More

    ಕಂಕನಾಡಿಗೆ ಹೈಟೆಕ್ ಮಾರ್ಕೆಟ್

    ಹರೀಶ್ ಮೋಟುಕಾನ ಮಂಗಳೂರು
    ಕಂಕನಾಡಿಯಲ್ಲಿ 41 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೈಟೆಕ್ ಮಾರುಕಟ್ಟೆ ಕಾಮಗಾರಿ ಭರದಿಂದ ಸಾಗುತ್ತಿದೆ. ಈಗಾಗಲೇ ತಳಪಾಯದ ಕೆಲಸ ಪೂರ್ಣಗೊಂಡು ಕಂಬಗಳ ನಿರ್ಮಾಣವಾಗುತ್ತಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

    ಕಂಕನಾಡಿ ಮಾರುಕಟ್ಟೆ 25 ವರ್ಷಗಳಷ್ಟು ಹಳೆಯದಾಗಿದ್ದು, ಅದನ್ನು ಕೆಡವಿ 41 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಅಲ್ಲಿದ್ದ ಎಲ್ಲ ವ್ಯಾಪಾರಿಗಳು ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರಗೊಂಡಿದ್ದಾರೆ. ತಾತ್ಕಾಲಿಕ ಮಾರುಕಟ್ಟೆಯೂ ವ್ಯವಸ್ಥಿತವಾಗಿರುವುದರಿಂದ ವ್ಯಾಪಾರಿಗಳು ಖುಷಿಯಾಗಿದ್ದಾರೆ.

    ಹಳೇ ಮಾರುಕಟ್ಟೆಯಲ್ಲಿ ಮೂಲಸೌಕರ್ಯದ ಕೊರತೆ ಎದುರಾಗಿತ್ತು. ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅಗತ್ಯ ವ್ಯವಸ್ಥೆಗಳು ಲಭ್ಯವಿರಲಿಲ್ಲ. ಹಳೇ ಕಟ್ಟಡ ಶಿಥಿಲವಾಗಿದ್ದು, ನೀರು ಸೋರುವ ಹಾಗೂ ಬಿರುಕು ಬಿಟ್ಟ ಗೋಡೆಗಳು ಆತಂಕಕ್ಕೆ ಕಾರಣವಾಗಿತ್ತು. ಮಳೆಗಾಲದಲ್ಲಿ ನೀರು ಒಳಗೆ ಬರುವುದು ಸಾಮಾನ್ಯವಾಗಿತ್ತು. ಶೌಚಗೃಹ, ಕುಡಿಯುವ ನೀರಿನ ಸಮಸ್ಯೆಗಳಿದ್ದವು. ಶಿಥಿಲಾವಸ್ಥೆಯ ಕಟ್ಟಡ ದುರಸ್ತಿ ಮಾಡುವುದು ಕೂಡ ಕಷ್ಟವಾಗಿದ್ದರಿಂದ ಹೊಸ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. 2020ರ ಮೇ ತಿಂಗಳಿನಲ್ಲಿ ಹಳೇ ಕಟ್ಟಡ ಕೆಡವಲಾಗಿತ್ತು.

    ಹೀಗಿರಲಿದೆ ಮಾರುಕಟ್ಟೆ: ನೂತನ ಮಾರುಕಟ್ಟೆಗೆ 2019ರ ಫೆಬ್ರವರಿ 28ರಂದು ಅಂದಿನ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದ್ದರು. ಸುಸಜ್ಜಿತ ರೀತಿಯಲ್ಲಿ ಮಾರುಕಟ್ಟೆ ರಚನೆ ಆದರೆ ಮಾಲ್‌ಗಳ ರೀತಿಯ ವಾತಾವರಣವಿರಲಿದೆ. 100ಕ್ಕಿಂತಲೂ ಅಧಿಕ ಮಳಿಗೆಗಳು ನಿರ್ಮಾಣವಾಗಲಿವೆ. ಮಾರುಕಟ್ಟೆಗೆ ಬರುವವರಿಗೆ ವಿಶಾಲ ಪಾರ್ಕಿಂಗ್, ಮಾರಾಟಗಾರರಿಗೆ ಪ್ರತ್ಯೇಕ ವ್ಯವಸ್ಥೆ, ಗ್ರಾನೈಟ್ ಅಳವಡಿಕೆ, ಒತ್ತಡ ಮುಕ್ತ ಹಾಗೂ ಸ್ವಚ್ಛತೆಗೆ ವಿಶೇಷ ಗಮನ, ಹೂ, ತರಕಾರಿ, ಮೀನು, ಮಾಂಸ ಸೇರಿದಂತೆ ಮಾರಾಟಗಾರರಿಗೆ ಪ್ರತ್ಯೇಕ ವ್ಯವಸ್ಥೆಗಳು, ಆಕರ್ಷಕ ಹೊರಭಾಗ, ಪೂರ್ಣ ಮಟ್ಟದ ಸುಸಜ್ಜಿತ ಶೌಚಗೃಹ, ಶುದ್ಧ ಕುಡಿಯುವ ನೀರು, ಮಾರುಕಟ್ಟೆಗೆ ಆಕರ್ಷಣೀಯ ಸ್ಪರ್ಶ… ಸೇರಿದಂತೆ ಹಲವಾರು ವಿಶೇಷಗಳು ಹೈಟೆಕ್ ಮಾರುಕಟ್ಟೆಯಲ್ಲಿ ದೊರೆಯಲಿವೆ.

    ಕಂಕನಾಡಿಯಲ್ಲಿ ಹಳೇ ಮಾರುಕಟ್ಟೆ ಕೆಡವಿ ಹೈಟೆಕ್ ಮಾರುಕಟ್ಟೆ ಕೆಲಸ ಭರದಿಂದ ಸಾಗುತ್ತಿದೆ. ಈಗಾಗಲೇ ಅಡಿಪಾಯದ ಕಾಮಗಾರಿ ಪೂರ್ಣಗೊಂಡು ಕಂಬಗಳ ನಿರ್ಮಾಣವಾಗುತ್ತಿದೆ. ಕರೊನಾ ಲಾಕ್‌ಡೌನ್‌ನಿಂದ ಕೆಲಸ ಒಂದಷ್ಟು ನಿಧಾನವಾಗಿತ್ತು. ಪ್ರಸ್ತುತ ವೇಗ ಪಡೆದಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
    -ನವೀನ್ ಡಿಸೋಜ, ಮಹಾನಗರ ಪಾಲಿಕೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts