More

    ನಮಸ್ತೆ, ನಾನು ಡಿಸಿ ಮಾತಾಡ್ತಿದ್ದೀನಿ… ನಿಮ್ ಸಮಸ್ಯೆ ಹೇಳಿ…

    ಮಂಗಳೂರು ವಿಜಯವಾಣಿ ಕಚೇರಿಯಲ್ಲಿ ಗುರುವಾರ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರ ಫೋನ್‌ಇನ್ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಕಡೆಗಳಿಂದ ನಾಗರಿಕರು ತಮ್ಮ ಸಮಸ್ಯೆ-ಅಹವಾಲು ಹೇಳಲು ಕರೆ ಮಾಡಿದ್ದಾರೆ. ಒಂದು ಗಂಟೆಗೂ ಮೀರಿ ನಡೆದ ಫೋನ್‌ಇನ್‌ನಲ್ಲಿ ಸ್ವೀಕರಿಸಲು ಸಾಧ್ಯವಾಗಿರುವ ಕರೆಗಳ ವಿವರ ಇಲ್ಲಿವೆ..

    ಕೊಟ್ಟಾರ ಚೌಕಿ ಜಂಕ್ಷನ್‌ಗೆ ಸರ್ವೀಸ್ ರಸ್ತೆ ಇಲ್ಲ. ಉಡುಪಿ ಕಡೆಯಿಂದ ವೇಗವಾಗಿ ಬರುವ ವಾಹನಗಳಿಂದ ಹಿರಿಯ ನಾಗರಿಕರು, ಮಕ್ಕಳಿಗೆ ನಡೆಯಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ನೆರೆಯೂ ಸಾಮಾನ್ಯ. ಹೆದ್ದಾರಿಗೆ ಹಂಪ್ ಅಳವಡಿಸಿದರೆ, ವಾಹನಗಳು ನಿಧಾನವಾಗಿ ಚಲಿಸಬಹುದು, ಸಿಸಿಟಿವಿ ಹಾಕಿದರೆ ದಂಡ ವಸೂಲಿ ಮಾಡಬಹುದು. ಬೀದಿನಾಯಿಗಳ ಕಾಟವೂ ಇದೆ.
    -ಯು.ರಾಮರಾವ್, ಕೊಟ್ಟಾರ ಚೌಕಿ

    ಉ: ರಸ್ತೆ ಸುರಕ್ಷತಾ ಪ್ರಾಧಿಕಾರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಇನ್ಮುಂದೆ ಪ್ರತಿ ತಿಂಗಳು ರಸ್ತೆ ಸುರಕ್ಷತಾ ಸಭೆ ಕರೆಯಲಾಗುವುದು. ಪೊಲೀಸ್, ರಾಷ್ಟ್ರೀಯ ಹೆದ್ದಾರಿ ಹಾಗೂ ಸಂಬಂಧಿತ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಬೀದಿನಾಯಿಗಳ ಹಾವಳಿ ಕುರಿತು ಮೇಯರ್, ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಫೆ.14ರಂದು ಪ್ರಾಣಿ ದಯಾಸಂಘದ ಸಭೆ ನಡೆಯಲಿದ್ದು, ಈ ವೇಳೆ ಬೀದಿನಾಯಿ ಹಾವಳಿ ತಡೆಯಲು ಯೋಜನೆ ರೂಪಿಸಲಾಗುವುದು.

    ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಯೋಜನೆಯಲ್ಲಿ 2010-11ರಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟ ಸಂದರ್ಭ ಜನರಿಂದ ಸಂಗ್ರಹಿಸಲಾಗಿದ್ದ 2 ಲಕ್ಷ ರೂ. ಮೊತ್ತ ಉಳಿದಿದೆ. ಇದರ ಲೆಕ್ಕಪತ್ರ ಕೇಳಿದರೆ ಈಗಿನ ಬಿಇಒ ಕೊಡುತ್ತಿಲ್ಲ. ಮಣಿನಾಲ್ಕೂರು ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಪಂ ಸದಸ್ಯರು ಅವ್ಯವಹಾರ ಮಾಡಿದ್ದಾರೆ.
    -ರಘುರಾಮ ಮಯ್ಯ, ಬಂಟ್ವಾಳ

    ಉ: ಕ್ರೀಡಾಕೂಟಕ್ಕೆ ಸಂಬಂಧಿಸಿ ನಿಮ್ಮಲ್ಲಿರುವ ಎಲ್ಲ ಮಾಹಿತಿ ನನಗೆ ಕಳುಹಿಸಿಕೊಡಿ. ಏನಾಗಿದೆ ಎಂದು ನೋಡಿ ಲೆಕ್ಕಪತ್ರ ನೀಡುವ ವ್ಯವಸ್ಥೆ ಮಾಡಲಾಗುವುದು. ಉದ್ಯೋಗ ಖಾತ್ರಿಗೆ ಸಂಬಂಧಿಸಿ ಗ್ರಾಪಂ ಮತ್ತು ತಾಪಂ ಇಒಗೆ ನೀಡಿರುವ ದೂರಿನ ಪ್ರತಿಯೊಂದಿಗೆ ನನ್ನ ಕಚೇರಿಗೆ ಕಳುಹಿಸಿ. ಜಿಪಂ ಸಿಇಒ ಅವರಿಂದ ಪರಿಶೀಲಿಸಿ, ತಪ್ಪು ನಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು.

    ಮೇರಮಜಲಿನಲ್ಲಿ ವಿಧವೆಗೆ ಹಕ್ಕುಪತ್ರ ಸಿಗದೆ ಅನ್ಯಾಯಕ್ಕೆ ಒಳಗಾಗಿದ್ದಾರೆ. ಜಮೀನಿನಲ್ಲಿದ್ದ ಮನೆ ಕೆಡವಲಾಗಿದೆ.
    -ಪಂಚಾಯಿತಿ ಸದಸ್ಯೆ ಬಂಟ್ವಾಳ, ಮೇರಮಜಲು

    ಉ: ಇನ್ನೊಂದು ಸಲ ಈ ಕುರಿತ ದೂರು ನನಗೆ ಕಳುಹಿಸಿ. ಅನ್ಯಾಯ ಏನಾಗಿದೆ ಎಂದು ಪರಿಶೀಲಿಸುತ್ತೇನೆ. ಬಗರ್‌ಹುಕುಂ ಕಮಿಟಿಯಲ್ಲಿ ಈ ವಿಚಾರ ತೀರ್ಮಾನ ಆಗಬೇಕಿದೆ.

    ಬಜ್ಪೆ, ಮಳವೂರು ಭಾಗದಲ್ಲಿ ಕೃಷಿಗೆಂದು ಭೂಮಿ ಖರೀದಿಸಿ, ಕಲ್ಲು ಕ್ವಾರಿ ನಡೆಸುತ್ತಿದ್ದಾರೆ. ಅಲ್ಲಿನ ಶಬ್ಧ, ಧೂಳಿನಿಂದ ಮಕ್ಕಳು, ಹಿರಿಯರು, ಮಹಿಳೆಯರಿಗೆ ಸಮಸ್ಯೆಯಾಗಿದೆ.
    – ಕೊರಗ ಜನಾಂಗದ ವ್ಯಕ್ತಿ, ಮಳವೂರು ಗ್ರಾಪಂ

    ಉ: ಈಗಾಗಲೇ ಒಂದು ಉಪಸಮಿತಿ ರಚಿಸಿ ಜಿಲ್ಲೆಯ ಎಲ್ಲ ಕಲ್ಲು ಗಣಿ ಮತ್ತು ಕ್ರಶರ್, ಅದರ ಸುರಕ್ಷತೆ ಕುರಿತಂತೆ ಆಡಿಟ್ ಮಾಡಲಾಗುತ್ತಿದೆ. ಗಣಿಗಳಿಂದ ಮನೆಗಳಿಗೆ ದೊಡ್ಡಮಟ್ಟಿನ ಸಮಸ್ಯೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುವುದು. ಅಭಿವೃದ್ಧಿಗೆ ಕೆಲವೊಂದು ವಿಚಾರಗಳು ಅಗತ್ಯವಾಗಿದ್ದರೂ, ಅದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದಾದರೆ ಕ್ರಮ ಕೈಗೊಳ್ಳುವ ಅವಕಾಶವೂ ಇದೆ.

    ಗ್ರಾಮ ವ್ಯಾಪ್ತಿಯಲ್ಲಿ ಸಂಪರ್ಕ ರಸ್ತೆಗೆ ತಡೆಯೊಡ್ಡಿ ಎರಡು ವರ್ಷವಾಗಿದ್ದು, ಅದನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ಕುರಿತಂತೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
    – ದಾಮೋದರ ಬಂಗೇರ, ಬಂಟ್ವಾಳ

    ಉ: ನಿಮ್ಮ ದೂರಿನ ಪ್ರತಿ ನನ್ನ ವಾಟ್ಸಾೃಪ್ ಸಂಖ್ಯೆ 9448089126ಕ್ಕೆ ಕಳುಹಿಸಿ ಕೊಡಿ. ವೈಯಕ್ತಿಕ ಗಮನ ಹರಿಸಿ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವೆ.

    ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಮಟ್ಟು ಎಂಬಲ್ಲಿ ಮರಳು ಸಾಗಾಟದಿಂದ ರಸ್ತೆ ಹಾಳಾಗಿದೆ. ಪಂಚಾಯಿತಿಯಲ್ಲಿ ವಿಚಾರಿಸಿದಾಗ ಗಣಿ-ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಮಾಹಿತಿಯಿಲ್ಲ ಎನ್ನುತ್ತಾರೆ. ರಸ್ತೆ ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕು.
    -ಕೃಷ್ಣ ಶೆಟ್ಟಿಗಾರ್, ಅತಿಕಾರಿಬೆಟ್ಟು ಗ್ರಾಪಂ ಸದಸ್ಯ

    ಉ: ಮರಳು ಲಾರಿಗಳ ಸಂಚಾರದಿಂದ ರಸ್ತೆ ಹಾಳಾಗಿದೆ ಎಂದಾದರೆ, ಗ್ರಾಪಂನಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರಸ್ತಾವನೆ ಕಳುಹಿಸಲಿ. ಗಣಿಯಿಂದ ಬಂದ ರಾಜಧನದಲ್ಲೇ ರಸ್ತೆಗಳ ದುರಸ್ತಿ ಕೈಗೊಳ್ಳಬೇಕು ಎಂಬ ಷರತ್ತು ಇದೆ. ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಮೂಲಕ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.

    ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ರಸ್ತೆ ಬದಿ, ಸೇತುವೆ ಕೆಳಗೆ ಕೋಳಿ ತ್ಯಾಜ್ಯ ಬಿಸಾಕುತ್ತಾರೆ. ಇದರಿಂದ ಸ್ಥಳದಲ್ಲಿ ಅಸಹ್ಯ ವಾಸನೆಯಿದೆ. ಸ್ಥಳೀಯರಿಗೆ ನಡೆದಾಡುವುದು ಕಷ್ಟವಾಗಿದೆ.
    – ಹೈದರಾಲಿ ವಿಟ್ಲ

    ಉ: ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಿಂದ ಈ ಕುರಿತು ವಿವರಣೆ ಕೇಳಿ, ಮುಂದಿನ ಕ್ರಮ ಕೈಗೊಳ್ಳುತ್ತೇನೆ.

    ಈ ಹಿಂದೆ ಮಾಡುತ್ತಿದ್ದ ಕೆಲಸ ಕಂಪನಿ ಮುಚ್ಚಿದ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದೇನೆ. ಪ್ರಸ್ತುತ ಕೆಲಸದ ಸಿಗದೆ ಸಮಸ್ಯೆಯಾಗುತ್ತಿದೆ. ಎಲ್ಲಾದರೂ ಕೆಲಸಕ್ಕೆ ವ್ಯವಸ್ಥೆ ಮಾಡಬಹುದೇ?
    – ಅನಿತಾ, ಕೋಡಿಕಲ್

    ಉ: ನಮಗೆ ಉದ್ಯೋಗ ದೊರಕಿಸಿ ಕೊಡುವ ಅವಕಾಶವಿಲ್ಲ, ಮಾನವೀಯ ದೃಷ್ಟಿಯಿಂದ ಏನಾದರೂ ಮಾಡಬಹುದಷ್ಟೇ. ನಿಮ್ಮ ಬಯೋಡಾಟ ಪ್ರತಿ ಜಿಲ್ಲಾಧಿಕಾರಿ ಕಚೇರಿಗೆ ನೀಡಿದರೆ, ನಿಮ್ಮ ಅನುಭವದ ಆಧಾರದ ಮೇಲೆ ಎಲ್ಲಾದರೂ ಕೆಲಸ ಸಿಗುವಂತೆ ಮಾಡಲು ಪ್ರಯತ್ನಿಸಲಾಗುವುದು.

    ಆಶ್ರಯ ಯೋಜನೆಯಲ್ಲಿ ಸಿಗುವ ನಿವೇಶನ ಇನ್ನೊಬ್ಬರಿಂದ ಖರೀದಿ ಮಾಡಿದ್ದೇನೆ. ಅಲ್ಲಿ ಎರಡು ಮನೆಗಳಿದ್ದು, ಸಂಪರ್ಕ ರಸ್ತೆ ಇಲ್ಲದೆ ಸಮಸ್ಯೆಯಾಗಿದೆ.
    – ಹೈದರ್ ಅಲಿ, ಕಿನ್ಯ

    ಉ: ಜಿಲ್ಲಾಧಿಕಾರಿ ಕಚೇರಿಗೆ ನಿಮ್ಮ ಸಮಸ್ಯೆ ಕುರಿತು ಒಂದು ಮನವಿ ನೀಡಿ. ಸ್ಥಳೀಯವಾಗಿ ಕಂದಾಯ ನಿರೀಕ್ಷಕರ ಮೂಲಕ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.

    ನಾವು 5 ಸೆಂಟ್ಸ್ ಕಾಲನಿ ನಿವಾಸಿಗಳಾಗಿದ್ದು, ಒಂದು ಮನೆಯಲ್ಲಿ ಸಿಮೆಂಟ್ ಬ್ಲಾಕ್ ತಯಾರಿಕೆ ಉದ್ಯಮ ನಡೆಸುತ್ತಿದ್ದಾರೆ. ಸುತ್ತ 10-15 ಮನೆಗಳಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಪಂಚಾಯಿತಿಗೆ ದೂರು ನೀಡಿದರೂ, ಪ್ರಯೋಜನವಾಗಿಲ್ಲ.
    – ದುರ್ಗಾಪ್ರಸಾದ್, ಕೊಕ್ರಾಡಿ ಬೆಳ್ತಂಗಡಿ
    – ಉದಯ್, ಕೊಕ್ರಾಡಿ ಬೆಳ್ತಂಗಡಿ
    – ಸವಿತಾ ನಾರಾಯಣ, ಕೊಕ್ರಾಡಿ ಬೆಳ್ತಂಗಡಿ
    – ಶರ್ಮಿಳಾ, ಕೊಕ್ರಾಡಿ ಬೆಳ್ತಂಗಡಿ

    ಉ: 94ಸಿ ವಸತಿಗೆ ಸಂಬಂಧಿಸಿ ನೀಡಲಾಗುತ್ತದೆ. ಅದನ್ನು ವಾಣಿಜ್ಯ ಉಪಯೋಗಕ್ಕೆ ಬಳಸುವಂತಿಲ್ಲ. ಮನೆಯಲ್ಲಿ ವಾಸ ಮಾಡದೆ ವಾಣಿಜ್ಯವಾಗಿ ಬಳಕೆ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಲು ಅವಕಾಶವಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

    ಗಣೇಶಪುರಕ್ಕೆ ಹಿಂದೆ ಐದು ಬಸ್ ಬರುತ್ತಿತ್ತು. ಲಾಕ್‌ಡೌನ್ ಬಳಿಕ ಬರುತ್ತಿಲ್ಲ. ಹಿರಿಯರಿಗೆ, ಶಾಲಾ ಮಕ್ಕಳಿಗೆ ಬಸ್ ಅಗತ್ಯವಿದ್ದು, ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಿ.
    -ವಿಠಲ ಶೆಟ್ಟಿಗಾರ್ ಕಾಟಿಪಳ್ಳ, ಗಣೇಶಪುರ

    ಉ: ಕಳೆದ ವಾರ ಸಾರಿಗೆ ಸಚಿವರ ಸಭೆಯಲ್ಲಿ ಎಲ್ಲ ಬಸ್‌ಗಳು ಹಿಂದಿನಂತೆ ಸಂಚಾರ ಆರಂಭಿಸಬೇಕು ಎಂದು ಸೂಚನೆ ನೀಡಿದ್ದಾರೆ. ಕೆಎಸ್‌ಆರ್‌ಟಿಸಿ ಡಿಸಿಯವರ ಜತೆ ಈ ವಿಚಾರ ಮಾತನಾಡುತ್ತೇನೆ.

    ಪುತ್ತೂರಿನಲ್ಲಿ ನೀಡಲಾಗುವ ಹಕ್ಕುಪತ್ರ ಷರತ್ತು ಮತ್ತು ಸುಳ್ಯದ ಹಕ್ಕುಪತ್ರದ ಷರತ್ತು ಒಂದೇ ರೀತಿ ಇಲ್ಲ. ಇದರಿಂದ ತುಂಬ ಜನರಿಗೆ ಸಮಸ್ಯೆಯಾಗಿದೆ. ಬ್ಯಾಂಕ್ ಲೋನ್ ಪಡೆಯಲು ಕಷ್ಟವಾಗಿದೆ.
    – ಸುಳ್ಯ ಬೆಳ್ಳಾರೆ ನಿವಾಸಿ

    ಉ: ಹಕ್ಕುಪತ್ರಗಳು ರಾಜ್ಯಮಟ್ಟದಲ್ಲಿ ಮುದ್ರಣವಾಗುವುದರಿಂದ ಒಂದೇ ರೀತಿ ಇರುತ್ತವೆ. ಅದರಲ್ಲಿ ಷರತ್ತುಗಳು ಬೇರೆ ಬೇರೆಯಾಗಲು ಸಾಧ್ಯವಿಲ್ಲ. ಯಾಕೆ ಹೀಗಾಗಿದೆ ಎಂದು ಪರಿಶೀಲಿಸುತ್ತೇನೆ. ಮುಂದಿನ ವಾರ ಸುಳ್ಯ ಭೇಟಿ ಕಾರ್ಯಕ್ರಮವಿದೆ, ಈ ವೇಳೆ ಪರಿಶೀಲಿಸಿ ತಹಸೀಲ್ದಾರ್‌ಗೆ ಸೂಚನೆ ನೀಡುತ್ತೇನೆ.

    ಬೈಕಂಪಾಡಿಯಲ್ಲಿ ಸರ್ವೀಸ್ ರಸ್ತೆ ಬದಿ ಮಾರ್ಬಲ್ ಮಾರಾಟ ನಡೆಯುತ್ತಿದೆ. ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
    -ಗಣೇಶ್ ಕುಳಾಯಿ, ಅಳಪೆ

    ಉ: ಈ ವಿಚಾರವನ್ನು ಮಹಾನಗರ ಪಾಲಿಕೆ ಮತ್ತು ಸಂಚಾರ ವಿಭಾಗದ ಡಿಸಿಪಿ ಗಮನಕ್ಕೆ ತರಲಾಗುವುದು.

    ನಮ್ಮಲ್ಲಿ 5 ಎಕರೆ ಸರ್ಕಾರಿ ಸ್ಥಳವನ್ನು 2017ರಲ್ಲಿ ಪಂಚಾಯಿತಿಯಿಂದ ಕ್ರೀಡಾಂಗಣ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಕರೊನಾ ಅವಧಿಯಲ್ಲಿ ಸ್ಥಳೀಯರೊಬ್ಬರು ಅಕ್ರಮವಾಗಿ ಜಾಗ ಸಮತಟ್ಟುಗೊಳಿಸಿ, ಅಡಕೆ ಸಸಿ ನೆಟ್ಟಿದ್ದಾರೆ.
    – ಲೋಹಿತ್, ನರಿಕೊಂಬು

    ಉ: ಆರ್‌ಐ ಅವರನ್ನು ಕಳುಹಿಸಿ ಪರಿಶೀಲಿಸುತ್ತೇನೆ.

    ನಮ್ಮ ಮನೆ ಪಕ್ಕ ಮಳೆಗಾಲದಲ್ಲಿ ನೀರು ಹರಿದು ಹೋಗುವ ತೋಡು ಇದೆ. ಆರು ವರ್ಷಗಳಿಂದ ಫ್ಲಾೃಟ್‌ಗಳ ಕೊಳಚೆ ನೀರು ತೋಡಿಗೆ ಬಿಡುತ್ತಿದ್ದಾರೆ. ಇದರಿಂದ ಬಾವಿ ನೀರು ಕೂಡ ಹಾಳಾಗಿದೆ. ಗ್ರಾಪಂ ಗೆ ದೂರು ನೀಡಿದರೂ ಯಾರೂ ಭೇಟಿ ನೀಡಿಲ್ಲ.
    – ಅನಿತಾ, ಬಿ.ಸಿ ರೋಡ್ ಕೈಕಂಬ

    ಉ: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಗ್ರಾಪಂ ಪಿಡಿಒ ಮೂಲಕ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.

    ಕನ್ವಶರ್ನ್‌ಗೆ ಒಂದು ವರ್ಷದ ಹಿಂದೆ ಅರ್ಜಿ ಸಲ್ಲಿಸಿದ್ದೇನೆ ಇನ್ನೂ ಆಗಿಲ್ಲ. ವಸತಿ ಯೋಜನೆ ಪೆಂಡಿಂಗ್ ಆಗಿದೆ.

    -ವೀರಪ್ಪ, ಬಂಟ್ವಾಳ

    ಉ: ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದರೆ, ಈ ಕುರಿತು ಪರಿಶೀಲಿಸುತ್ತೇನೆ.

    ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಷೇಧವಿದ್ದರೂ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಬಳಕೆ ಬಳಿಕ ರಸ್ತೆ ಬದಿ ಬೀಳುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ.
    -ಜಯಪ್ರಕಾಶ್ ಎಕ್ಕೂರು

    ಉ: ಸಿಂಗಲ್ ಯೂಸ್ ಪ್ಲಾಸ್ಟಿಕ್‌ಗೆ ಸಂಬಂಧಿಸಿ ಕಾರ್ಯಾಚರಣೆ ಕರೊನಾ ಪೂರ್ವದಲ್ಲಿ ನಡೆದಿತ್ತು. ಜನಜಾಗೃತಿ ಮೂಡಿಸಿ, ಮತ್ತೊಮ್ಮೆ ಮಹಾನಗರ ಪಾಲಿಕೆ ಮತ್ತು ಎಲ್ಲ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬ್ಯಾನ್ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ.

    2002ರಲ್ಲಿ 10 ಸೆಂಟ್ಸ್, 2008ರಲ್ಲಿ 16 ಸೆಂಟ್ಸ್ ಮತ್ತು 2014ರಲ್ಲಿ 26 ಸೆಂಟ್ಸ್ ಜಾಗವನ್ನು ಕನ್ವರ್ಶನ್ ಮಾಡಿಸಿದ್ದೇನೆ. ಅರ್ಜಿ ಹಾಕಿದರೂ, ಇನ್ನೂ ಪ್ಲಾಟಿಂಗ್ ಆಗಿಲ್ಲ. ಇದರಿಂದ ಹೊಸ ಕನ್ವರ್ಶನ್ ಕೂಡ ಆಗುತ್ತಿಲ್ಲ. ಒಂದು ವಾಸ್ತವ್ಯ ಮತ್ತು ಎರಡು ಕೈಗಾರಿಕಾ ಉದ್ದೇಶದಿಂದ ಕನ್ವಶರ್ನ್ ಮಾಡಿದ್ದೇನೆ.
    – ಶ್ರೀಕೃಷ್ಣ, ನೆಲ್ಲೂರು ಕೆಮ್ರಾಜೆ, ಸುಳ್ಯ

    ಉ: ಮುಂದಿನ ಶುಕ್ರವಾರ ಸುಳ್ಯಕ್ಕೆ ಭೇಟಿ ನೀಡುತ್ತೇನೆ ಆ ವೇಳೆ ಭೇಟಿಯಾಗಿ.

    ಏತ ನೀರಾವರಿಯಲ್ಲಿ ನೀರು ಬರುತ್ತಿಲ್ಲ.
    – ಪ್ರೇಮಾನಂದ, ಅಜ್ಜಾವರ, ಸುಳ್ಯ

    ಉ: ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಜತೆ ಈ ವಿಚಾರವಾಗಿ ಮಾತನಾಡುತ್ತೇನೆ. ಏನಾಗಿದೆ ಎಂದು ತಿಳಿದು ಸರಿ ಮಾಡಲು ಪ್ರಯತ್ನ ಮಾಡೋಣ.

    ಸುಳ್ಯದಲ್ಲಿ 2008ರಿಂದ 2014ರವರೆಗೆ ಮರಳು ಪರವಾನಗಿ ಸಿಗುತ್ತಿತ್ತು. ಈಗ ಜಂಟಿ ಸರ್ವೇ ಆಗಿದೆ. ಮರಳು ಯಾವಾಗ ಸಿಗುತ್ತದೆ? ಕೆಂಪುಕಲ್ಲು ಮತ್ತು ಸಿಮೆಂಟ್ ಬ್ಲಾಕ್‌ಗೆ ಒಂದೇ ರೀತಿ ದರ ನಿಗದಿ ಮಾಡಿದರೆ ಉತ್ತಮ.
    -ಅನಿಲ್ ಕುಮಾರ್, ಆಲೆಟ್ಟಿ ಸುಳ್ಯ

    ಹೊಸ ಮರಳು ನೀತಿ ಪ್ರಕಾರ, 1-3 ಶ್ರೇಣಿಯ ಹಳ್ಳ, ತೋಡಿನಲ್ಲಿರುವ ಮರಳನ್ನು ಗ್ರಾಪಂ ತೆಗೆಯಲು ಅನುಮತಿ ನೀಡಬೇಕು. ದೊಡ್ಡ ಉಪನದಿ, ನದಿಗಳಲ್ಲಿ ಬ್ಲಾಕ್ ಪತ್ತೆ ಮಾಡಿ ಕೆಎಸ್‌ಎಂಸಿಎಲ್‌ಗೆ ನೀಡಬೇಕು. ಜಿಲ್ಲೆಗೆ ಗಣಿ ಸಚಿವರು ಭೇಟಿ ನೀಡಿದ ವೇಳೆ, ಕರಾವಳಿಗೆ ಪ್ರತ್ಯೇಕ ಮರಳು ನೀತಿ ರಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಅಧಿಕೃತವಾಗಿ ಆದೇಶ ಬಳಿಕ ಟೆಂಡರ್ ಕರೆಯಲಾಗುವುದು. 20 ಕಡೆ ಅಧಿಕೃತ ಟೆಂಡರುದಾರರು ಈಗಾಗಲೇ ಮರಳು ತೆಗೆಯುತ್ತಿದ್ದಾರೆ. ಮುಂದಿನ ಶುಕ್ರವಾರ ಸುಳ್ಯಕ್ಕೆ ಬರುತ್ತಿದ್ದೇನೆ, ಆಗ ಭೇಟಿಯಾಗಿ. ಕಲ್ಲಿನ ದರ ನಿಗದಿ ಸರ್ಕಾರ ಮಾಡುತ್ತದೆ, ಈ ಕುರಿತು ಪರಿಶೀಲಿಸುತ್ತೇನೆ.

    ಮನೆ ಹಕ್ಕುಪತ್ರ ವಿಳಂಬ ಆಗಿ, ಫಲಾನುಭವಿಗಳಿಗೆ ಸಮಸ್ಯೆ ಆಗುತ್ತಿದೆ.
    – ಹಮೀದ್ ವಿಟ್ಲ

    ಉ: ಸಮಸ್ಯೆಗಳಿರುವ ಮನೆಗಳದ್ದು ಮಾತ್ರ ಹಕ್ಕುಪತ್ರ ನೀಡಲು ಬಾಕಿ ಇದೆ. ಉಳಿದ ಎಲ್ಲ ಹಕ್ಕುಪತ್ರ ನೀಡಲಾಗಿದೆ. ನಿಮ್ಮಲ್ಲಿ ಸಮಸ್ಯೆ ಇದ್ದರೆ ಏನು ಎಂಬುದನ್ನು ಬರೆದು, ಡಿಸಿ ಕಚೇರಿಗೆ ತಂದುಕೊಡಿ. ಎಸಿಯವರ ಮೂಲಕ ಪರಿಶೀಲಿಸಲಾಗುವುದು. 94ಸಿ, 94ಸಿಸಿಗೆ ಸಂಬಂಧಿಸಿ ಸಮಸ್ಯೆಗಳಿಲ್ಲದ ಎಲ್ಲ ಹಕ್ಕುಪತ್ರ ವಿತರಿಸಲಾಗಿದೆ.

    ರಾತ್ರಿ ವೇಳೆ ಉಳ್ಳಾಲ ನೇತ್ರಾವತಿ ಸೇತುವೆ ಪ್ರದೇಶದಲ್ಲಿ ನದಿ ಬದಿ ಕಟ್ಟಡ ತ್ಯಾಜ್ಯ ಅನಧಿಕೃತವಾಗಿ ಸುರಿಯಲಾಗುತ್ತಿದೆ. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
    – ನೈಜಿಲ್ ಅಲ್ಬುಕರ್ಕ್ ಮಂಗಳೂರು

    ಉ: ನಗರದಲ್ಲಿ ನಮಗೆ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಸರಿಯಾದ ಜಾಗ ಇಲ್ಲ. ಅದರಿಂದಲೇ ಸ್ಮಾರ್ಟ್ ಸಿಟಿ ಕೆಲಸಗಳೂ ಈಗ ಸ್ಥಗಿತಗೊಂಡಿವೆ. ಸೂಕ್ತ ಜಾಗ ಹುಡುಕುವ ಪ್ರಯತ್ನದಲ್ಲಿದ್ದೇವೆ. ಕಾನೂನುಬಾಹಿರವಾಗಿ ವಿವಿಧೆಡೆ ತ್ಯಾಜ್ಯ ಸುರಿಯುತ್ತಿರುವುದು ಗಮನಕ್ಕೆ ಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರೂ ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು.

    ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಕಾರಣವಿಲ್ಲದೆ ಕೆಲಸದಿಂದ ತೆಗೆದಿದ್ದಾರೆ.
    – ಸುರೇಖಾ ಮಂಗಳೂರು

    ಉ: ಕೆಲಸದಿಂದ ತೆಗೆದಿರುವ ಏಜೆನ್ಸಿಗೆ ಮತ್ತೆ ಕೆಲಸಕ್ಕೆ ಸೇರಿಸಿ ಎಂದು ಸೂಚನೆ ನೀಡಿದರೂ, ಕೆಲಸಕ್ಕೆ ಇಟ್ಟುಕೊಂಡಿಲ್ಲ. ಆದ್ದರಿಂದ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿ, ಹೊಸ ಟೆಂಡರ್ ಕರೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

    ಮಳೆಗಾಲದಲ್ಲಿ ನೆರೆಗೆ ಕಾರಣವಾಗುವ ರಾಜಕಾಲುವೆಗಳ ಹೂಳು ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
    – ಸುರೇಶ್ ಉಡುಪ, ಕೊಟ್ಟಾರ ಚೌಕಿ

    ಉ: ಮಹಾನಗರ ಪಾಲಿಕೆ ಆಯುಕ್ತರ ಜತೆ ಈ ಕುರಿತಂತೆ ಸಭೆ ನಡೆಸಿದ್ದೇನೆ. ಈ ಕುರಿತ ಕ್ರಿಯಾ ಯೋಜನೆ ಸಿದ್ಧಪಡಿಸಿ, ಚಾಲನೆ ನೀಡಲಾಗುವುದು.

    ಕೆರೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ: ಜಿಲ್ಲಾಮಟ್ಟದಲ್ಲಿರುವ ಅಧಿಕಾರಿಗಳಾದ, ಡಿಸಿ, ಎಸ್‌ಪಿ, ಮುಡಾ ಆಯುಕ್ತರು, ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯಿತಿ ಸಿಇಒ ಎಲ್ಲರನ್ನೂ ಸೇರಿಸಿಕೊಂಡು ಕೆರೆ ಉಳಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಸಭೆ ನಡೆಸಲಾಗುವುದು. ಪಾಲಿಕೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿ ಸಂಗ್ರಹಿಸಲಾದ ಸೆಸ್ ಸುಮಾರು 20-22 ಕೋಟಿ ರೂಪಾಯಿಯಷ್ಟಿದೆ. 4-5 ಕೋಟಿ ಮಾತ್ರ ಕೆಲವು ಕೆರೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಅಂದಾಜು 80 ಕೆರೆಗಳ ಪುನರುಜ್ಜೀವನಕ್ಕೆ ಬಳಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಕೆಲವು ಕೆರೆಗಳು ತಮ್ಮ ಸ್ವರೂಪವನ್ನೇ ಕಳೆದುಕೊಂಡಿದ್ದು, ಇನ್ನು ಕೆಲವು ಜಾಗ ಒತ್ತವರಿಯಾಗಿದೆ. ಸರ್ವೇ ನಡೆಸಿ ಕೆರೆ ಉಳಿಸಿಕೊಳ್ಳಲಾಗುವುದು. ಈ ತಿಂಗಳಾಂತ್ಯದ ವೇಳೆ ಕ್ರಿಯಾಯೋಜನೆ ಸಿದ್ಧಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿ ದ.ಕ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಬಹುದು.
    ದೂರವಾಣಿ ಸಂಖ್ಯೆ: 0824-2220588
    ವಾಟ್ಸಾೃಪ್ ಸಂಖ್ಯೆ: 9448089126
    ಇ-ಮೇಲ್: [email protected]

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts