More

    ಅಪಘಾತ ಕೇಸಲ್ಲಿ ‘ಪಾವತಿ ಮತ್ತು ವಸೂಲಾತಿ ಹಕ್ಕು ಅನ್ವಯ ಹೈಕೋರ್ಟ್ ಆದೇಶ

    ಬೆಂಗಳೂರು :ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಚಾಲಕ ಮಾನ್ಯತೆಯ ಚಾಲನಾ ಪರವಾನಗಿ ಹೊಂದಿದ್ದಾನೆ ಎನ್ನುವುದು ಸಾಬೀತಾಗದ ಸಂದರ್ಭದಲ್ಲಿ ‘ಪಾವತಿ ಮತ್ತು ವಸೂಲಾತಿ’ ಹಕ್ಕು ಬಳಸಿ ವಿಮಾ ಕಂಪನಿ ಪರಿಹಾರ ಪಾವತಿಸಿ, ನಂತರ ಆ ಮೊತ್ತವನ್ನು ವಾಹನ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.


    ಲಾರಿ ಅಪಘಾತದಲ್ಲಿ ಮರಣಹೊಂದಿದ ಚಾಲಕನಿಗೆ ಪರಿಹಾರ ಘೋಷಿಸಿದ್ದ ಚಿತ್ರದುರ್ಗದ ‘ಕಾರ್ಮಿಕ ಪರಿಹಾರ ಆಯುಕ್ತರ’ ತೀರ್ಪು (ಅಧೀನ ನ್ಯಾಯಾಲಯದ) ಪ್ರಶ್ನಿಸಿ ಇಂಡಿಯಾ ಇನ್ಸೂರೆನ್ಸ್ ಕಂಪನಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಏಕಸದಸ್ಯ ಪೀಠ, ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿತು ಮತ್ತು ಅಧೀನ ನ್ಯಾಯಾಲಯದ ಆದೇಶ ಬದಲಿಸಿತು.


    ಈ ವೇಳೆ, ಅರ್ಜಿದಾರರ ಪರ ವಕೀಲರು, ಮೃತರ ಚಾಲನಾ ಪರವಾನಗಿ ಅಪಘಾತ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾಗಿಲ್ಲ ಮತ್ತು ಈ ಕುರಿತು ಯಾವುದೇ ವಿಷಯವನ್ನು ಆಯುಕ್ತರ ಮುಂದೆ ಪ್ರಸ್ತುತಪಡಿಸಲಾಗಿಲ್ಲ ಎಂದು ವಾದ ಮಂಡಿಸಿದರು. ಅಲ್ಲದೆ, ವಾಹನ ಪರವಾನಗಿ ಇಲ್ಲದೆಯೇ ವಾಹನ ಚಲಾಯಿಸಲು ಲಾರಿ ಮಾಲೀಕ ಅನುಮತಿ ನೀಡಿದ್ದು ಈ ಮೂಲಕ ವಾಹನ ಚಲಾವಣೆಯ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದರು.


    ಪ್ರತಿವಾದಿಪರ ವಕೀಲರು ಮರಣ ಹೊಂದಿದವರು ಮಾನ್ಯತೆ ಹೊಂದಿದ ಚಾಲನಾ ಪರವಾನಗಿ ಹೊಂದಿರದಿರುವುದನ್ನು ಸಾಬೀತುಪಡಿಸುವ ಪ್ರಾಥಮಿಕ ಹೊಣೆಗಾರಿಕೆ ವಿಮಾ ಕಂಪನಿಯದ್ದು ಎಂದು ವಾದಿಸಿದರು. ವಿಚಾರಣೆ ಆಲಿಸಿದ ನ್ಯಾಯಾಲಯವು, ಪ್ರಸ್ತುತ ಪ್ರಕರಣದಲ್ಲಿ ಚಾಲಕ ಹಾಗೂ ಮಾಲೀಕರ ನಡುವೆ ಉದ್ಯೋಗದಾತರ-ಉದ್ಯೋಗಿ ಸಂಬಂಧವಿದೆ. ಹಾಗಾಗಿ ಕಾರ್ಮಿಕರ ಪರಿಹಾರ ಕಾಯ್ದೆ 1923ರ ಸೆಕ್ಷನ್ 22 ರ ಅಡಿಯಲ್ಲಿ ಚಾಲಕನಿಗೆ ಸಂಬಂಧಪಟ್ಟವರು ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ನ್ಯಾಯಮಂಡಳಿಯ ತೀರ್ಮಾನವನ್ನು ಎತ್ತಿಹಿಡಿದಿದೆ.


    ಅಲ್ಲದೆ, ಪ್ರತಿವಾದಿಗಳು, ಮೃತರು ಚಾಲನಾ ಪರವಾನಗಿ ಹೊಂದಿದ್ದಾರೆಂದು ಹೇಳಿಕೊಳ್ಳುತ್ತಾರೆ, ಆದರೆ, ಅದಕ್ಕೆ ಪುರಾವೆಗಳಿಲ್ಲ. ಇಲ್ಲಿ ಮಾಲೀಕರು ನಿರ್ಲಕ್ಷ್ಯ ಅಥವಾ ಸತ್ತವರ ಚಾಲನಾ ಪರವಾನಗಿ ಪರಿಶೀಲಿಸಿಲ್ಲ ಎಂಬ ಆರೋಪ ಮಾಡಲಾಗುವುದಿಲ್ಲ. ಮೃತರು ನಕಲಿ ಪರವಾನಗಿ ಹೊಂದಿರಬಹುದು, ಅಂತಹ ಸಂದರ್ಭಗಳಲ್ಲಿ ಪಾವತಿ ಮತ್ತು ವಸೂಲಾತಿ ಹಕ್ಕನ್ನು ಅನ್ವಯಿಸಬಹುದಾಗಿದೆ ಎಂದು ಪೀಠ ಹೇಳಿತು. ಮುಂದುವರಿದು ‘ಪಾವತಿ ಮತ್ತು ವಸೂಲಾತಿ’ ಹಕ್ಕಿನಡಿ ವಿಮಾ ಕಂಪನಿಯು ಪರಿಹಾರ ನೀಡಬೇಕು ಮತ್ತು ಆ ಮೊತ್ತವನ್ನು ವಾಹನ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

    ಪ್ರಕರಣವೇನು?
    ಎಸ್.ಎಂ.ನೂರುದ್ದೀನ್ ಒಡೆತನದ ಲಾರಿಯಲ್ಲಿ ಚಾಲಕನಾಗಿದ್ದ ಘೌಸ್ ಎಂಬಾತ ಅಡಕಮರಹಳ್ಳಿ ಬಳಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಕಾರ್ಮಿಕರ ಪರಿಹಾರ ಕಾಯ್ದೆಯ ಸೆಕ್ಷನ್ 22ರ ಅಡಿಯಲ್ಲಿ ಪರಿಹಾರ ಕೋರಿ ಅವರ ಕಾನೂನು ಪ್ರತಿನಿಧಿಗಳು ಆಯುಕ್ತರನ್ನು ಸಂಪರ್ಕಿಸಿದರು. ಆದರೆ ಘಟನೆ ವೇಳೆ ಲಾರಿ ಚಾಲಕ ಮಾನ್ಯತೆಯ ಪರವಾನಗಿ ಹೊಂದಿರುವುದು ಸ್ಪಷ್ಟಪಡದ ಹಿನ್ನೆಲೆಯಲ್ಲಿ ವಿಮೆ ಕಂಪನಿ ಪರಿಹಾರ ನೀಡಲು ವಿರೋಧಿಸಿತ್ತು. ಆದರೆ ಅಧೀನ ನ್ಯಾಯಾಲಯುವು ಶೇ.12 ಬಡ್ಡಿಯೊಂದಿಗೆ ರೂ. 4,23,580 ನೀಡಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕಂಪೆನಿ ಮೇಲ್ಮನವಿ ಸಲ್ಲಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts