More

    ಪುತ್ತೂರಲ್ಲಿ ಘನತ್ಯಾಜ್ಯ ಕರ ಭಾರ!

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಪುತ್ತೂರು ನಗರಾಡಳಿತ ವ್ಯಾಪ್ತಿಯಲ್ಲಿ ವ್ಯಾಪಾರಿಗಳಿಂದ ಅವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ಶುಲ್ಕ ವಸೂಲಿ ಮಾಡಲಾಗುತ್ತಿದೆ. ವಾಣಿಜ್ಯ ಆಧಾರಿತ ಅಂಗಡಿಗಳಿಗೆ ವಿಧಿಸುವ ಟ್ರೇಡ್ ಲೈಸೆನ್ಸ್‌ನ ಕರಕ್ಕಿಂತ ಘನತ್ಯಾಜ್ಯ ಶುಲ್ಕವೇ ಅಧಿಕವಿದೆ ಎಂಬ ಆರೋಪ ಕೇಳಿಬಂದಿದೆ.

    ಎರಡೂವರೆ ವರ್ಷಗಳಿಂದ ಈ ಹೊಸ ಶುಲ್ಕ ಚಾಲ್ತಿಯಲ್ಲಿದ್ದು, ಜಿಲ್ಲೆಯಲ್ಲಿ ಬೇರೆಲ್ಲೂ ಇಲ್ಲದಷ್ಟು ಪ್ರಮಾಣದ ಶುಲ್ಕ ಪುತ್ತೂರು ನಗರಾಡಳಿತ ವಸೂಲಿ ಮಾಡುತ್ತಿದೆ. ತ್ಯಾಜ್ಯ ಸಂಗ್ರಹದ ಹಣವನ್ನು ಈ ಮೊದಲು ಪ್ರತ್ಯೇಕವಾಗಿ ವಸೂಲಿ ಮಾಡಲಾಗುತ್ತಿತ್ತು. ಎರಡೂವರೆ ವರ್ಷದಿಂದ ಟ್ರೇಡ್ ಲೈಸೆನ್ಸ್ ಕರ ಪಾವತಿ ಸಂದರ್ಭ ಘನತ್ಯಾಜ್ಯ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇಲ್ಲಿ ವಾಣಿಜ್ಯ ಆಧಾರಿತ ವರ್ತಕರಿಗೆ ಘನತ್ಯಾಜ್ಯ ಶುಲ್ಕ ಪಾವತಿ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಟ್ರೇಡ್ ಲೈಸೆನ್ಸ್ ಶುಲ್ಕ ಗಣನೀಯವಾಗಿ ಏರಿಕೆಯಾಗಿದ್ದು, ಆ ಮೊತ್ತಕ್ಕೆ ಸರಿಯಾಗಿ ಶೇ.10ರಂತೆ ಪ್ರತಿ ತಿಂಗಳು ತ್ಯಾಜ್ಯ ಸಂಗ್ರಹಣ ಶುಲ್ಕವನ್ನು ಪಾವತಿ ಮಾಡಬೇಕಿದೆ.

    ವ್ಯಾಪಾರಿಗಳು ಟ್ರೇಡ್ ಲೈಸೆನ್ಸ್‌ಗೆ 1 ಸಾವಿರ ರೂ. ಪಾವತಿ ಮಾಡುತ್ತಿದ್ದರೆ, ತಿಂಗಳಿಗೆ 100 ರೂ.ನಂತೆ ವಾರ್ಷಿಕ 1,200 ರೂ. ಘನತ್ಯಾಜ್ಯ ಶುಲ್ಕ ವಿಧಿಸಲಾಗುತ್ತಿದೆ. ಅಂದರೆ ಆತ ವಾರ್ಷಿಕವಾಗಿ 2200 ರೂ. ಕಟ್ಟಬೇಕು. ಟ್ರೇಡ್ ಲೈಸೆನ್ಸ್ ಶುಲ್ಕ 5000 ರೂ. ಇದ್ದರೆ ತಿಂಗಳಿಗೆ ಶೇ.10ರಂತೆ ವರ್ಷಕ್ಕೆ 6000 ಸಾವಿರ ರೂ. ಘನ ತ್ಯಾಜ್ಯ ಶುಲ್ಕವನ್ನು ಭರಿಸಬೇಕು. ಟ್ರೇಡ್ ಲೈಸೆನ್ಸ್ ಮೊತ್ತ ಮತ್ತು ಘನತ್ಯಾಜ್ಯ ಶುಲ್ಕ ಸೇರಿದರೆ ಆತ 11 ಸಾವಿರ ರೂ. ಮೊತ್ತವನ್ನು ಪಾವತಿಸಬೇಕಾಗುತ್ತದೆ.

    ಸಮಾನ ಶುಲ್ಕ: ಲೋಡ್‌ಗಟ್ಟಲೆ ತ್ಯಾಜ್ಯ ಸಂಗ್ರಹಿಸಿ ನಗರಸಭೆ ಡಂಪಿಂಗ್ ಯಾರ್ಡ್‌ಗೆ ನೀಡುವ ದೊಡ್ಡ ಮಳಿಗೆದಾರನಿಗೂ, ಬಕೆಟ್‌ನಲ್ಲಿ ಕಸ ನೀಡುವ ಸಣ್ಣ ವರ್ತಕನಿಗೂ ಒಂದೇ ರೀತಿಯ ಶುಲ್ಕ ವಿಧಿಸಲಾಗಿದೆ. ಟೈಲರ್, ಬ್ಯೂಟಿಪಾರ್ಲರ್ ಸೇರಿದಂತೆ ಲಘು ವಾಣಿಜ್ಯ ಅಂಗಡಿಗಳಲ್ಲಿ ತ್ಯಾಜ್ಯ ಉತ್ಪಾದನೆ ಪ್ರಮಾಣ ತೀರಾ ಕಡಿಮೆ. ಆದರೆ ಆ ಅಂಗಡಿಗಳು ಕೂಡ ದೊಡ್ಡ ಮೊತ್ತ ಪಾವತಿಸಬೇಕಾಗಿದೆ.

    ಆಡಳಿತಾಧಿಕಾರಿ ಅವಧಿಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡು ಅನುಮೋದನೆ ಪಡೆಯುವ ಮೂಲಕ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಹಾಗಾಗಿ ಪ್ರಸಕ್ತ ಕೌನ್ಸಿಲ್ ಸಭೆಯಲ್ಲಿ ಘನತ್ಯಾಜ್ಯ ಶುಲ್ಕ ಬದಲಾವಣೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದಿಂದ ಒಪ್ಪಿಗೆ ಪಡೆದು ಶುಲ್ಕ ಬದಲಾವಣೆಗೆ ತೀರ್ಮಾನ ಕೈಗೊಳ್ಳಲಾಗುವುದು.
    ಜೀವಂಧರ್ ಜೈನ್, ಪುತ್ತೂರು ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts