More

    ಬಿಳಿಜೋಳ ಕಪ್ಪಾಗಿವೆ ಎಂದು ಖರೀದಿಗೆ ಹಿಂದೇಟು

    ಶಿಗ್ಗಾಂವಿ(ಗ್ರಾ): ಬಿಳಿಜೋಳ ಕಪ್ಪಾಗಿವೆ ಎಂದು ಕುಂಟುನೆಪ ಹೇಳಿ ಖರೀದಿಗೆ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಪಟ್ಟಣದ ಬೆಂಬಲ ಬೆಲೆ ಖರೀದಿ ಕೇಂದ್ರದ ಎದುರು ರೈತರು ಟೈರ್​ಗೆ ಬೆಂಕಿ ಹಚ್ಚಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಶಿಗ್ಗಾಂವಿ ತಾಲೂಕಿನಲ್ಲಿ ಜೋಳ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿದ್ದು, ಅಂದಾಜು 4240 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಜೋಳ ಹಾಲು ಕಟ್ಟುವ ಹಂತದಲ್ಲಿದ್ದಾಗ ಅಕಾಲಿಕ ಮಳೆ ಸುರಿದು ವಾತಾವರಣದಲ್ಲಿ ತೇವಾಂಶ ಹೆಚ್ಚಾದ ಕಾರಣಕ್ಕೆ ಬೂಸ್ಟ್ ಬಂದು ಕಾಳು ಕಪ್ಪಾಗಿದೆ. ಇದನ್ನೇ ಕಾರಣವನ್ನಾಗಿಸಿಕೊಂಡ ಖರೀದಿ ಕೇಂದ್ರದ ಸಿಬ್ಬಂದಿ ಜೋಳ ತಿರಸ್ಕರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರಕೃತಿ ವಿಕೋಪಕ್ಕೆ ಕಪ್ಪಾಗಿರುವ ಬಿಳಿಜೋಳ ಮಾರುಕಟ್ಟೆಯಲ್ಲಿಯೂ ಖರೀದಿಸದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕಪ್ಪಾಗಿರುವ ಜೋಳವನ್ನು ಸರ್ಕಾರವೇ ಖರೀದಿಸಲಿ, ಇಲ್ಲವೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಂಜುನಾಥ ಮುನವಳ್ಳಿ, ಕೃಷಿ ಅಧಿಕಾರಿ ಸುರೇಶಬಾಬುರಾವ್ ದಿಕ್ಷೀತ್ ಪ್ರತಿಭಟನಾನಿರತ ರೈತರ ಸಮಸ್ಯೆ ಆಲಿಸಿದರು.

    ನಂತರ ಮಾತನಾಡಿದ ತಹಸೀಲ್ದಾರ್, ಈ ಬಾರಿ ಪಡಿತರ ವಿತರಣೆಯಲ್ಲಿ ಅಕ್ಕಿಯ ಪ್ರಮಾಣ ಕಡಿತ ಮಾಡಿ ಬಿಳಿಜೋಳ ನೀಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಬಿಳಿಜೋಳ ಖರೀದಿ ಆರಂಭಿಸಿದೆ. ಆದರೆ, ಬಿಳಿಜೋಳ ಕಪ್ಪಾಗಿರುವ ಕಾರಣಕ್ಕೆ ಖರೀದಿ ಕೇಂದ್ರದಲ್ಲಿ ತಿರಸ್ಕರಿಸಲಾಗುತ್ತಿದೆ. ಈ ಕುರಿತು ಜಿಲ್ಲಾ ಆಹಾರ ನಿರೀಕ್ಷಕರ ಜತೆ ರ್ಚಚಿಸಿ, ಇರುವುದರಲ್ಲಿಯೇ ಉತ್ತಮ ಗುಣಮಟ್ಟದ ಜೋಳ ಖರೀದಿಸಲು ಅನುವು ಮಾಡಿಕೊಡಲಾಗುವುದು ಎಂದು ಸಮಜಾಯಿಷಿ ನೀಡಿದರು.

    ಇದಕ್ಕೆ ಸಮ್ಮತಿಸಿದ್ದ ರೈತರು, ಮತ್ತೆ ಖರೀದಿ ಕೇಂದ್ರ ಬಂದ್ ಮಾಡಿ ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಪ್ರತಿಭಟನೆ ಇಂದು ಮುಂದುವರಿಯಲಿದೆ.

    ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಬಸಲಿಂಗಪ್ಪ ನರಗುಂದ, ಕೆಪಿಸಿಸಿ ಸದಸ್ಯ ಷಣ್ಮುಖ ಶಿವಳ್ಳಿ, ಸಂತೋಷ ಕಟಗಿ, ಪಾಂಡು ಖುರ್ಸಾಪುರ, ಸುರೇಶ ಮುಗಳಿ, ಚನ್ನಪ್ಪ ತೊಂಡೂರ ಹಾಗೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts