More

    ಜನಾಭಿಪ್ರಾಯ ಆಧರಿಸಿ ಪ್ರಣಾಳಿಕೆ ತಯಾರಿ

    ಶಿವಮೊಗ್ಗ: ನಮ್ಮ ಗ್ಯಾರಂಟಿಗೆ ವಾರಂಟಿಯಿಲ್ಲ ಎಂದು ಲೇವಡಿ ಮಾಡುತ್ತಿದ್ದ ಬಿಜೆಪಿ ಈಗ ನಮ್ಮ ಗ್ಯಾರಂಟಿಯನ್ನೇ ಕದ್ದಿದೆ. ಈ ಹಿಂದೆ ಪಕ್ಷದ ವಿಚಾರ ಆಧರಿಸಿ ಚುನಾವಣೆ ಪ್ರಣಾಳಿಕೆ ಮೂಲಕ ಜನರಿಗೆ ಭರವಸೆ ನೀಡುತ್ತಿದ್ದೆವು. ಈಗ ಜನಾಭಿಪ್ರಾಯ ಆಧರಿಸಿ ಪ್ರಣಾಳಿಕೆ ರೂಪಿಸುತ್ತಿದ್ದೇವೆ. ನಮ್ಮ ಪ್ರಣಾಳಿಕೆಯೇ ಅಭ್ಯರ್ಥಿಗಳನ್ನು ಗೆಲ್ಲಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿಯವರು ಭಾವನಾತ್ಮಕ ವಿಚಾರಗಳ ಮೂಲಕ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 10 ವರ್ಷಗಳಲ್ಲಿ 150 ಲಕ್ಷ ಕೋಟಿ ರೂ. ಸಾಲ ಮಾಡಿದ್ದೇ ಬಿಜೆಪಿ ಸಾಧನೆ. ಕಾಂಗ್ರೆಸ್ ಕಾರ್ಯಕರ್ತರ ಡಿಎನ್‌ಎನಲ್ಲಿ ರಾಷ್ಟ್ರಪ್ರೇಮವಿದೆ. ನಾವು ಪ್ರತಿಪಾದಿಸುವ ಹಿಂದುತ್ವ ಸಂವಿಧಾನದಲ್ಲಿ ಅಡಕವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಈ ಬಾರಿಯ ಲೋಕಸಭಾ ಚುನಾವಣೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ. ಪ್ರಸ್ತುತ ಪ್ರಜಾಪ್ರಭುತ್ವಕ್ಕೆ ಆತಂಕ ಎದುರಾಗಿದೆ. ಸಂವಿಧಾನದ ಕಗ್ಗೊಲೆಯಾಗುತ್ತಿದೆ. ಇದನ್ನು ತಡೆಯುವುದನ್ನೇ ಮುಖ್ಯ ಉದ್ದೇಶವಾಗಿಸಿಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.
    ಚುನಾವಣೆಯಲ್ಲಿ ಆಯ್ಕೆಯಾಗಿ ರಚನೆಯಾದ ಸರ್ಕಾರಕ್ಕೆ ಭಂಗತರುವ ಮೂಲಕ ಪ್ರಜಾಸತ್ತಾತ್ಮಕ ಆಡಳಿತದ ಕಗ್ಗೊಲೆ ಮಾಡಲಾಗುತ್ತಿದೆ. ಸಿಬಿಐ, ಜಾರಿ ನಿರ್ದೇಶನಾಲಯದ ಮೂಲಕ ದಾಳಿ ನಡೆಸಲಾಗುತ್ತಿದೆ. ದಾಳಿಗೊಳಗಾದವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಅವರಿಗೆ ಕ್ಲೀನ್‌ಚಿಟ್ ನೀಡಲಾಗುತ್ತಿದೆ ಎಂದು ದೂರಿದರು.
    ದೆಹಲಿ ಮುಖ್ಯಮಂತ್ರಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಅವರನ್ನು ಜೈಲಿಗೆ ಕಳಿಸಲಾಗಿದೆ. ಅದೇ ಚುನಾವಣಾ ಬಾಂಡ್ ಮೂಲಕ ಅಕ್ರಮ ಎಸಗಿದವರನ್ನು ಏಕೆ ಜೈಲಿಗೆ ಕಳಿಸಿಲ್ಲ. ಬಿಜೆಪಿಗೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಬಗ್ಗೆ ಹೆದರಿಕೆ ಶುರುವಾಗಿದೆ. ಇದೇ ಕಾರಣಕ್ಕೆ ಚುನಾವಣೆ ಸಂದರ್ಭ ನಮ್ಮ ಪಕ್ಷದ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರೋಪಿಸಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಎಚ್.ಸಿ.ಯೋಗೇಶ್, ಎನ್.ರಮೇಶ್, ಚಂದ್ರಭೂಪಾಲ್, ಕಾಶಿ ವಿಶ್ವನಾಥ್, ಎಚ್.ಎಂ. ಮಧು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts