More

    ಸ್ನೇಹ ಹಂಚಿದ ರಾಜಕಾರಣಿ ಇನ್ನು ನೆನಪು

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಬೆಂಗಳೂರಿನಲ್ಲಿ ಸೋಮವಾರ ನಿಧನ ಹೊಂದಿದ ಹಿರಿಯ ರಾಜಕಾರಣಿ, ಸಹೃದಯಿ ಡಿ.ಮಂಜುನಾಥ್ ಇನ್ನು ನೆನಪು ಮಾತ್ರ!

    ನಾಲ್ಕು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಈ ನೇತಾರ ಇದ್ದಷ್ಟೂ ದಿನ ಪ್ರೀತಿ, ಸ್ನೇಹ ಹಂಚಿದವರು.

    ಮೂಲತಃ ಕಾಂಗ್ರೆಸಿನವರಾದರೂ 70ರ ದಶಕದಲ್ಲಿ ಕಾಂಗ್ರೆಸ್ ತೊರೆದು ಜನತಾಪರಿವಾರದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಂಡರು.

    ಜನತಾಪರಿವಾರದಲ್ಲಿ ಡಿ.ಮಂಜುನಾಥ್ ಎಷ್ಟು ಎತ್ತರಕ್ಕೆ ಬೆಳೆದಿದ್ದರೆಂದರೆ ಪ್ರದೇಶ ಜನತಾ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದು.

    ಶಿಕ್ಷಣ, ಉನ್ನತ ಶಿಕ್ಷಣ, ಅರಣ್ಯ, ಕಾರ್ಮಿಕ, ಯೋಜನಾ ಖಾತೆಗಳ ಸಚಿವರಾಗಿ ಮಾತ್ರವಲ್ಲ ವಿಧಾನಪರಿಷತ್ ಸಭಾಪತಿ ಆಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರಿಗಿದೆ.

    ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿ ಜನಿಸಿದ ಡಿ.ಮಂಜುನಾಥ್ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಹಿರಿಯೂರು ವಿಧಾನಸಭೆ ಕ್ಷೇತ್ರವನ್ನು ತಮ್ಮ ರಾಜಕೀಯ ಕರ್ಮಭೂಮಿಯಾಗಿಸಿಕೊಂಡರು.

    ಸಿಟ್ಟು, ಸೆಡವುಗಳಿಂದ ದೂರವಿದ್ದ ಇವರು ಯಾರೇ ಬಂದರೂ ಹೆಗಲ ಮೇಲೆ ಕೈಯಿಟ್ಟು ಮಾತನಾಡಿಸುತ್ತಿದ್ದ ಸಹೃದಯರಾಗಿದ್ದರು.
    ಡಿ.ಮಂಜುನಾಥ್ ಅವರಲ್ಲಿ ಪ್ರೀತಿ, ವಿಶ್ವಾಸಕ್ಕೆ ಕೊರತೆ ಇರಲಿಲ್ಲ. ಎಂದೂ ದ್ವೇಷದ ರಾಜಕಾರಣ ಮಾಡದ ಈ ನಾಯಕ ಒಂದರ್ಥದಲ್ಲಿ ಅಜಾತಶತ್ರುವಾಗಿದ್ದವರು.

    ರಾಜಕಾರಣದ ಸುದೀರ್ಘ ಪಯಣದಲ್ಲಿ ಹಲವು ಏಳು-ಬೀಳು ಕಂಡವರಿವರು. ಇವುಗಳ ನಡುವೆಯೂ ಅಭಿವೃದ್ಧಿ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದರು.

    ತಾಲೂಕು ಅಭಿವೃದ್ಧಿ ಮಂಡಳಿಯಿಂದ ರಾಜಕಾರಣ ಆರಂಭಿಸಿದರು. 1967 ರಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಆಯ್ಕೆಯಾದರು.

    ಇದೇ ವೇಳೆ ವಿಧಾನಸಭೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ತದನಂತರ ಕಾಂಗ್ರೆಸ್ ತೊರೆದು 1977 ರಲ್ಲಿ ಜನತಾ ಪರಿವಾರದ ತೆಕ್ಕೆಗೆ ಜಾರಿದರು.

    ಜನತಾದಳ ಹೋಳಾದಾಗ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾ ದಳದಲ್ಲಿ ಗುರುತಿಸಿಕೊಂಡರು.

    ಎಸ್.ಎಂ.ಕೃಷ್ಣ ನೇತೃತ್ವದ ಸರಕಾರದಲ್ಲಿ ಹಿರಿಯೂರು ಪಟ್ಟಣದ ಬಳಿ ಉರುವಲು ವಿದ್ಯುತ್ ಕೇಂದ್ರ ಸ್ಥಾಪಿಸಲು ಸರಕಾರ ಮುಂದಾದಾಗ ಇದರ ವಿರುದ್ಧ ಡಿ.ಮಂಜುನಾಥ್ ಬೀದಿಗಿಳಿದಿದ್ದರು.

    ಈ ವೇಳೆ ಚಳವಳಿ ಹಾದಿ ತಪ್ಪಿ ಗೋಲಿಬಾರ್ ನಡೆದು ಮೂವರು ಸ್ಥಳದಲ್ಲಿಯೇ ಮೃತಪಟ್ಟು 75 ಮಂದಿ ವಿರುದ್ಧ ಕೇಸ್ ದಾಖಲಾಗಿತ್ತು. ಹಿರಿಯೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಸ್ತೆಯಲ್ಲಿ ನೆತ್ತರು ಹರಿದ ಈ ಘಟನೆ ಅವರನ್ನು ಬಹಳಷ್ಟು ವಿಚಲಿತರನ್ನಾಗಿಸಿತ್ತು.

    ಕಳೆದ ಕೆಲವು ವರ್ಷಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಉಳಿದು ಹಿರಿಯೂರು ಪಕ್ಕದ ಅವರ ತೋಟದ ಮನೆಯಲ್ಲಿ ವಿಶ್ರಾಂತ ಜೀವನ ಕಳೆಯುತ್ತಿದ್ದರು.

    ಇವರ ಹಿರಿಯ ಮಗ ಜಗದೀಶ್ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮತ್ತೊಬ್ಬ ಮಗ ರತ್ನಾಕರ ಬಾಬು ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಜೆಡಿಎಸ್‌ನಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts