More

    ಹಲೋ ಡಾಕ್ಟರ್; ಹೋಲಿಕೆ ಮಾಡುವುದು ಸಲ್ಲ, ವಾಸ್ತವ ಅರಿಯುವುದು ಸೂಕ್ತ

    ಹಲೋ ಡಾಕ್ಟರ್; ಹೋಲಿಕೆ ಮಾಡುವುದು ಸಲ್ಲ, ವಾಸ್ತವ ಅರಿಯುವುದು ಸೂಕ್ತಜಗತ್ತು ವಿಸ್ಮಯಗಳ ಗೂಡು. ಇಲ್ಲಿರುವ ಪ್ರತಿಯೊಂದು ಜೀವ ಮತ್ತು ವಸ್ತು ಭಿನ್ನ. ಎಲ್ಲವೂ ಒಂದೇ ಮಾದರಿ ಆಗಿರಬೇಕೆಂದೇನಿಲ್ಲ. ವಸ್ತು ಆಗಲಿ ವ್ಯಕ್ತಿ ಆಗಲಿ ನೋಡಲು ಒಂದೇ ತರಹ ಕಂಡರೂ ಕೆಲ ವಿಷಯಗಳಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಮಕ್ಕಳಲ್ಲೂ ಅಷ್ಟೇ. ಒಂದೇ ತಾಯಿಯ ಮಕ್ಕಳಿದ್ದರೂ ಗುಣ ಮತ್ತು ಸ್ವಭಾವದಲ್ಲಿ, ನಡವಳಿಕೆಯಲ್ಲಿ, ಆಚಾರ ವಿಚಾರದಲ್ಲಿ ಸಾಮ್ಯತೆ ಇರಬೇಕು ಎಂಬುದೇನಿಲ್ಲ. ಇದುವೇ ಆತಂಕದ ವಿಚಾರ ಆಗಬಾರದು.

    ಇಂದಿಗೂ ಅದೆಷ್ಟೋ ಪಾಲಕರು ಮಕ್ಕಳ ಕುರಿತು ಇಟ್ಟುಕೊಳ್ಳುವ ನಿರೀಕ್ಷೆ ನಿಜಕ್ಕೂ ಬೆರಗು ಮೂಡಿಸುತ್ತದೆ. ವಿಜ್ಞಾನ, ತಂತ್ರಜ್ಞಾನದ ನಾಗಾಲೋಟದಲ್ಲಿ ಇರುವ ನಾವಿಂದು ಕೆಲ ವಿಷಯಗಳಲ್ಲಿ ತುಂಬ ಹಿಂದಿದ್ದೇವೆ. ಮೊನ್ನೆ ನನ್ನ ಪರಿಚಯಸ್ಥ ಕುಟುಂಬದವರೊಬ್ಬರು ಒಂದು ಮದುವೆಗೆ ಹೋದಾಗ ಭೇಟಿ ಆಗಿದ್ದರು. ಪರಸ್ಪರ ಕುಶಲೋಪರಿ ನಂತರ ಸ್ವಲ್ಪ ಹೊರಗೆ ಕರೆದು ‘ಡಾಕ್ಟರೇ ಒಂದು ವಿಷಯ ಕೇಳುವುದಿತ್ತು ಇಲ್ಲಿ ಕೇಳಲಾ?’ ಅಂದರು. ‘ಕೇಳಿ’ ಎಂದೆ. ಅವರು ಆರಂಭದಲ್ಲಿ ಸ್ವಲ್ಪ ಮುಜುಗರಪಟ್ಟರೂ ಮೆಲ್ಲಗೆ ಹೇಳಲಾರಂಭಿಸಿದರು. ಅವರ ಮುಖದಲ್ಲಿ ಅದೇನೋ ಅವ್ಯಕ್ತ ಆತಂಕವಿತ್ತು. ‘ನನಗೆ ಅವಳಿ-ಜವಳಿ ಮಕ್ಕಳಿದ್ದಾರೆ. ಇಬ್ಬರೂ ಆರೋಗ್ಯವಾಗಿದ್ದಾರೆ. ನೋಡಲು ಒಂದೇ ತರಹ ಇದ್ದಾರೆ’ ಎಂದು ವಿವರಿಸಲಾರಂಭಿಸಿದರು. ‘ಆಯಿತು ಬಿಡಿ, ಮತ್ತಿನ್ನೇನು

    ಸಮಸ್ಯೆ’ ಎಂದೆ. ‘ಅದರಲ್ಲಿ ಒಬ್ಬ ತುಂಬಾ ಚೂಟಿ, ಇನ್ನೊಬ್ಬ ಸ್ವಲ್ಪ ಡಲ್ ಆಗಿದ್ದಾನೆ. ಅವಳಿ ಜವಳಿ ಅಂದ ಮೇಲೆ ಇಬ್ಬರೂ ಒಂದೇ ತರಹ ಇರಬೇಕಲ್ವಾ?, ಇದುವೇ ಒಂದು ದೊಡ್ಡ ಆತಂಕ ಆಗಿದೆ ಎಂದು ಹೇಳಿದರು. ಇಬ್ಬರೂ ನೋಡಲು ಒಂದೇ ತರಹ ಇದ್ದಾರೆ ಅಂದಾಕ್ಷಣ ಇಬ್ಬರ ನಡವಳಿಕೆಯೂ, ಶಕ್ತಿ , ಸಾಮರ್ಥ್ಯವೂ ಒಂದೇ ತರಹ ಇರಬೇಕೆಂಬ ನಿಯಮವೇನಿಲ್ಲ. ಇಬ್ಬರ ತಾಯಿಯೂ ಒಬ್ಬಳೇ, ಹಂಚಿಕೊಂಡು ಹುಟ್ಟಿರುವ ರಕ್ತವೂ ಒಂದೇ ಆದರೂ ಸ್ವಭಾವ, ಗುಣ ಹಾಗೂ ನಡವಳಿಕೆ ಒಂದೇ ಆಗಬೇಕೆಂದೇನಿಲ್ಲ. ಅದನ್ನು ನಾವು ಸರಳವಾಗಿ ಅರ್ಥೈಸಿಕೊಳ್ಳಬೇಕು. ಆ ತರಹದ ನಿರೀಕ್ಷೆಯೇ ತಪ್ಪು. ನೋಟ ಒಂದೇ ಆಗಬಹುದು, ಆದರೆ ಆಲೋಚನೆ, ಕ್ರಿಯಾಶೀಲತೆ ಭಿನ್ನ ಇದ್ದೇ ಇರುತ್ತದೆ. ಹಾಗಿದ್ದಾಗ ಇಬ್ಬರನ್ನೂ ಒಂದೇ ದೃಷ್ಟಿಯಿಂದ ನೋಡಿ, ಇಬ್ಬರಿಂದಲೂ ಒಂದೇ ಮಾದರಿ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪು.

    ಇದರಲ್ಲಿ ಮಕ್ಕಳ ತಪ್ಪು ಏನೂ ಇರುವುದಿಲ್ಲ ಅಥವಾ ಇದಕ್ಕೆ ಚಿಕಿತ್ಸೆಯೂ ಇಲ್ಲ. ಮೇಲಾಗಿ ಪಾಲಕರು ಇದನ್ನೇ ಒಂದು ದೊಡ್ಡ ಆತಂಕದ ವಿಚಾರವಾಗಿಸಿಕೊಳ್ಳುವುದೂ ಬೇಡ. ಬುದ್ಧಿಮತ್ತೆ, ಸಾಮಾಜಿಕ ಸಂವಹನ, ಪ್ರತಿಭೆ ಇವುಗಳ ಪ್ರಮಾಣ ಮತ್ತು ಅಂಶಗಳಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಪರಸ್ಪರ ಹೋಲಿಕೆಯೂ ಸಲ್ಲ. ಅವಳಿ ಜವಳಿಗಳಲ್ಲಿ ಒಬ್ಬನಿಗೆ ಗ್ರಹಣ ಶಕ್ತಿ, ಭಾಷಾ ಕೌಶಲ ತುಂಬ ಚೆನ್ನಾಗಿರುತ್ತದೆ. ಅದೇ ಇನ್ನೊಬ್ಬ ಮೌನವಾಗಿರುತಾನೆ. ಅದರರ್ಥ ಆತ ದಡ್ಡನಲ್ಲ. ಆತನ ಆಸಕ್ತಿ ಬೇರೆ ಇದೆ. ಅದನ್ನು ಕಂಡು ಹಿಡಿದು ಅದಕ್ಕೆ ಸೂಕ್ತ ಪೋ›ತ್ಸಾಹ ಅಥವಾ ಮಾರ್ಗದರ್ಶನ ಮಾಡಬೇಕೇ ಹೊರತು ಆತಂಕಕ್ಕೆ ಒಳಗಾಗುವುದರಲ್ಲಿ ಅರ್ಥವಿಲ್ಲ. ಕ್ರಿಯಾಶೀಲತೆ ಕಡಿಮೆ ಇದ್ದ ಮಗುವನ್ನು ಅಲ್ಲಗಳೆಯುವುದು, ಹೀಯಾಳಿಸುವುದು ಅಥವಾ ನೀನು ದಡ್ಡ ಆತ(ಇನ್ನೊಬ್ಬ) ತುಂಬಾ ಜಾಣ, ಪಾದರಸದಂತೆ ಚಟುವಟಿಕೆಯಿಂದ ಕೂಡಿರುತ್ತಾನೆ ಎಂದು ದೂರುವುದು ಮಾಡಬಾರದು. ಇದು ಆ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹೋಲಿಕೆ ಮಾಡಿ ಆತನನ್ನೂ ಈತನ ಲೆವೆಲ್​ಗೆ ತರಬಹುದು ಅಂದುಕೊಂಡಿದ್ದರೆ ಅದು ಸಾಧ್ಯವಾಗದ ಮಾತು. ಹಾಗೆ ಮಾಡಿದಲ್ಲಿ ಮಕ್ಕಳ ಮನೋಬಲ ಉಡುಗುತ್ತದೆ. ಬಾಲ್ಯಾವಸ್ಥೆಯಿಂದಲೇ ಕೀಳರಿಮೆ ಆರಂಭವಾಗಲು ಹಾಗೂ ಅನೇಕ ಮನೋಒತ್ತಡಕ್ಕೆ ಸಂಬಂಧ ಪಟ್ಟ ಆತಂಕ, ಖಿನ್ನತೆಯ ಸಮಸ್ಯೆಗಳು ಉಂಟಾಗುತ್ತವೆ.

    ಹೀಗೆ ಮಾಡಿ: ಪ್ರತಿಯೊಂದು ಮಗುವಿಗೂ ಅದರದ್ದೇ ಆದ ಒಂದು ವ್ಯಕ್ತಿತ್ವ ಇರುತ್ತದೆ. ಪ್ರತಿಭೆಯೂ ಇರುತ್ತದೆ. ಅದನ್ನು ಸಮರ್ಪಕವಾಗಿ ಗುರುತಿಸಿ, ಗೌರವಿಸಿ ಮತ್ತು ಅದಕ್ಕೆ ಪೂರಕವಾಗಿ ಅಗತ್ಯವಾದ ಬೆಂಬಲ ಕೊಡಿ. ಶಿಕ್ಷಣ ಇರಬಹುದು, ಪಠ್ಯೇತರ ಚಟುವಟಿಕೆ ಇರಬಹುದು, ಅವರವರ ಆಸಕ್ತಿ, ಅಭಿರುಚಿ ಅರಿಯಿರಿ. ವ್ಯತ್ಯಾಸಕ್ಕೆ ಕೊರಗದಿರಿ. ಇಷ್ಟಕ್ಕೂ ನಿಮಗೆ ಹಾಗೇನಾದರೂ ಸಮಸ್ಯೆ ಎನಿಸಿದರೆ ಮನೋವೈದ್ಯರನ್ನು ಸಂರ್ಪಸಿ. ದೈಹಿಕ ಸಮಸ್ಯೆಗೆ ವೈದ್ಯರನ್ನು ಸಂರ್ಪಸಿ. ಆರಂಭದಲ್ಲೇ ಆತಂಕಕ್ಕೆ ಅಂತ್ಯ ಹಾಡಿ. ಹೋಲಿಕೆ ಮಾಡುವದು ಸೂಕ್ತವಲ್ಲ, ಬದಲಾಗಿ ವಾಸ್ತವ ಅರಿಯುವದು ಸೂಕ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts