More

    ಕನಿಷ್ಠ ವೇತನ ಪಡೆಯಲು ‘ಬಿಸಿಯೂಟ ಕಾರ್ಯಕರ್ತೆ’ಯರು ಅರ್ಹರಾಗಿಲ್ಲ; ಹೈಕೋರ್ಟ್​ ಆದೇಶ

    ಬೆಂಗಳೂರು: ರಾಜ್ಯ ಸರ್ಕಾರದ ‘ಮಧ್ಯಾಹ್ನದ ಬಿಸಿಯೂಟ’ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ಸಹಾಯಕರು ಕನಿಷ್ಠ ವೇತನ ಕಾಯ್ದೆಯಡಿ ವೇತನ ಪಡೆಯಲು ಅರ್ಹರಾಗಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

    ಬಿಸಿಯೂಟ ತಯಾರಿಸುವ ಕಾರ್ಯಕರ್ತರು ಹಾಗೂ ಸಹಾಯಕರಿಗೆ ಕನಿಷ್ಠ ವೇತನ ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಂ.ಎಸ್. ನೌಹೇರಾ ಶೇಖ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ಕನಿಷ್ಠ ವೇತನ ಕಾಯ್ದೆ-1948ರಲ್ಲಿ ಉಲ್ಲೇಖಿಸಲಾಗಿರುವ ಅಧಿಸೂಚಿತ ಉದ್ಯೋಗಗಳಿಗೆ ಮಾತ್ರ ಕಾಯ್ದೆಯ ನಿಯಮಗಳು ಅನ್ವಯವಾಗಲಿವೆ. ಬಿಸಿಯೂಟ ಯೋಜನೆಯಡಿಯ ಉದ್ಯೋಗ ಕಾಯ್ದೆಯಲ್ಲಿನ ಅಧಿಸೂಚಿತ ಉದ್ಯೋಗವಾಗಿಲ್ಲ. ಜತೆಗೆ, ಗುತ್ತಿಗೆ ಆಧಾರದಲ್ಲಿ ದಿನಕ್ಕೆ 4 ಗಂಟೆ ಸೀಮಿತ ಅವಧಿಗೆ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ತಯಾರಕರಿಗೆ ಕನಿಷ್ಠ ವೇತನ ಕಾಯ್ದೆಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

    ಕೆಲಸದ ಅವಧಿ 9 ಗಂಟೆ ಇರಬೇಕು: ಕರ್ನಾಟಕ ಕನಿಷ್ಠ ವೇತನ ನಿಯಮಗಳು-1958ರ ಪ್ರಕಾರ ಒಂದು ಸಾಮಾನ್ಯ ಕೆಲಸದ ದಿನವೆಂದು ಪರಿಗಣಿಸಲು 9 ಗಂಟೆ ಅವಧಿ ಕೆಲಸ ಮಾಡಿರಬೇಕು. 4 ಗಂಟೆ ಕೆಲಸ ಮಾಡುವ ಅಡುಗೆ ತಯಾರಕರ ವಿಚಾರದಲ್ಲಿ ಈ ಮಾನದಂಡ ಪಾಲನೆಯಾಗಿಲ್ಲ. ಆದ್ದರಿಂದ, ಕನಿಷ್ಠ ವೇತನ ಕಾಯ್ದೆಯ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ ಹಾಗೂ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪಿಐಎಲ್ ಇತ್ಯರ್ಥಪಡಿಸಿದೆ.

    ಪ್ರಕರಣವೇನು?: 2018ರಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿದ್ದರು. ಈ ವೇಳೆ, ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರ ಕುಂದು-ಕೊರತೆ ಆಲಿಸಿದ್ದ ಅರ್ಜಿದಾರರು, ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿ ಬಿಸಿಯೂಟ ತಯಾರಿಸುವ ಕಾರ್ಯಕತೆಯರಿಗೆ ಕನಿಷ್ಠ ವೇತನ ನಿಗದಿಪಡಿಸಲು ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದರು.

    ಸದ್ಯ ಸಿಗುತ್ತಿರುವುದೆಷ್ಟು?: ಯೋಜನೆ ಜಾರಿಗೆ ಬಂದಾಗ ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು 1 ಸಾವಿರ ರೂ. ಗೌರವಧನ ನೀಡಲಾಗುತ್ತಿತ್ತು. 2014-15ರಲ್ಲಿ ಮುಖ್ಯ ಅಡುಗೆ ತಯಾರಕರಿಗೆ 1,700 ರೂ ಹಾಗೂ ಅಡುಗೆ ತಯಾರಕರಿಗೆ 1,600 ರೂ. ನಿಗದಿಪಡಿಸಲಾಗಿತ್ತು. 2017ರಲ್ಲಿ ಈ ಮೊತ್ತವನ್ನು ಕ್ರಮವಾಗಿ 2,200 ಹಾಗೂ 2,100 ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. 2018ರಿಂದ ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆಯವರಿಗೆ 2,700 ರೂ. ಹಾಗೂ ಸಹಾಯಕರಿಗೆ 2,600 ರೂ. ಗೌರವಧನ ನೀಡಲಾಗುತ್ತಿದೆ.

    https://www.vijayavani.net/kodagu-madikeri-thithimathi-siddaramaiah/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts