More

    ಸ್ವಸ್ಥ ಮನಸ್ಸು, ಸ್ವಸ್ಥ ಜೀವನದಿಂದ ಸ್ವಸ್ಥ ಸಮಾಜದ ನಿರ್ಮಾಣ : ಡಾ.ಆನಂದ ಪಾಂಡುರಂಗಿ ಅವರ ಹಲೋ ಡಾಕ್ಟರ್ ಅಂಕಣ

    ಸ್ವಸ್ಥ ಮನಸ್ಸು, ಸ್ವಸ್ಥ ಜೀವನದಿಂದ ಸ್ವಸ್ಥ ಸಮಾಜದ ನಿರ್ಮಾಣ : ಡಾ.ಆನಂದ ಪಾಂಡುರಂಗಿ ಅವರ ಹಲೋ ಡಾಕ್ಟರ್ ಅಂಕಣ‘ಅರವತ್ತರ ಅರಳು ಮರಳು’ ಎಂಬುದೊಂದು ಗಾದೆ ಮಾತಿದೆ. ವಯಸ್ಸು ಅರವತ್ತನ್ನು ದಾಟಿದ ನಂತರ ಮನುಷ್ಯರಲ್ಲಿ ಜ್ಞಾಪಕಶಕ್ತಿ ಕಡಿಮೆಯಾಗಿ ‘ಮರೆವು’ ನಿಧಾನವಾಗಿ ಆವರಿಸುವದು ಸಾಮಾನ್ಯ ಸಂಗತಿಯಾಗಿದೆ. ವಯಸ್ಸಾದವರ ಜೀವನದಲ್ಲಿ – ತಾವೇ ಇಟ್ಟ ಕನ್ನಡಕ, ಪೆನ್ನು ಇತ್ಯಾದಿಗಳನ್ನು ಮರೆಯುವುದು, ಎಟಿಎಂ ಪಾಸ್​ವರ್ಡ್, ಪರಿಚಿತರ ಹೆಸರು, ನಿಗದಿತ ಕಾರ್ಯಕ್ರಮಗಳಿಗೆ ಹೋಗುವುದು, ಮರೆಯುವುದು ಇತ್ಯಾದಿ ಮರೆಯುವಿಕೆಗಳು ದಿನನಿತ್ಯದ ಸಂಗತಿಗಳಾಗಿವೆ. ಇದಕ್ಕೆ ದೈಹಿಕ ಅಂಗಾಂಗಗಳ, ಅದರಲ್ಲಿಯೂ ನರಮಂಡಲದ ಕಾರ್ಯಕ್ಷಮತೆ ಕುಂಠಿತಗೊಳ್ಳುವುದು ಪ್ರಮುಖ ಕಾರಣ ಎನ್ನಬಹುದು. ಇದರ ಜೊತೆಗೆ ಆಯಾ ವ್ಯಕ್ತಿಯು ಬಾಳಿ ಬದುಕಿದ ರೀತಿ ಕೂಡ ಮುಖ್ಯವಾಗುತ್ತದೆ. ಜೀವನದಲ್ಲಿ ಆಸಕ್ತಿ ಕಳೆದುಕೊಂಡಾಗ, ನಿರಾಶಾಭಾವ ಆವರಿಸಿರುವಾಗ ಚಿಂತೆ ಆಲೋಚನೆಗಳ ಜಂಜಾಟದಲ್ಲಿ ಮನಸ್ಸು ವಿಚಲಿತಗೊಂಡು ಇನ್ನಷ್ಟು ಬೇಗ ಮರೆವು ಆವರಿಸುತ್ತದೆ. ಜೊತೆಗೆ ಅದರ ಪ್ರಮಾಣ ಪರಿಮಾಣಗಳೆರಡೂ ತೀವ್ರವಾಗುತ್ತದೆ. ಹೀಗಾಗಿ ಅಂಥವರು ಸಹಜವಾಗಿ ‘ಅರಳು ಮರಳಿನ’ ಹಣೆಪಟ್ಟಿ ಅಂಟಿಸಿಬಿಡುತ್ತಾರೆ.

    ಹೀಗಿದ್ದರೂ ವಯಸ್ಸಾಗುವಿಕೆಯೇ ‘ಮರೆವಿನ’ ಮೂಲ ಕಾರಣ ಅಲ್ಲವೇ ಅಲ್ಲ. ಅನೇಕ ಮಹನೀಯರು ತೊಂಬತ್ತರ ಅಂಚಿಗೆ ಬಂದಿದ್ದಾಗಲೂ ತಮ್ಮ ನೆನಪಿನ ಗಣಿಯಿಂದ ಅತ್ಯದ್ಭುತ ವಿಷಯಗಳನ್ನು ಕ್ರಮಬದ್ಧವಾಗಿ ವಿವರಿಸಿ ಎಲ್ಲರನ್ನು ಬೆರಗುಗೊಳಿಸುತ್ತಿದ್ದರು. ಎಂಬತ್ತರ ವಯಸ್ಸು ದಾಟಿದರೂ ಸಹಸ್ರಾರು ಜನರನ್ನು ತಮ್ಮ ಪ್ರವಚನಗಳಿಂದ ಮಂತ್ರಮುಗ್ಧರಾಗಿಸುತ್ತಿರುವುದನ್ನು ಇಂದೂ ನೋಡುತ್ತಿದ್ದೇವೆ. ಕಾರಣ ‘ಮರೆವಿಗೆ’ ಶಾರೀರಿಕ ವಯೋಮಾನ ಒಂದು ಚಿಕ್ಕ ಕಾರಣ ಅಷ್ಟೇ. ಇದರ ಮೂಲ ಕಾರಣ ನಮ್ಮ ಮನಸ್ಸು ಅಸ್ವಸ್ಥಗೊಳ್ಳುವುದೇ ಆಗಿದೆ. ಮನಸ್ಸೇ ಶರೀರದ ಅಂತರಂಗ ಬಹಿರಂಗದ ಎಲ್ಲ ಕಾರ್ಯಗಳಿಗೂ ಮೂಲ ಕಾರಣ ಎಂಬುದು ಮನೋವಿಜ್ಞಾನ ರೂಪಿಸಿದ ಸಿದ್ಧಾಂತವಾಗಿದೆ.

    ಇತ್ತೀಚಿನ ದಿನಗಳಲ್ಲಿ ‘ಮರೆವು’ ಎಂಬುದು ಮಹಾ ಪಿಡುಗಾಗಿ ಹದಿಹರೆಯರದವರಲ್ಲಿ ಅದರಲ್ಲಿಯೂ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಾಡುತ್ತಿದೆ. ಪರೀಕ್ಷಾ ಭಯವಂತೂ ಇಂದು ಸಾಮಾನ್ಯ ಸಂಗತಿಯಾಗಿದೆ. ಪ್ರತೀ ವರ್ಷ ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಇಂಥ ವಿದ್ಯಾರ್ಥಿಗಳು ನನ್ನ ಬಳಿ ಹೆಚ್ಚು ಹೆಚ್ಚು ಬರುತ್ತಿರುತ್ತಾರೆ. ಸ್ಮರಣಶಕ್ತಿ ಹಾಗೂ ಏಕಾಗ್ರತೆಯ ಕೊರತೆಗಳೇ ಪರೀಕ್ಷಾ ಭಯಕ್ಕೆ ಮೂಲ ಕಾರಣಗಳಾಗಿವೆ. ಇವುಗಳ ಜತೆಗೆ ವಯೋಮಾನಕ್ಕೆ ಅನುಗುಣವಾಗಿ ಭೌತಿಕ ಆಕರ್ಷಣೆಗಳಿಗೆ ಒಳಗಾಗಿ ವಿದ್ಯಾರ್ಥಿಗಳು ಸಲ್ಲದ ವಿಚಾರಗಳನ್ನು ತಲೆಗೆ ಹಾಕಿಕೊಂಡು ಖಿನ್ನತೆಗೆ ಒಳಗಾಗುತ್ತಿದ್ದರೆ.

    ಮಾಯೆಯಂಥ ಮತ್ತೊಂದು ಅವತಾರವಾದ ‘ಮೊಬೈಲ್’ ಎಂಬುದು ಒತ್ತಡಗಳನ್ನು ಹುಟ್ಟುಹಾಕುವ ಕೇಂದ್ರಸ್ಥಳ. ಯುವಜನಾಂಗದ ಮನಸ್ಸನ್ನು ಕೆಡಿಸಿ ನಾನಾ ರೀತಿಯ ಒತ್ತಡಗಳಿಗೆ ಗುರಿಮಾಡಿ ಅವರನ್ನು ಅಂತರಪಿಶಾಚಿಗಳನ್ನಾಗಿ ಮಾಡಿಬಿಟ್ಟಿದೆ. ಇದರ ಜೊತೆಗೆ ಜಾಗತೀಕರಣದ ಈ ವೇಗದಲ್ಲಿ ಉದ್ಯೋಗಿಗಳಲ್ಲಿಯೂ ಇದು ಇಣುಕತೊಡಗಿದೆ. ಕೆಲಸದ ಒತ್ತಡದಲ್ಲಿ ಸಿಲುಕಿದ ಮನುಷ್ಯ ಖಿನ್ನತೆಗೆ ಒಳಗಾಗುವದು ಸ್ವಾಭಾವಿಕ. ಆ ಸಂದರ್ಭದಲ್ಲಿ ಮನಸ್ಸು ತೀರ ವಿಚಲಿತಗೊಂಡು ತಾನೇನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಲಕ್ಷ್ಯವಿಲ್ಲದೆ ತೊಂದರೆಗೆ ಸಿಲುಕಿಕೊಳ್ಳುತ್ತಾನೆ. ವಿದ್ಯಾರ್ಥಿಗಳೂ ಪರೀಕ್ಷಾ ಫಲಿತಾಂಶ, ಪಾಲಕರ ಮತ್ತು ಸ್ನೇಹಿತರ ಪ್ರಭಾವಕ್ಕೆ ಸಿಲುಕಿ, ಒತ್ತಡಕ್ಕೆ, ಖಿನ್ನತೆಗೆ ಒಳಗಾಗುತ್ತಾರೆ. ಇದರ ಪರಿಣಾಮವಾಗಿ ಓದಿದ್ದೆಲ್ಲ ಮರೆತುಹೋಗಿ ಫಲಿತಾಂಶದಲ್ಲಿ ಏರುಪೇರಾಗುವುದನ್ನು ನಾವು ಕಾಣುತ್ತೇವೆ. ಇನ್ನು ಯೋಗ್ಯ ಉದ್ಯೋಗ ದೊರಕದೆ, ಬದುಕಿನ ದಾರಿ ಗೋಚರಿಸದೆ ಯುವಜನರೂ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಉದ್ಯೋಗಕ್ಕೂ ಶಿಕ್ಷಣಕ್ಕೂ ಸಂಬಂಧ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ.

    ಒಟ್ಟಿನಲ್ಲಿ ಇಂದು ‘ಮರೆವು’ ಎಂಬುದು ವಯಸ್ಸಿನ ನಿರ್ಬಂಧವಿಲ್ಲದೆ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಅರವತ್ತಕ್ಕೆ ‘ಅರಳು ಮರಳು’ ಎಂಬ ಗಾದೆ ಸುಳ್ಳಾಗುತ್ತಲಿದೆ. ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳು, ಅವುಗಳನ್ನು ನಾಗಾಲೋಟದಿಂದ ಬೆನ್ನತ್ತಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಧಾವಂತದಲ್ಲಿರುವ ಯುವಜನಾಂಗ ಅನಗತ್ಯವಾದ ಒತ್ತಡಗಳಿಗೆ ಬಲಿಯಾಗುತ್ತಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಇದೇ ಪರಿಸ್ಥಿತಿ ಇದೆ.

    ‘ಮರೆವು’ ಇಷ್ಟು ಕೆಟ್ಟದ್ದೇ? ಇದು ಬೇಡವೇ ಬೇಡ ಎನ್ನಲಾದೀತೇ? ನಾವು ಏನನ್ನೂ ಮರೆಯದಿದ್ದರೆ ಪರಿಸ್ಥಿತಿ ಏನಾದೀತು ಎಂದು ಊಹಿಸುವುದೂ ಕಷ್ಟ. ಕಹಿ ಘಟನೆಗಳನ್ನು ಮರೆಯಬೇಕಲ್ಲವೇ? ಹೀಗಾಗಿ ‘ಮರೆವನ್ನು’ ಸಕಾರಾತ್ಮಕ, ನಕಾರಾತ್ಮಕ ಎಂಬುದಾಗಿ ವಿಂಗಡಿಸುವುದುಂಟು. ಜೀವನದಲ್ಲಿ ಆಪ್ತರ ಅಗಲುವಿಕೆ, ಅಪಘಾತ ಇತ್ಯಾದಿ ಕಹಿಪ್ರಸಂಗಗಳನ್ನು ಸಕಾರಾತ್ಮಕವಾಗಿ ಮರೆಯಬೇಕಾಗುತ್ತದೆ. ‘ಅಯ್ಯೋ! ನನಗೆ ಹೀಗಾಯಿತಲ್ಲ’ ಎಂದು ದುಃಖಿಸುತ್ತ ಕುಳಿತುಕೊಳ್ಳುವುದು ನಕಾರಾತ್ಮಕವಾಗುತ್ತದೆ. ಕಾರಣ ‘ಮರೆವು’ ಮನುಷ್ಯನಿಗೆ ಅತ್ಯವಶ್ಯವಾಗಿ ಬೇಕು. ಆದರೆ ಅದು ಒಂದು ಮಟ್ಟದಲ್ಲಿದ್ದರೆ ಸಾಕು.

    ವಯಸ್ಸಾದವರಲ್ಲಿ ‘ಮರೆವು’ ಹೆಚ್ಚಾಗುವುದಕ್ಕೆ ಮಿದುಳಿನ ನಶಿರೋಗ (ಈಛಿಞಛ್ಞಿಠಿಜಿಚ) ಎಂದು ಕರೆಯುತ್ತಾರೆ. ಇದರಲ್ಲಿಯೂ ಹಲವು ಪ್ರಕಾರಗಳುಂಟು. ಇಂಥದೇ ಕಾರಣಕ್ಕೆ ‘ಮರೆವು’ ಬರುತ್ತದೆ ಎಂದು ಹೇಳುವುದು ಕಷ್ಟ. ಅಷ್ಟೇ ಅಲ್ಲ, ನಮ್ಮೊಡನೆ ಇದ್ದವರಿಗೂ ಇಂಥ ಕಾಯಿಲೆ ಇದೆ ಎಂಬುದು ಗೊತ್ತಾಗುವುದಿಲ್ಲ. ಇದನ್ನು ನೋಡಿ ಆ ವ್ಯಕ್ತಿ ತನ್ನ ಜೀವನದಲ್ಲಿ ಆಗಿಹೋದ ಬಹುಪಾಲು ಘಟನೆಗಳನ್ನು ಕರಾರುವಕ್ಕಾಗಿ ವಿವರಿಸಬಲ್ಲ. ವಿಚಿತ್ರವೆಂದರೆ, ಆ ದಿನದ ಬೆಳಗಿನ ಉಪಹಾರದ ಬಗ್ಗೆ ಅವರಿಗೆ ನೆನಪಿರುವುದಿಲ್ಲ. ಹೀಗೇಕೆ, ಇವರಿಗೆ ಏನಾಯಿತು ಎಂಬ ಪ್ರಶ್ನೆಗಳು ಕಾಡುವುದು ಸಹಜ. ಇದನ್ನು ಮನಃಶಾಸ್ತ್ರದ ಪರಿಭಾಷೆಯಲ್ಲಿ ಅ್ಢಛಿಜಿಞಛ್ಟಿ’ಠ ಎಂದು ಕರೆಯುತ್ತಾರೆ. ಮಿದುಳಿನಲ್ಲಿ ನರಕೋಶದ ದೌರ್ಬಲ್ಯದಿಂದ ಮನುಷ್ಯ ಈ ಕಾಯಿಲೆಗೆ ತುತ್ತಾಗುತ್ತಾನೆ. ಆಗ ಅವನ ವಿವೇಚನಾಶಕ್ತಿ ಹಾಗೂ ಗ್ರಹಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ಮಾಡಿದ್ದನ್ನೇ ಮಾಡುವುದು, ದಿನನಿತ್ಯದ ಕಾರ್ಯಗಳನ್ನು ಮರೆಯುವುದು, ಅಷ್ಟೇ ಏಕೆ, ತನಗರಿವಿಲ್ಲದಂತೆ ಮಲ-ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು ಇವೆಲ್ಲ ಪರಿಣಾಂಗಳಾಗುತ್ತವೆ. ಕುಟುಂಬವರ್ಗದವರಿಗೆ ಇಂಥವರನ್ನು ನಿಭಾಯಿಸುವುದು ತುಂಬ ಕಷ್ಟವಾಗುತ್ತದೆ.

    2011ರ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ 104 ಮಿಲಿಯನ್ ಜನ ಅಂದರೆ ಶೇ. ಎಂಟರಷ್ಟು ಜನ 60 ವರ್ಷ ವಯಸ್ಸನ್ನು ಮೀರಿದವರಿದ್ದಾರೆ. ಈ ಹಿರಿಯರಲ್ಲಿ ಶೇ. 30ರಿಂದ 35ರಷ್ಟು ಜನ ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇವರಲ್ಲಿ ಶೇ. 20ರಿಂದ 22ರಷ್ಟು ಜನ ಖಿನ್ನತೆಗೆ, ಶೇ. 10ರಷ್ಟು ಜನ ಆತಂಕ/ಉದ್ವೇಗ ಹಾಗೂ ಶೇ. 16ರಿಂದ 20ರಷ್ಟು ಜನ ಅರಿವಿಗೆ (ಟಜ್ಞಜಿಠಿಜಿಡಛಿ) ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇನ್ನು 65 ವರ್ಷ ದಾಟಿದವರಲ್ಲಿ ಶೇ. 0.9ರಿಂದ 7.5ರಷ್ಟು ಜನ ಸ್ಮರಣಶಕ್ತಿಗೆ ಸಂಬಂಧಿಸಿದ ತೊಂದರೆಗಳಿಂದ (ಈಛಿಞಛ್ಞಿಠಿಜಿಚ) ಬಳಲುತ್ತಿದ್ದಾರೆ. ಹೊಸ ವೈದ್ಯಕೀಯ ಆವಿಷ್ಕಾರಗಳಿಂದಾಗಿ ಮನುಷ್ಯನ ಜೀವಿತಾವಧಿ ಸುಧಾರಿಸುತ್ತಿದೆ. ಹೀಗಾಗಿ 2050ರ ವೇಳೆಗೆ ಜಗತ್ತಿನ ಜನಸಂಖ್ಯೆಯಲ್ಲಿ ಶೇ. 20ರಷ್ಟು ಜನ ಹಿರಿಯರು ಇರುತ್ತಾರೆಂದು ಅಂದಾಜಿಸಲಾಗಿದೆ. ಹೀಗೆ ಈ ಶತಮಾನದ ಮಹಾಪಿಡುಗಾಗಿರುವ ‘ಮರೆವು’ ಎಂಬುದು ಯುವಜನಾಂಗದಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಕಾಡುತ್ತ ಅವರನ್ನು ಇನ್ನಷ್ಟು ಒತ್ತಡಕ್ಕೆ ನೂಕಿದೆ.

    ಇಂತಹ ಎಲ್ಲ ಸಮಸ್ಯೆಗಳಿಗೆ ಮನೋವಿಜ್ಞಾನದಲ್ಲಿ ಪರಿಹಾರಗಳಿವೆ. ಮನೋವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಸೂಚನೆ, ಔಷಧೋಪಚಾರ ಮಾಡಿಸಿದಲ್ಲಿ ಈ ಸಮಸ್ಯೆಗಳಿಂದ ಪಾರಾಗಿ ಉತ್ತಮ ಜೀವನವನ್ನು ಸಾಗಿಸಬಹುದು. ಡಿಮೆನ್ಷಿಯಾ ಇದ್ದಂತಹ ರೋಗಿಗಳ ಆರೈಕೆಯಲ್ಲಿ ಕುಟುಂಬದವರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಸ್ವಸ್ಥ ಮನಸ್ಸು – ಸ್ವಸ್ಥ ಜೀವನ – ಆ ಮೂಲಕ ಸ್ವಸ್ಥ ಸಮಾಜದ ಗುರಿ ನಮ್ಮದಾಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts