More

    ನಿರಂತರ ಮಳೆಗೆ ಕುಸಿಯುತ್ತಿವೆ ಸೂರು : ಪ್ರಾಣಾಪಾಯದಲ್ಲಿ ಕುಟುಂಬಸ್ಥರು

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಾಡಿಕೆಗಿಂತಲೂ ದಾಖಲೆ ಮಟ್ಟದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಶಿಥಿಲಾವಸ್ಥೆಯ ಮನೆಗಳಲ್ಲಿ ಆಶ್ರಯ ಪಡೆದಿರುವ ನಿವಾಸಿಗಳಲ್ಲಿ ಕಟ್ಟಡ ಕುಸಿತ, ಪ್ರಾಣಭೀತಿ ಎದುರಾಗಿದೆ.

    ಜಿಲ್ಲೆಯಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಗುರುತಿಸುತ್ತಿದ್ದರೂ ಶಿಥಿಲಾವಸ್ಥೆ ಮನೆಯಲ್ಲಿ ವಾಸಿಸುತ್ತಿರುವ ಬಡವರಿಗೇನೂ ಕಡಿಮೆ ಇಲ್ಲ. ಮಳೆಗಾಲದಲ್ಲಿ ಅಲ್ಲಲ್ಲಿ ಮನೆಗಳು ಕುಸಿದು ಬೀಳುತ್ತಿವೆ. ಇದಕ್ಕೆ ಕೆಲವರು ಬಲಿಯಾಗುತ್ತಿದ್ದರೆ, ಮತ್ತೆ ಹಲವರು ಪ್ರಾಣಾಪಾಯದಿಂದ ಪಾರಾದರೂ ಅನೇಕರು ಗಾಯಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

    ಭಯದಲ್ಲೇ ಜೀವನ: ಜಿಲ್ಲೆಯಲ್ಲಿ 157 ಗ್ರಾಪಂಗಳಿವೆ. ಈ ಪೈಕಿ ಪ್ರತಿಯೊಂದು ಗ್ರಾಮದಲ್ಲೂ ಗೋಡೆ ಬಿರುಕು ಬಿಟ್ಟಿದೆೆ. ಪ್ರತಿ ಮಳೆಗಾಲದ ಸಂದರ್ಭದಲ್ಲಿ ಕುಟುಂಬಸ್ಥರು ಸಾಲ ಮಾಡಿ ಸಣ್ಣಪುಟ್ಟ ರಿಪೇರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನಿರಂತರ ಮಳೆಗೆ ಸೀಳಿದ ಗೋಡೆಗಳಲ್ಲಿ ನೀರು ನಿಲ್ಲುತ್ತಿದ್ದು ಯಾವಾಗ ಬೀಳುತ್ತದೆಯೋ? ಎಂಬ ಭಯದಲ್ಲೇ ದಿನ ಕಳೆಯುವಂತಾಗಿದೆ.

    ಬೀಳುತ್ತಿರುವ ಮನೆಗಳು: ಗುಡಿಬಂಡೆಯ ಪೋಲಂಪಲ್ಲಿಯಲ್ಲಿ ಶುಕ್ರವಾರ ರಾತ್ರಿ ಮನೆಯ ಗೋಡೆ ಕುಸಿದು ಇಬ್ಬರು ಗಾಯಗೊಂಡಿದ್ದಾರೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿ ನಾರಾಯಣಪ್ಪ ಎಂಬುವವರ ಮನೆ ಕುಸಿದಿದ್ದು, ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಂದೆ ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ಸಿಡಿಲಿಗೆ ಮನೆ ಕುಸಿದು ಹಲವರು ಗಾಯಗೊಂಡಿದ್ದರು. ಬಾಗೇಪಲ್ಲಿ, ಗೌರಿಬಿದನೂರು ಸೇರಿ ವಿವಿಧೆಡೆ ಶಿಥಿಲಾವಸ್ಥೆಯಲ್ಲಿನ ಮನೆಗಳು ಬೀಳುತ್ತಿವೆ.

    38 ಸಾವಿರ ನಿವೇಶನ ವಿತರಣೆ ಗುರಿ: ಗ್ರಾಮೀಣ ಭಾಗದಲ್ಲಿ 30*20 ಅಳತೆಯ ನಿವೇಶನಗಳ ಹಂಚಿಕೆಗೆ 617.05 ಎಕರೆ ಜಮೀನು ಗುರುತಿಸಿದ್ದು, ಈ ಪೈಕಿ 479.63 ಎಕರೆ ಜಮೀನು ಮಂಜೂರಾಗಿದೆ. 203 ಎಕರೆ ಜಮೀನಿಗೆ ಬಡಾವಣೆ ನಕ್ಷೆ ಸಿದ್ಧವಾಗಿದೆ. 93.29 ಎಕರೆ ಜಮೀನು ಅಭಿವೃದ್ಧಿಗೊಳಿಸಲಾಗಿದೆ. 31.21 ಎಕರೆಯಲ್ಲಿ ಕೆಲಸ ಪ್ರಗತಿಯಲ್ಲಿದೆ. ಇನ್ನು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಿವೇಶನ ನೀಡುವ ಉದ್ದೇಶಕ್ಕಾಗಿ 205.05 ಎಕರೆ ಜಮೀನು ಮಂಜೂರಾಗಿದೆ. ಈ ಪೈಕಿ 140.32 ಎಕರೆಗೆ ಬಡಾವಣೆ ನಕ್ಷೆ ತಯಾರಾಗಿದೆ. ಜಿಲ್ಲಾಡಳಿತವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 38,000 ನಿವೇಶನಗಳ ಹಂಚಿಕೆಯ ಗುರಿ ಹೊಂದಲಾಗಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಗ್ರಾಪಂ ಮೂಲಕ ನಡೆಸಿರುವ ಸಮೀಕ್ಷೆ ಪ್ರಕಾರ 61,151 ವಸತಿ ಮತ್ತು ನಿವೇಶನ ರಹಿತರು ಇದ್ದಾರೆ. ನಗರ, ಪಟ್ಟಣ ಪ್ರದೇಶಗಳಲ್ಲೂ ಸ್ವಂತ ಸೂರಿಲ್ಲದೆ ಅನೇಕ ಜನರು ಬಾಡಿಗೆ ಮನೆ ಆಶ್ರಯಿಸಿದ್ದಾರೆ.

    ತ್ವರಿತ ಸಮೀಕ್ಷೆಗೆ ಆಗ್ರಹ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿನ ಮನೆಗಳು, ಬೀಳುವ ಹಂತದಲ್ಲಿರುವ ಅಪಾಯಕಾರಿ ಮನೆಗಳು, ನಿರೀಕ್ಷೆಯ ಪರಿಹಾರ ಕ್ರಮಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ. ಮಳೆಗಾಲದಲ್ಲಿ ಮನೆ ಕುಸಿದು ಬಿದ್ದ ಸಂದರ್ಭದಲ್ಲಿ ಪ್ರಾಣಹಾನಿಗೆ ನಷ್ಟ ಪರಿಹಾರ ನೀಡುವ ಚಾಳಿಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರದರ್ಶಿಸುತ್ತಿದ್ದಾರೆ. ಆದರೆ, ಸ್ಥಳೀಯ ಮಟ್ಟದಲ್ಲಿ ಮೊದಲೇ ಶಿಥಿಲಾವಸ್ಥೆಯಲ್ಲಿನ ಮನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಜನರನ್ನು ಸಂರಕ್ಷಿಸುವ ಕೆಲಸ ಮಾಡದಿರುವುದು ವಿಪರ್ಯಾಸ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts