More

    ಸಾರಿಗೆ ಡಿಪೋ, ವಿಧಾನಸೌಧ ಮಂಜೂರು

    ಹಿರಿಯೂರು: ತಾಲೂಕಿಗೆ ಸಾರಿಗೆ ಡಿಪೋ, ಮಿನಿ ವಿಧಾನಸೌಧ, ಮಹಿಳೆ-ಮಕ್ಕಳ ಆಸ್ಪತ್ರೆ ಮಂಜೂರಾಗಿದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ 25 ಕೋಟಿ ರೂ. ಅನುದಾನ ರಾಜ್ಯ ಸರ್ಕಾರ ನೀಡಿದೆ. ಬಹುದಿನದ ಬೇಡಿಕೆಯಾದ ಸಾರಿಗೆ ಡಿಪೋ ನಿರ್ಮಾಣಕ್ಕೆ ಶೀಘ್ರದಲ್ಲಿ ಸಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಲಿದ್ದು, ಆದಿವಾಲ ಬಳಿ ಲಭ್ಯವಿರುವ ಸರ್ಕಾರಿ ಜಾಗದಲ್ಲಿ ಸಾರಿಗೆ ಡಿಪೋ, ಮಿನಿ ವಿಧಾನಸೌಧ, ತಾಪಂ ಕಟ್ಟಡ, ಮಕ್ಕಳ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

    ವಿರೋಧ: ತಾಪಂ ಕಟ್ಟಡವನ್ನು ಮೂಲ ಸ್ಥಳದಲ್ಲಿ ನಿರ್ಮಾಣ ಮಾಡಬೇಕು. ಯಾವುದೇ ಕಾರಣಕ್ಕೂ ನಗರದ ಹೊರ ವಲಯಕ್ಕೆ ಸ್ಥಳಾಂತರ ಮಾಡಬಾರದು ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರು ಪಟ್ಟುಹಿಡಿದರು.

    ಹಿರಿಯೂರು ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ದೂರದೃಷ್ಟಿಯಿಂದ ಹೊರ ವಲಯದಲ್ಲಿ ನಿರ್ಮಾಣ ಅನಿವಾರ್ಯ ಎಂದು ಪೂರ್ಣಿಮಾ ಸದಸ್ಯರಿಗೆ ಮನವರಿಕೆ ಮಾಡಿದರು.

    ಟಾಸ್ಕ್ ಫೋರ್ಸ್ ಅಡಿಯಲ್ಲಿ 2019-20 ನೇ ಸಾಲಿಗೆ 113.93 ಲಕ್ಷ ರೂ. ಬಿಡುಗಡೆಯಾಗಿದ್ದು, ತಾಪಂ ಸದಸ್ಯರಿಗೆ 2 ಲಕ್ಷ, ಜಿಪಂ ಸದಸ್ಯರಿಗೆ 5 ಲಕ್ಷ ರೂ. ನಂತೆ ಹಂಚಿಕೆ ಮಾಡುವಂತೆ ಪಂಚಾಯತ್‌ರಾಜ್ ಉಪ ವಿಭಾಗದ ಎಇಇ ಶ್ರೀರಂಗಪ್ಪಗೆ ಶಾಸಕರು ಸೂಚಿಸಿದರು.

    ಇಷ್ಟು ಕಡಿಮೆ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಷ್ಟ-ಸಾಧ್ಯ ಹೆಚ್ಚಿನ ಮೊತ್ತ ನಿಗದಿಪಡಿಸುವಂತೆ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಆಗ್ರಹಿಸಿದರು.

    ಜಿಪಂ ಸದಸ್ಯರಾದ ರಾಜೇಶ್ವರಿ, ಶಶಿಕಲಾ, ತ್ರಿವೇಣಿ, ತಾಪಂ ಅಧ್ಯಕ್ಷೆ ಲಕ್ಷ್ಮಿದೇವಿ, ಉಪಾಧ್ಯಕ್ಷೆ ಜಯಲಕ್ಷ್ಮ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ, ಸದಸ್ಯರಾದ ಕೆ.ಶಂಕರಮೂರ್ತಿ, ಓಂಕಾರಪ್ಪ, ಚಂದ್ರಪ್ಪ, ಜಿ.ಕಲ್ಪನಾ, ಕರಿಯಪ್ಪ, ಇಒ. ಹನುಮಂತಪ್ಪ, ಶಾಸಕರ ಆಪ್ತ ಸಹಾಯಕ ನಿರಂಜನ್ ಇತರರಿದ್ದರು.

    ಧರ್ಮಪುರ ಕೆರೆಗೆ ನೀರು: ಶತಮಾನದ ಇತಿಹಾಸವಿರುವ ಧರ್ಮಪುರ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಸರ್ವೆ ಕಾರ್ಯ ನಡೆಸಿ, ಕಾಮಗಾರಿಗೆ ಚಾಲನೆ ನೀಡಲಾಗುವುದು. ಮುಂದಿನ 2 ವರ್ಷದಲ್ಲಿ ಧರ್ಮಪುರ, ಕೋಡಿಹಳ್ಳಿ, ಇಕ್ಕನೂರು ಕೆರೆಗೆ ಭದ್ರಾ ನೀರು ತುಂಬಿಸಲಾಗುವುದು ಎಂದು ಶಾಸಕರು ತಿಳಿಸಿದರು.

    ಕೈ, ಕಮಲ ಸದಸ್ಯರ ಜಟಾಪಟಿ: ಕಳೆದ 10 ವರ್ಷದಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರ್ವಹಣಾ ಅನುದಾನ ಹಂಚಿಕೆಯಲ್ಲಿ (ಟಾಸ್ಕ್ ಫೋರ್ಸ್) ಅಂದಿನ ಶಾಸಕ ಡಿ.ಸುಧಾಕರ್ ಸೌಜನ್ಯಕ್ಕೂ ತಾಪಂ, ಜಿಪಂ ಸದಸ್ಯರ ಸಭೆ ಕರೆದು ಅನುದಾನ ಹಂಚಿಕೆ ಮಾಡುತ್ತಿರಲಿಲ್ಲ. ಬಿಜೆಪಿ ಸದಸ್ಯರಿಗೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿದ್ದರು ಎಂದು ಜಿಪಂ ಸದಸ್ಯೆ ರಾಜೇಶ್ವರಿ ಸಭೆ ಗಮನಕ್ಕೆ ತಂದಾಗ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದಸ್ಯರ ನಡುವೆ ಜಟಾಪಟಿ ನಡೆಯಿತು.

    ಮಧ್ಯ ಪ್ರವೇಶಿಸಿದ ಶಾಸಕಿ ಕೆ.ಪೂರ್ಣಿಮಾ, ಅಂದಿನ ಶಾಸಕರು ಸಾಮಾಜಿಕ ನ್ಯಾಯ ಪಾಲಿಸದೇ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದರೂ ಅಂದು ನೀವೇಕೆ ಧ್ವನಿ ಎತ್ತಲಿಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರನ್ನು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts