More

    ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮರು ನಿರ್ಮಾಣ

    ಹೇಮನಾಥ ಪಡುಬಿದ್ರಿ
    ದೇವಾಲಯ ರಚನೆಯಲ್ಲಿ ಶಿಲ್ಪದ ಸೊಗಸು ಮೇಳೈಸುವುದು ಸಹಜ. ಅಂಥ ಅಪೂರ್ವ ಕುಶಲ ಕುಸುರಿ ರಚನಾ ಕಾರ್ಯ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮರು ನಿರ್ಮಾಣದಲ್ಲಿ ರೂಪ ಪಡೆದುಕೊಳ್ಳುತ್ತಿದೆ.

    ಸುಮಾರು 900 ವರ್ಷಗಳ ಇತಿಹಾಸದ ಅಪೂರ್ವ ಗಜಪೃಷ್ಠ ಗರ್ಭಗುಡಿ ಹೊಂದಿರುವ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಮರು ನಿರ್ಮಾಣವಾಗುತ್ತಿದ್ದು ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.

    ಗಜಪೃಷ್ಠಾಕಾರದ ಗರ್ಭಗುಡಿಯ ಪ್ರತಿಬಂಧ ಕ್ರಮದ ಅಧಿಷ್ಠಾನ, ಭಿತ್ತಿ ಸ್ತಂಭ- ಪಂಜರ- ಘನದ್ವಾರ-ಉತ್ತರವಲ್ಲಭೀಕಪೋತ ಮತ್ತಿತರ ಶಾಸ್ತ್ರೀಯ ನಿರ್ಮಿತಿಗಳಿಂದ ಭಿತ್ತಿ ಸಿದ್ಧಗೊಂಡಿದೆ. ಗ್ರೀವದಲ್ಲಿ (ಪ್ರಸ್ತರ ಮತ್ತು ಸ್ತೂಪಿಯ ಎರಡು ಛಾವಣಿಯ ಮಧ್ಯದ ಸ್ಥಳಾವಕಾಶ) ಇಟ್ಟಿಗೆ, ಸಿಮೆಂಟ್ ಬಳಸಿ ಅಸಾಧಾರಣ ಕುಸುರಿ ಕಲೆಯ ಕೌಶಲ ಪಡಿಮೂಡುತ್ತಿದೆ.

    ಈ ರಚನೆಯು ಶಿಲ್ಪದ ಶ್ರೀಮಂತಿಕೆಯ ಅಭಿವ್ಯಕ್ತಿಯಾಗಿ ಮೂಡಿದೆ. ಸ್ಥಪತಿ ಅವದಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರ ನಿರ್ದೇಶನದಂತೆ ದೇವಾಲಯದ ನಿರ್ಮಾಣ ನಡೆಯುತ್ತಿದ್ದು, ಮುರುಡೇಶ್ವರದ ಎಂಟು ಕುಶಲಕರ್ಮಿಗಳು ಮೂರು ತಿಂಗಳಿನಿಂದ ಗರ್ಭಗುಡಿಯ ಗ್ರೀವದ ಕಾರ್ಯದಲ್ಲಿ ನಿರತರಾಗಿದ್ದಾರೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಪುಣೆ, ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ ಮುತುವರ್ಜಿಯಿಂದ ಕಾಮಗಾರಿ ನಡೆಯುತ್ತಿದೆ.

    ಗರ್ಭಗುಡಿಯ ಒಳಸುತ್ತಿನಲ್ಲಿ ಕರ್ಣ ಮುಚ್ಚಿಕೆಯ ಬದಲು ಕೆಂಪುಕಲ್ಲಿನ ತೊರವು ಗಮನ ಸೆಳೆಯುತ್ತಿದೆ. ಗರ್ಭಗುಡಿಯ ಚತುರಸ್ರ ಆಕಾರದ (ಗಜಪೃಷ್ಠಕ್ಕೆ ತಿರುಗುವ ಮೊದಲಿನ ಆಕಾರ) ಮೇಲೆ ಅದೇ ಆಕಾರದಲ್ಲಿ ಆರಂಭಗೊಂಡು ಅಷ್ಟಪಟ್ಟಿಯಾಗಿ ವಿಸ್ತರಿಸಲ್ಪಟ್ಟು ಮುಂದೆ ವೃತ್ತವಾಗಿ ಮೇಲೆ ಗೋಲಾಕಾರವಾಗಿ ನಿರ್ಮಿಸಲ್ಪಟ್ಟ ಪುರಾತನ ಕರ್ಣಮುಚ್ಚಿಕೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿರುವ ವಿರಳ ರಚನೆಗಳು ಇಲ್ಲಿವೆ.
    -ಕೆ.ಎಲ್.ಕುಂಡಂತಾಯ, ಜಾನಪದ ಸಂಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts