More

    ಹೆದ್ದಾರಿ ಬದಿ ಜೋಪಡಿ ಸಾಲು

    ಭರತ್ ಶೆಟ್ಟಿಗಾರ್ ಮಂಗಳೂರು
    ಕೆಪಿಟಿಯಿಂದ-ಪದವು ವೃತ್ತ ಅಥವಾ ಪದವು ಕಡೆಯಿಂದ ಕೆಪಿಟಿ ಕಡೆಗೆ ಸಂಚರಿಸುವವರು ರಾಷ್ಟ್ರೀಯ ಹೆದ್ದಾರಿ ಬದಿ ಅಲಂಕಾರಿಕ ವಸ್ತುಗಳು, ಮಣ್ಣು-ಸಿಮೆಂಟ್ ಹೂಕುಂಡಗಳು, ಬ್ಯಾಟ್, ಚೇರ್, ಬಾಗಿಲು-ಕಿಟಕಿಗಳಿಗೆ ಹಾಕುವ ಕರ್ಟನ್ ಹೀಗೆ ತರಹೇವಾರಿ ವಸ್ತುಗಳನ್ನು ಮಾರಾಟಕ್ಕಿಟ್ಟಿರುವುದನ್ನು ಕಾಣಬಹುದು.

    ಇದರಲ್ಲೇನು ವಿಶೇಷ? ಎಲ್ಲ ಕಡೆ ಈ ರೀತಿ ಮಾರಾಟ ಮಾಡುತ್ತಿದ್ದಾರೆ ಅಂತ ಅಂದುಕೊಳ್ಳಬಹುದು. ಆದರೆ ಇಲ್ಲಿರುವವರು ಹೆದ್ದಾರಿ ಬದಿ ಜೋಪಡಿಗಳನ್ನು ನಿರ್ಮಿಸಿ ತಿಂಗಳಾನುಗಟ್ಟಲೆ ಅಲ್ಲೇ ವಾಸವಾಗಿದ್ದು, ಮಾರಾಟದಲ್ಲಿ ತೊಡಗಿಸಿಕೊಡಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿರುವ ವಿಚಾರವಾಗಿದೆ. ಅಲ್ಲೇ ತಿಂದುಂಡು ತೊಳೆದು ಸ್ಥಳವನ್ನು ಅಸಹ್ಯವಾಗುವಂತೆ ಮಾಡಿದ್ದಾರೆ. ಅಂದ ಹಾಗೆ ಇವರ‌್ಯಾರು ಇಲ್ಲಿನವರಲ್ಲ. ವ್ಯಾಪಾರ ಉದ್ದೇಶದಿಂದ ಹೊರ ರಾಜ್ಯಗಳಿಂದ ಇಲ್ಲಿಗೆ ಬಂದವರು.

    ರಸ್ತೆ ಬದಿ ಒಂದು ಗೂಡಂಗಡಿ ಮಾಡುವುದಾರೂ ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯಬೇಕು. ಯಾವುದೇ ಅನುಮತಿ ಪಡೆಯದೆ ಜೋಪಡಿ ಕಟ್ಟಿ ವಾಸವಾಗಿದ್ದಾರೆ. ಇಲ್ಲಿ ಮಾರಾಟ ಮಾಡುವುದಕ್ಕೆ ಆಕ್ಷೇಪವಿಲ್ಲ. ಆದರೆ, ಜೋಪಡಿ ನಿರ್ಮಿಸುವುದಕ್ಕೆ ಮಾತ್ರ ಆಕ್ಷೇಪವಿದೆ. ಮಂಗಳೂರು ನಗರವನ್ನು ಬಯಲು ಶೌಚಮುಕ್ತ ನಗರ ಎಂದು ಘೋಸಿಸಲಾಗಿದ್ದು, ಈಗ ಜೋಪಡಿಗಳು ಎದ್ದಿರುವುದು ಅದಕ್ಕೆ ಕಳಂಕವಾಗಿದೆ. ಈಗಾಗಲೇ ಹಲವು ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಈ ಜೋಪಡಿಗಳು ಮುಂದಿನ ದಿನಗಳಲ್ಲಿ ರೋಗ ತಾಣಗಳಾದರೂ ಆಶ್ಚರ್ಯವಿಲ್ಲ.

    ಹೇಗಿದೆ ಜೀವನ ಶೈಲಿ?
    ಬೆಳಗ್ಗಿನಿಂದ ತಡರಾತ್ರಿವರೆಗೂ ತಮ್ಮಲ್ಲಿರುವ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ. ಪ್ರತಿನಿತ್ಯ ಹೋಟೆಲ್‌ಗಳಿಗೆ ಹೋಗಿ ಊಟ ಮಾಡುವಷ್ಟು ಸಂಪಾದನೆ ಆಗದಿರುವುದರಿಂದ ಸ್ಥಳೀಯವಾಗಿ ಸಿಗುವ ನೀರಿನ ಮೂಲಗಳಿಂದಲೇ ನೀರು ತಂದು ಅಡುಗೆ ಮಾಡುತ್ತಾರೆ. ಸಣ್ಣ ಗುಡಿಗಳವರು ಬ್ಯಾಟರಿ ಮೂಲಕ ರಾತ್ರಿ ಲೈಟ್ ಹಾಗೂ ಮೊಬೈಲ್ ಚಾರ್ಜ್ ಮಾಡುತ್ತಾರೆ. ಬ್ಯಾಟ್ ತಯಾರಿಸುವವರ 4-5 ಕುಟುಂಬಗಳಿದ್ದು, ಬೆಳಕಿಗಾಗಿ ತಮ್ಮ ಜತೆ ಜನರೇಟರನ್ನೂ ಇಟ್ಟುಕೊಂಡಿದ್ದಾರೆ! ದೊಡ್ಡವರು ಸ್ನಾನಕ್ಕಾಗಿ ಸಾರ್ವಜನಿಕ ಶೌಚಗೃಹಗಳನ್ನು ಅವಲಂಬಿಸಿದ್ದರೆ, ಸಣ್ಣ ಮಕ್ಕಳ ಶೌಚ-ಸ್ನಾನ ಜೋಪಡಿ ಪಕ್ಕದಲ್ಲೇ ನಡೆಯುತ್ತದೆ. ಬಟ್ಟೆಯನ್ನು ಅಲ್ಲೇ ಒಗೆಯುತ್ತಾರೆ. ಇವು ರೋಗಗಳು ಹರಡಲು ಕಾರಣವಾಗುತ್ತಿದೆ.

    ಯಾವೆಲ್ಲ ವಸ್ತುಗಳ ಮಾರಾಟ?
    ಹೀಗೆ ಜೋಪಡಿ ಕಟ್ಟಿ ವ್ಯಾಪಾರ ಮಾಡುತ್ತಿರುವವರು ಪ್ರಮುಖವಾಗಿ ಬ್ಯಾಟ್‌ಗಳನ್ನು, ಬಿದಿರಿನಿಂದ ಅಲಂಕಾರಿಕ ವಸ್ತುಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡುತ್ತಾರೆ. ಉಳಿದಂತೆ ಸಿಮೆಂಟ್ ಮತ್ತು ಮಣ್ಣಿನ ಹೂಕುಂಡಗಳು, ಕಿಟಕಿ-ಬಾಗಿಲಿಗೆ ಅಳವಡಿಸುವ ಕರ್ಟನ್‌ಗಳು, ಚೇರ್‌ಗಳು, ಅಲಂಕಾರಿಕ ಪ್ಲಾಸ್ಟಿಕ್ ಹೂಗಳು ಮೊದಲಾದವುಗಳ ಮಾರಾಟ ಜೋರಿದೆ.

    ಪಚ್ಚನಾಡಿ ಟೆಂಟ್ ವಾಸಿಗಳು
    ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿಯೂ ಕಾರ್ಮಿಕರು ಟೆಂಟ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲೂ ಹಲವು ಕುಟುಂಬಗಳಿದ್ದು, ಇವರೆಲ್ಲ ಹೆಚ್ಚಿನವರು ಡಂಪಿಂಗ್ ಯಾರ್ಡ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಹಿಂದೆ ಬಿಕರ್ನಕಟ್ಟೆ ಫ್ಲೈಓವರ್ ಬಳಿಯೂ ಟೆಂಟ್‌ಗಳಿತ್ತು ಪ್ರಸ್ತುತ ಅವುಗಳನ್ನು ತೆರವುಗೊಳಿಸಲಾಗಿದೆ. ಪಂಪ್‌ವೆಲ್‌ನಲ್ಲಿ ಫ್ಲೈಓವರ್ ಕಾಮಗಾರಿ ವೇಳೆಯೂ ಕಾರ್ಮಿಕರು ಟೆಂಟ್‌ನಲ್ಲಿ ವಾಸವಾಗಿದ್ದು, ಪ್ರಸ್ತುತ ಅವರನ್ನೂ ತೆರವುಗೊಳಿಸಲಾಗಿದೆ. ನಗರದ ಬಸ್ ತಂಗುದಾಣಗಳು ಅಲೆಮಾರಿಗಳ ಆವಾಸ ಸ್ಥಾನವಾಗಿದೆ. ಅಲ್ಲೇ ಬಟ್ಟೆಬರೆಗಳನ್ನಿಟ್ಟು ಮಲಗುವುದು ಸಾಮಾನ್ಯವಾಗಿದ್ದು, ಹೆದ್ದಾರಿ ಬದಿ ಬಸ್‌ಸ್ಟಾಪ್‌ಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ.

    ಪಾಲಿಕೆ ವ್ಯಾಪ್ತಿಯಲ್ಲಿದ್ದರೂ ಹೆದ್ದಾರಿ ಸರಹದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಯಾವುದೇ ಗುಡಿಸಲು ನಿರ್ಮಾಣಕ್ಕೆ ಅವಕಾಶವಿಲ್ಲ. ಪಾಲಿಕೆ ಗಮನಕ್ಕೂ ಇದು ಬಂದಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
    ಶಾನಾಡಿ ಅಜಿತ್ ಕುಮಾರ್ ಹೆಗ್ಡೆ
    ಮಹಾನಗರ ಪಾಲಿಕೆ ಆಯುಕ್ತ

    ನಾವು ಮಹಾರಾಷ್ಟ್ರದಿಂದ ಬಂದವರು. ಪ್ರತಿವರ್ಷ ಇಲ್ಲಿಗೆ ಬಂದು ಬ್ಯಾಟ್ ತಯಾರಿಸಿ ಮಾರಾಟ ಮಾಡುತ್ತೇವೆ. ಮಳೆಗಾಲ ಮುಗಿದ ಬಳಿಕ ಬಂದು ಮಳೆ ಆರಂಭವಾಗುತ್ತಲೇ ಊರಿಗೆ ತೆರಳುತ್ತೇವೆ. ನಮ್ಮಂತೆ ಹಲವು ಮಂದಿ ವಿವಿಧೆಡೆ ಹೆದ್ದಾರಿ ವಾಸವಾಗಿದ್ದು, ಬ್ಯಾಟ್ ಮಾರಾಟ ಮಾಡುತ್ತಿದ್ದಾರೆ.
    ಅಮಿತ್ ಪವಾರ್, ಬ್ಯಾಟ್ ತಯಾರಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts