More

    ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಪಕ್ಷಗಳು ವಿಫಲ

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಜನರತ್ತ ಸಹಾಯ ಹಸ್ತ ಚಾಚಬೇಕಿದ್ದ ರಾಜಕೀಯ ಪಕ್ಷಗಳು ತಟಸ್ಥವಾಗಿವೆ.

    ಮಂಡಲ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಶೀತಲ ಸಮರದಲ್ಲಿ ಮುಳುಗಿರುವ ಬಿಜೆಪಿ ಕೂಡ ಜನರ ನಿರೀಕ್ಷೆಯಂತೆ ನೆರವಿಗೆ ದಾವಿಸಿಲ್ಲ.

    ಹಿರಿಯೂರು ಕ್ಷೇತ್ರವನ್ನು ತುಂಬ ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಅಥವಾ ಅಲ್ಪ- ಸ್ವಲ್ಪ ನೆಲೆ ಉಳಿಸಿಕೊಂಡಿರುವ ಜೆಡಿಎಸ್ ಆಗಲಿ ಈ ಬಗ್ಗೆ ಯೋಚನೆ ಮಾಡಿದಂತಿಲ್ಲ.

    ಬಡವರು ದಿನ ನಿತ್ಯದ ಆಹಾರ ಸಾಮಗ್ರಿಗೆ ಪರದಾಡುತ್ತಿದ್ದಾರೆ. ಕೃಷಿ ಉತ್ಪನ್ನಗಳು ಮಾರಾಟವಾಗದೆ ಮಣ್ಣುಪಾಲಾಗಿವೆ. ಈ ಹಂತದಲ್ಲಿ ಸಂತ್ರಸ್ತರಿಗೆ, ಕೃಷಿ ಕೂಲಿಕಾರರಿಗೆ ಆಹಾರದ ಕಿಟ್ ವಿತರಣೆಯಂತಹ ಸೇವಾ ಕಾರ್ಯಕ್ಕೆ ಒತ್ತು ಕೊಡಬೇಕಿದ್ದ ರಾಜಕೀಯ ನಾಯಕರು ಗೂಡು ಸೇರಿದಂತಿದೆ.

    ಈ ಬಾರಿ ಹಿರಿಯೂರಲ್ಲಿ ಬಿಜೆಪಿ ಗೆದ್ದಿದೆ ನಿಜ. ಆದರೆ, ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಡೆ ಈಗಲೂ ಇದೆ. ಮಾಜಿ ಸಚಿವ ಡಿ.ಸುಧಾಕರ್ 2019ರ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಬ್ಲಾಕ್ ಕಾಂಗ್ರೆಸ್ ಕೂಡ ಸಕ್ರೀಯವಾಗಿಲ್ಲ ಎಂಬ ದೂರು ಪಕ್ಷದ ವಲಯದಿಂದಲೇ ಕೇಳಿ ಬಂದಿದೆ.

    ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕತ್ತು ಹಾಗೂ ಬೆನ್ನು ನೋವಿನ ಕಾರಣ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅಲ್ಲಿಂದಲೇ ತಾಲೂಕು ಆಡಳಿತಕ್ಕೆ ಸಲಹೆ, ಸೂಚನೆ ನೀಡುತ್ತಿದ್ದಾರೆ.

    ಶಾಸಕರ ಬೆಂಬಲಿಗರಾದರೂ ಸಾಮಾಜಿಕ ಅಂತರ ಕಾಯ್ದುಕೊಂಡು ಒಂದಷ್ಟು ಜಾಗೃತಿ ಜತೆಗೆ ಆಹಾರದ ಕಿಟ್ ವಿತರಿಸಬಹುದಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ.

    ಮನೆ ಸೇರಿದ ನಾಯಕರು: ಕಳೆದ ಮೂರು ವಿಧಾನಸಭೆ ಚುನಾವಣೆಗಳಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿರುವ ಜೆಡಿಎಸ್ ಕೂಡ ಜನರ ನೆರವಿಗೆ ಧಾವಿಸಿಲ್ಲ.ಕಾರ್ಯಕರ್ತರು ಇದ್ದರೂ ಸಮರ್ಥ ನಾಯಕತ್ವದ ಕೊರತೆ, ಮುಖಂಡರ ಒಳಜಗಳಕ್ಕೆ ತೆನೆ ಸೊರಗಿದೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ಲಾಕ್‌ಡೌನ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾಗಿದೆ, ಪಕ್ಷದ ಮುಖಂಡರ ನಿಷ್ಕ್ರಿಯತೆಯಿಂದ ಜನರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಕಾರ್ಯಕರ್ತ.

    ಬಿಜೆಪಿಯಲ್ಲಿ ಕೋಲ್ಡ್ ವಾರ್: ಮಂಡಲ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಬಿಜೆಪಿಯಲ್ಲಿ ಎರಡು ಬಣಗಳಾಗಿವೆ. ತಾವು ಸೂಚಿಸಿದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ ಎಂಬ ಆಕ್ರೋಶ ಶಾಸಕರಲ್ಲಿದೆ. ಪಕ್ಷದಲ್ಲಿನ ಕೋಲ್ಡ್ ವಾರ್‌ನಿಂದ ಶಾಸಕರು-ಮಂಡಲ ಅಧ್ಯಕ್ಷರ ನಡುವೆ ಸಮನ್ವಯ ಕೊರತೆಯಾಗಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಸಮರ್ಥವಾಗಿ ಲಾಕ್‌ಡೌನ್ ಪರಿಸ್ಥಿತಿ ನಿಭಾಯಿಸುವಲ್ಲಿ ಕಮಲ ಪಕ್ಷ ವಿಫಲವಾಗಿದೆ ಎಂಬ ದೂರು ಕೇಳಿ ಬಂದಿದೆ.

    ಕೃಷಿ ಉತ್ಪನ್ನ ಮಾರಟಕ್ಕೆ ಬೇಕು ಸೂಕ್ತ ವ್ಯವಸ್ಥೆ: ನರೇಗಾ, ಕಿಸಾನ್ ಸಮ್ಮಾನ್, ಮಾಸಾಶನ, ಪಡಿತರ, ಕುಡಿವ ನೀರು ರು ಸಮರ್ಪಕ ಪೂರೈಕೆ ನಿಗಾ ವಹಿಸಬೇಕಿದೆ. ರೈತರು ಬೆಳೆದ ಹಣ್ಣು-ಹಂಪಲು, ತರಕಾರಿ ಇತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts