More

    ನಿಷೇಧಾಜ್ಞೆ ವಿಧಿಸಿದ್ದು ಕಾನೂನುಬಾಹಿರವೆಂದು ಹೈಕೋರ್ಟ್ ತೀರ್ಪು: ಸಿಎಎ ಪ್ರತಿಭಟನೆ ತಡೆಗೆ ರಾಜಧಾನಿಯಲ್ಲಿ ಸೆಕ್ಷನ್144 ಜಾರಿ ಪ್ರಕರಣ

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ತಡೆಯಲು ಸಿಆರ್​ಪಿಸಿ ಸೆಕ್ಷನ್ 144ರ ಅನ್ವಯ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಹೇರಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶ ಅಕ್ರಮ ಹಾಗೂ ಕಾನೂನುಬಾಹಿರ ಎಂದು ಹೈಕೋರ್ಟ್ ತೀರ್ಪು ನೀಡಿದೆ.

    ರಾಜಧಾನಿಯಲ್ಲಿ ಕಳೆದ ಡಿ.18ರಿಂದ 3 ದಿನ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಸಂಸದ ರಾಜೀವ್ ಗೌಡ, ಶಾಸಕಿ ಸೌಮ್ಯಾರೆಡ್ಡಿ ಮತ್ತಿತರರು ಸಲ್ಲಿಸಿದ್ದ ಪಿಐಎಲ್​ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿತು.

    ಸಿಆರ್​ಪಿಸಿ ಸೆಕ್ಷನ್ 144 ಜಾರಿಗೊಳಿಸಲು ಪೊಲೀಸ್ ಆಯುಕ್ತರಿಗೆ ಸಂಪೂರ್ಣ ಅಧಿಕಾರವಿದೆ. ಆದರೂ ಆದೇಶಕ್ಕೂ ಮುನ್ನ ಸೂಕ್ತ ವಿಚಾರಣೆ ನಡೆಸಬೇಕು. ಆದೇಶದಲ್ಲಿ ನಿಷೇಧಾಜ್ಞೆ ಹೇರಲು ಸರಿಯಾದ ಕಾರಣ ನಮೂದಿಸಬೇಕು. ಆದರೆ, ಆಯುಕ್ತರು ಅದ್ಯಾವುದನ್ನೂ ಮಾಡಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

    ದೆಹಲಿಯ ರಾಮ್ೕಲಾ ಮೈದಾನ ಮತ್ತು ಅನುರಾಧ ಬಾಸಿನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ, ನಿಷೇಧಾಜ್ಞೆ ಆದೇಶ ನ್ಯಾಯಾಂಗದ ಪರಾಮರ್ಶೆಯಲ್ಲಿ ನಿಲ್ಲುವಂತಿರಬೇಕು. ಈ ಪ್ರಕರಣದಲ್ಲಿ ಪೊಲೀಸ್ ಆಯುಕ್ತ ಭಾಸ್ಕರ್​ರಾವ್ ಹೊರಡಿಸಿರುವ ಆದೇಶ ಕಾನೂನುಬದ್ಧವಾಗಿಲ್ಲ. ಅದು ನ್ಯಾಯಾಂಗದ ಪರಾಮರ್ಶೆಯಲ್ಲಿ ನಿಲ್ಲುವುದಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

    ಸೂಕ್ತ ವಿಚಾರಣೆ ನಡೆಸಿಲ್ಲ:  ನಿಷೇಧಾಜ್ಞೆ ಜಾರಿಗೊಳಿಸುವಾಗ ಪೊಲೀಸ್ ಆಯುಕ್ತರು ಜಿಲ್ಲಾ ಮ್ಯಾಜಿಸ್ಟ್ರೇಟ್ ರೀತಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸೆಕ್ಷನ್ ಜಾರಿಗೊಳಿಸಬೇಕೇ ಬೇಡವೇ ಎಂಬ ಬಗ್ಗೆ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ, ಡಿಸಿಪಿಗಳ ವರದಿ ಆಧರಿಸಿ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿದ್ದು, ವರದಿಗಳ ಬಗ್ಗೆ ಸೂಕ್ತ ವಿಚಾರಣೆ ನಡೆಸಿಲ್ಲ. ಪ್ರತಿಭಟನೆಗೆ ಅನುಮತಿ ನೀಡಿದ್ದ ಕೆಲ ಡಿಸಿಪಿಗಳು, ನಂತರ ನಿಷೇಧಾಜ್ಞೆ ಜಾರಿ ಮಾಡುವಂತೆ ವರದಿ ನೀಡಿದ್ದಾರೆ. ಅದನ್ನು ಆಧರಿಸಿ ಆಯುಕ್ತರು ಯಾಂತ್ರಿಕವಾಗಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಯಾವ ಕಾರಣಕ್ಕೆ ಸೆಕ್ಷನ್ 144 ಜಾರಿಗೊಳಿಸಲಾಗುತ್ತಿದೆ ಎಂಬುದಕ್ಕೆ ಕಾರಣ ನೀಡಿಲ್ಲ. ಆದ್ದರಿಂದ ಆ ಆದೇಶ ಊರ್ಜಿತವಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

    ಮೂಲಭೂತ ಹಕ್ಕು ಉಲ್ಲಂಘನೆ: ದೆಹಲಿಯ ರಾಮ್ೕಲಾ ಮೈದಾನದ ಸೇರಿ ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶವಿದೆ. ಅದು ಮೂಲಭೂತ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳ ನೀತಿ ನಿರ್ಧಾರಗಳ ವಿರುದ್ಧ ಪ್ರತಿಭಟನೆ, ಬಂದ್, ರಸ್ತೆ ತಡೆ ನಡೆಸುವ ಎಲ್ಲ ಅಧಿಕಾರ ಸಾರ್ವಜನಿಕರಿಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಹೋರಾಟ ನಡೆಸಲು ಅನುಮತಿ ನೀಡಿದ ಪೊಲೀಸರು, ನಂತರ ನಿಷೇಧಾಜ್ಞೆ ಜಾರಿಗೊಳಿಸಿ ಪ್ರತಿಭಟನಾಕಾರರ ಮೂಲಭೂತ ಹಕ್ಕು ಕಸಿದುಕೊಂಡಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts