ್ಲಿ ಹೇಳಲಾಗಿಲ್ಲ. ಆದ್ದರಿಂದ, ಪ್ರಕರಣವನ್ನು ವಿಸõತ ಪೀಠಕ್ಕೆ ವರ್ಗಾಯಿಸುವವರೆಗೆ ಅರ್ಜಿದಾರ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಿಸಲು ಅವಕಾಶ ಕಲ್ಪಿಸಿ ಮಧ್ಯಂತರ ಆದೇಶ ನೀಡಬೇಕು ಎಂದು ಕೋರಿದರು.

    ಭವಿಷ್ಯಕ್ಕೆ ತೊಂದರೆ: ಅರ್ಜಿದಾರರ ಪರ ಮತ್ತೊಬ್ಬ ವಕೀಲ ಮೊಹಮದ್ ತಾಹಿರ್ ವಾದ ಮಂಡಿಸಿ, ಹಿಜಾಬ್ ವಿಷಯವಾಗಿ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತಿದ್ದಾರೆ. ಶಾಲೆ-ಕಾಲೇಜುಗಳಲ್ಲಿ ಪಾಠ-ಪ್ರವಚನ ಸ್ಥಗಿತಗೊಂಡಿದೆ. ಇನ್ನೆರಡು ತಿಂಗಳಿಗೆ ಶೈಕ್ಷಣಿಕ ವರ್ಷ ಮುಕ್ತಾಯವಾಗಲಿದೆ. ಈ ಹಂತದಲ್ಲಿ ತೊಂದರೆಗೆ ಒಳಗಾದರೆ ಅವರ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ, ಇಂದೇ ಮಧ್ಯಂತರ ಆದೇಶ ನೀಡಬೇಕು ಎಂದು ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts