More

    ಗಟ್ಲಹಳ್ಳಿಯಲ್ಲಿ ಹೈಟೆಕ್ ಅಂಗನವಾಡಿ: ಜಿಲ್ಲೆಗೆ ಮಾದರಿ

    ಕೊರಟಗೆರೆ: ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಬುಕ್ಕಪಟ್ಟಣ ಗ್ರಾಪಂ ಅಧಿಕಾರಿಗಳು, ಸದಸ್ಯರು ತೋರಿಸಿದ್ದು, ಗಟ್ಲಹಳ್ಳಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿಯನ್ನು ನವೀಕರಣಗೊಳಿಸುವ ಮೂಲಕ ಜಿಲ್ಲೆಗೆ ಮಾದರಿ ಕೇಂದ್ರವನ್ನಾಗಿಸಿದ್ದಾರೆ.

    ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಗಟ್ಲಹಳ್ಳಿಯ ಅಂಗನವಾಡಿ ಕೇಂದ್ರ ಖಾಸಗಿ ನರ್ಸರಿಗಳನ್ನೂ ಮೀರಿಸುವ ರೀತಿಯಲ್ಲಿ ರೂಪುಗೊಂಡಿದೆ. ಚಿಣ್ಣರನ್ನಷ್ಟೇ ಅಲ್ಲದೆ ಪಾಲಕರನ್ನು ಸೆಳೆಯುತ್ತಿದೆ. ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಶಕ್ತಿ ತುಂಬಲು ಮುನ್ನುಡಿ ಬರೆದಂತಿದೆ.

    ಅದೃಷ್ಟದ ಕಟ್ಟಡ: ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆ ತಲುಪಿ ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಅರಸಾಪುರ ಗ್ರಾಪಂ ವ್ಯಾಪ್ತಿಯ ಹೊಸಪಾಳ್ಯಕ್ಕೆ ಮಂಜೂರಾಗಿದ್ದ ಕೇಂದ್ರ, ಅಲ್ಲಿ ನಿವೇಶನ ಸಮಸ್ಯೆ ಎದುರಾಗಿದ್ದರಿಂದ ಅದೃಷ್ಟ ಬಲದಲ್ಲಿ ಗಟ್ಲಹಳ್ಳಿಗೆ ಮಂಜೂರಾಯಿತು. ಕಟ್ಟಡ ಕಾಮಗಾರಿಗೆ ನರೇಗಾದಲ್ಲಿ 6 ಲಕ್ಷ ರೂ. ಬಳಸಿಕೊಳ್ಳಲು ಗ್ರಾಪಂ ಅಧಿಕಾರಿಗಳು ಹಾಗೂ ಅಧ್ಯಕ್ಷರು ನೆರವು ನೀಡಿದರು. ಇದರೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 3 ಲಕ್ಷ ರೂ. ಅನುದಾನ ಪಡೆದು ಕಟ್ಟಡ ನಿರ್ಮಿಸಲಾಗಿದೆ.

    ದಾನಿಗಳ ಸಹಕಾರ: ಗ್ರಾಪಂ ಸದಸ್ಯ ಶಿವರಾಮಯ್ಯ ಮತ್ತು ಪಿಡಿಒ ಸುನಿಲ್ ಕುಮಾರ್ ದಾನಿಗಳ ಬಳಿ ನವೀಕರಣದ ವಿಷಯ ಹಂಚಿಕೊಳ್ಳುತ್ತಿದ್ದಂತೆ ನಿವೃತ್ತ ಇಂಜಿನಿಯರ್ ಕೆ.ಪಿ.ಮಹದೇವಯ್ಯ, ಚಂದ್ರಶೇಖರ್, ತಿಪಟೂರು ಮೂಲದ ಟಿ.ಎನ್.ಸಾಗರ್, ಗಟ್ಲಹಳ್ಳಿಯ ಸಿದ್ದರಾಜು, ಅಮರ್ ಮತ್ತು ಡಿ.ಎಂ.ಮಂಜುನಾಥ್ ಕೇಂದ್ರಕ್ಕೆ ಅಗತ್ಯವಾದ ಎಲ್ಲ ವಸ್ತುಗಳನ್ನು ಖರೀದಿಸಿ ದಾನ ಮಾಡಿದ್ದು, ಕಲಿಕೆಗೆ ಉಪಯುಕ್ತವಾಗಿದೆ.

    ಮಳೆ ನೀರು ಕೊಯ್ಲು: ಜಲ ಸಂರಕ್ಷಣೆಗಾಗಿ ಕಟ್ಟಡದಲ್ಲಿ 64 ಸಾವಿರ ರೂ.ವೆಚ್ಚದಲ್ಲಿ ಮಳೆನೀರು ಸಂಗ್ರಹಣಾ ಘಟಕ, ಅಂಗವಿಕಲರಿಗೆ ವಿಶೇಷ ರ‌್ಯಾಂಪ್, ಮಕ್ಕಳಿಗೆ ಪೌಷ್ಟಿಕ, ತಾಜಾ ತರಕಾರಿ ನೀಡಲು ಆವರಣದಲ್ಲಿ ಕೈತೋಟ ನಿರ್ಮಿಸುವ ಮೂಲಕ ಸೊಪ್ಪು, ತರಕಾರಿ ಬೆಳೆಯಲಾಗುತ್ತಿದೆ. ಕಟ್ಟಡದ ಹೊರ ಭಾಗದಲ್ಲಿ ಧ್ವಜಸ್ತಂಭ, ಗಿಡ ನೆಡುವ, ಒಳಭಾಗದಲ್ಲಿ ಅಕ್ಷರಗಳು, ಸಂಖ್ಯೆಗಳು, ಹಣ್ಣುಗಳು, ಹೂಗಳು, ಸಾಕು, ಕಾಡು ಪ್ರಾಣಿಗಳು ಚಿತ್ತಾರಗಳು ಸೇರಿ ಕಲಿಕೆಗೆ ಪೂರಕವಾದ ಚಿತ್ರಗಳನ್ನು ಬಿಡಿಸಲಾಗಿದ್ದು ಪುಟಾಣಿಗಳನ್ನು ಸೆಳೆಯುತ್ತಿದೆ.

    ಯಾವ ಅನುದಾನವನ್ನು ಯಾವುದಕ್ಕೆ ಮತ್ತು ಹೇಗೆ ಅಭಿವೃದ್ಧಿ ಮಾಡಬಹುದು ಎನ್ನುವುದನ್ನು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತಿಳಿಸಬೇಕು, ಇದರ ಫಲವಾಗಿಯೇ ಈ ಕಟ್ಟಡ ನಿರ್ಮಾಣವಾಗಿದೆ.
    ಬಿ.ಕೆ ಲಕ್ಷ್ಮೀ ಗ್ರಾಪಂ ಅಧ್ಯಕ್ಷೆ , ಬುಕ್ಕಪಟ್ಟಣ

    ಗ್ರಾಪಂ ಸದಸ್ಯರು, ಅಧ್ಯಕ್ಷರು, ಗ್ರಾಮಸ್ಥರ ಸಹಕಾರದಿಂದ ಉತ್ತಮ ಕಟ್ಟಡ ನಿರ್ಮಾಣವಾಗಿದೆ, ಇದೇ ರೀತಿ ಎಲ್ಲ ಗ್ರಾಮದಲ್ಲೂ ಹೀಗೆಯೇ ಸಹಕಾರ, ಪ್ರೋತ್ಸಾಹ ಸಿಕ್ಕರೆ ಎಲ್ಲೆಡೆ ಇನ್ನೂ ಉತ್ತಮವಾದ ವಾತಾವರಣ ಕಲ್ಪಿಸಬಹುದು.
    ಕೆ.ಎಚ್.ಅಂಬಿಕಾ ಸಿಡಿಪಿಒ, ಕೊರಟಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts