More

    ಬೆಂಗಳೂರಿನಲ್ಲೇ ಅತ್ಯಧಿಕ ಸೈಬರ್ ಕ್ರೈಂ

    ಬೆಂಗಳೂರು: ದೇಶದಲ್ಲಿ ಸೈಬರ್ ಅಪರಾಧಗಳು ಶೇ.24 ಹೆಚ್ಚಾಗಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿ, ಮಹಾನಗರಗಳ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದ ಕುಖ್ಯಾತಿಗೆ ಒಳಗಾಗಿವೆ. ಸೈಬರ್ ಕ್ರೈಂ ಕುರಿತು ಜನರಲ್ಲಿ ಜಾಗೃತಿ ಮೂಡಿ ಪೊಲೀಸ್ ಠಾಣೆಗೆ ದೂರು ಕೊಡುವರ ಮತ್ತು ಕಳ್ಳರ ಪ್ರಮಾಣದಲ್ಲಿ ಹೆಚ್ಚಳದ ಪರಿಣಾಮ ಪ್ರಕರಣಗಳ ಸರಾಸರಿ ಏರಿಕೆಯಾಗಿದೆ ಎನ್ನಲಾಗಿದೆ.

    ದೇಶದಲ್ಲಿ 2021ರಲ್ಲಿ 52,974 ಸೈಬರ್ ಪ್ರಕರಣಗಳು ದಾಖಲಾಗಿದ್ದರೇ, 2022ರಲ್ಲಿ 65,893 ಕೇಸ್ ದಾಖಲಾಗಿವೆ. ಇದೇ ಅಲ್ಲದೆ ಆರ್ಥಿಕ ಅಪರಾಧ (ಶೇ.11), ಹಿರಿಯ ನಾಗರಿಕರ ವಿರುದ್ಧ ಅಪರಾಧ (ಶೇ.9), ಮಹಿಳೆಯರ ವಿರುದ್ಧ (ಶೇ.4) ಅಪರಾಧಗಳು ಸಹ ಹೆಚ್ಚಳವಾಗಿರುವ ಅಂಶ ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಬೆಳಕಿಗೆ ಬಂದಿದೆ.

    ಸೈಬರ್ ಕ್ರೈಂ ಅಡಿಯಲ್ಲಿ 65,893 ಪ್ರಕರಣಗಳು ದಾಖಲಾಗಿವೆ. ತೆಲಂಗಾಣದಲ್ಲಿ 2022ನೇ ಸಾಲಿನಲ್ಲಿ 15,297 ಕೇಸ್‌ಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 12,556 ಮತ್ತು ಉತ್ತರ ಪ್ರದೇಶದಲ್ಲಿ 10,117 ಪ್ರಕರಣಗಳು ದಾಖಲಾಗಿದ್ದು, 2 ಮತ್ತು 3ನೇ ಸ್ಥಾನದಲ್ಲಿವೆ. ಕರ್ನಾಟಕದಲ್ಲಿ ದಾಖಲಾಗಿರುವ 12,556 ಸೈಬರ್ ಕ್ರೈಂಗಳ ಪೈಕಿ 11,025 ವಂಚನೆ, 338 ಲೈಂಗಿಕ ಕಿರುಕುಳ, 379 ಸುಲಿಗೆ, 27 ತೇಜೋವಧೆ ಸಂಬಂಧ ಕೇಸ್ ದಾಖಲಾಗಿವೆ.

    ಇನ್ನೂ ದೇಶದಲ್ಲಿ ಮಹಾನಗರಗಳ ಪೈಕಿ ಹೋಲಿಕೆ ಮಾಡಿದರೇ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 6,423 ಕೇಸ್ ದಾಖಲಾಗಿದ್ದರೇ 2022ರಲ್ಲಿ 9,940 ಪ್ರಕರಣ ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಆನಂತರ ಮುಂಬೈ(4,724) ಮತ್ತು ಹೈದರಾಬಾದ್ (4,436) ಎರಡು ಮತ್ತು 3ನೇ ಸ್ಥಾನದಲ್ಲಿವೆ.

    ಭ್ರಷ್ಟಾಚಾರದಲ್ಲಿ ರಾಜ್ಯ 3ನೇ ಸ್ಥಾನ

    ಮಹಾರಾಷ್ಟ್ರದಲ್ಲಿ 749, ರಾಜಸ್ಥಾನ 511, ಕರ್ನಾಟಕ 389, ಮಧ್ಯಪ್ರದೇಶ 294 ಮತ್ತು ಒಡಿಶಾದಲ್ಲಿ 287 ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾಗಿವೆ. ಕರ್ನಾಟಕ 3ನೇ ಸ್ಥಾನದಲ್ಲಿದ್ದು, 250 ಟ್ರ್ಯಾಪ್, 56 ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ, 16 ಅಧಿಕಾರ ದುರ್ಬಳಕ್ಕೆ ಪ್ರಕರಣಗಳು ದಾಖಲಾಗಿವೆ. 60 ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿದ್ದು, ಒಟ್ಟಾರೇ ಕೇಸಿನಲ್ಲಿ ಶೇ.33 ಮಂದಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಶೇ.87 ಪ್ರಕರಣಗಳು ತನಿಖೆ ಹಂತದಲ್ಲಿಯೇ ಉಳಿದುಕೊಂಡಿವೆ.

    ಆರ್ಥಿಕ ಅಪರಾಧಗಳ ಸ್ಥಿತಿಗತಿ

    ದೇಶದ ಮಹಾನಗರಗಳ ಪೈಕಿ ಬೆಂಗಳೂರು ನಗರದಲ್ಲಿ 2021ರಲ್ಲಿ 2,715 ಆರ್ಥಿಕ ಅಪರಾಧಗಳು ದಾಖಲಾಗಿದ್ದರೇ 2022ರಲ್ಲಿ 3,245 ಕೇಸ್‌ಗಳು ದಾಖಲಾಗಿದ್ದು, 5ನೇ ಸ್ಥಾನದಲ್ಲಿದೆ. 3083 ನಕಲಿ ದಾಖಲೆ, ವಂಚನೆ ಕೇಸ್‌ಗಳು ಮತ್ತು 147 ನಂಬಿಕೆ ದ್ರೋಹ ವರದಿಯಾಗಿವೆ. ಇನ್ನೂ ಮೊದಲ ಸ್ಥಾನದಲ್ಲಿ ಮುಂಬೈ (6,960), ಆನಂತರ ಹೈದರಾಬಾದ್ (6015), ಜೈಪುರ್ (5332), ದೆಹಲಿ ನಗರದಲ್ಲಿ (5007) ಹೆಚ್ಚು ಆರ್ಥಿಕ ಅಪರಾಧಗಳು ವರದಿ ಆಗಿವೆ.

    ಸೈಬರ್ ಕ್ರೈಂ ಪತ್ತೆಹಚ್ಚುವಲ್ಲಿ ಲಾಸ್ಟ್

    ಸೈಬರ್ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಕರ್ನಾಟಕ ಪೊಲೀಸರು ಹಿಂದೆ ಬಿದ್ದಿದ್ದಾರೆ. 12,556 ಪ್ರಕರಣಗಳಲ್ಲಿ 612 ಪುರುಷರು, 67 ಮಹಿಳೆಯರು ಸೇರಿ 679 ವಂಚಕರನ್ನು ಬಂಧಿಸುವಲ್ಲಿ ಸುಸ್ತು ಆಗಿದ್ದಾರೆ. ಉತ್ತರ ಪ್ರದೇಶ ಪೊಲೀಸರು 8,249 ಪ್ರಕರಣಗಳಲ್ಲಿ 15 ಮಹಿಳೆಯರು ಸೇರಿ 7,122 ಆರೋಪಿಗಳನ್ನು ಪತ್ತೆ ಹಚ್ಚಿ ಮೊದಲ ಸ್ಥಾನದಲ್ಲಿದೆ. ಆನಂತರ ಮಹಾರಾಷ್ಟ್ರ (2,582) ಮತ್ತು ತೆಲಂಗಾಣ (2,442) ಎರಡು, 3ನೇ ಸ್ಥಾನದಲ್ಲಿವೆ. ಕರ್ನಾಟಕ 11ನೇ ಸ್ಥಾನದಲ್ಲಿದೆ.

    ಹೆಚ್ಚು ಸೈಬರ್ ಕ್ರೈಂ ದಾಖಲಾದ ರಾಜ್ಯಗಳು

    ರಾಜ್ಯ 2021 2022
    ತೆಲಂಗಾಣ 10,303 15,297
    ಕರ್ನಾಟಕ 8,136 12,556
    ಉತ್ತರ ಪ್ರದೇಶ 8,829 10,117
    ಮಹಾರಾಷ್ಟ್ರ 5,562 8,249
    ಆಂಧ್ರಪ್ರದೇಶ 1,875 2,341
    ರಾಜ್ಯ(36) 52,974 65,893

    ಮಹಾನಗರದಲ್ಲಿ ಸೈಬರ್ ಅಪರಾಧಗಳು

    ನಗರ 2021 2022
    ಬೆಂಗಳೂರು ನಗರ 6,423 9,940
    ಮುಂಬೈ 2883 4724
    ಹೈದರಾಬಾದ್ 3303 4436
    ಲಕ್ನೋ 1067 1134
    ದೆಹಲಿ ನಗರ 345 685
    19 ನಗರ 17,115 24,420

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts