More

    ಸ್ವಾತಂತ್ರ್ಯ ಚಳವಳಿ ಕುರಿತ ಹೆಗಡೆ ಹೇಳಿಕೆ ವಿವಾದ- ಪ್ರಧಾನಿ ಬದ್ಧತೆ ಗಾಂಧಿ ಕಡೆಗೋ, ಗೋಡ್ಸೆ ಕಡೆಗೋ ಎಂದ ಕಾಂಗ್ರೆಸ್​, ಹೆಗಡೆ ವಿರುದ್ಧ ರಾಷ್ಟ್ರದ್ರೋಹದ ಕೇಸ್​

    ನವದೆಹಲಿ: ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ನೀಡಿರುವ ಹೇಳಿಕೆ ವಿಚಾರವಾಗಿ ಪ್ರಧಾನಮಂತ್ರಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ. ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಡಿ ಸಂಸದ ಹೆಗಡೆ ವಿರುದ್ಧ ರಾಷ್ಟ್ರದ್ರೋಹದ ಕೇಸನ್ನೂ ಕಾಂಗ್ರೆಸ್ ದಾಖಲಿಸಿದೆ.
    ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು ಬ್ರಿಟಿಷರೊಂದಿಗಿನ ಅಡ್ಜಸ್ಟ್​ಮೆಂಟ್ ಎಂದು ವ್ಯಾಖ್ಯಾನಿಸಿದ ಸಂಸದ ಹೆಗಡೆಯವರ ಹೇಳಿಕೆ ಖಂಡನೀಯ. ಪ್ರಧಾನಮಂತ್ರಿ ಮತ್ತು ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿ ಮಹಾತ್ಮ ಗಾಂಧಿಯವರ 150ನೇ ಜಯಂತಿ ಆಚರಿಸುತ್ತಿರುವುದು ಹೌದೇ ಆದಲ್ಲಿ, ಪ್ರಧಾನಮಂತ್ರಿಯವರು ಸಂಸತ್ತಿಗೆ ಆಗಮಿಸಿ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಈ ಹೇಳಿಕೆ ವಿಚಾರವಾಗಿ ಕ್ಷಮೆ ಯಾಚಿಸಬೇಕು. ಬಿಜೆಪಿ ನಾಯಕತ್ವ ಕೂಡ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಆನಂದ ಶರ್ಮಾ ಆಗ್ರಹಿಸಿದ್ದಾರೆ.
    ಚುನಾವಣಾ ಗೆಲುವಿಗಾಗಿ ಅವರು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವೊಂದು ಮತ ಗಳಿಸುವುದಕ್ಕಾಗಿ ಅವರು ಭಾರತದ ಆತ್ಮಕ್ಕೇ ಘಾಸಿ ಉಂಟುಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳು ಅವರ ಮನಸ್ಥಿತಿಯ ಪ್ರತೀಕವಾಗಿದ್ದು, ಗಾಂಧಿಯವರ ಹೆಸರನ್ನು ಅವರು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ನಿದರ್ಶನ ಎಂದು ಶರ್ಮಾ ಟೀಕಿಸಿದರು.
    ನಿತ್ಯವೂ ಎಂಬಂತೆ ಮಹಾತ್ಮ ಗಾಂಧಿ ಅವರನ್ನು ಅಪಮಾನಿಸುತ್ತಿರುವ ಪ್ರಗ್ಯಾ ಠಾಕೂರ್ ವಿರುದ್ಧ ಪ್ರಧಾನಿ ಕ್ರಮ ತೆಗೆದುಕೊಂಡರೇ? ಈಗ ನೋಡಿ ಹೇಟ್ ಬಾಪು ಕೋರಸ್​ಗೆ ಅನಂತ ಕುಮಾರ್ ಹೆಗಡೆ ಧ್ವನಿಯೂ ಸೇರಿದೆ. ಪ್ರಧಾನಿಯವರ ಗಾಂಧಿ ಬಗೆಗಿನ ಪ್ರೇಮ ಕೇವಲ ಜಾಹೀರಾತುಗಳಲ್ಲಿ ಕಾಣಿಸುತ್ತಿದೆಯೇ ಹೊರತು, ವಾಸ್ತವದಲ್ಲಲ್ಲ. ಅವರ ಬೆಂಬಲಿಗರನ್ನು ಒಗ್ಗೂಡಿಸುವುದಕ್ಕೆ ಹೇಟ್ ಮಹಾತ್ಮ ಗಾಂಧಿ ಒಂದು ಅಸ್ತ್ರವಾಗಿ ಕಾಣುತ್ತಿದೆ. ಒಂದೊಮ್ಮೆ ಪ್ರಧಾನಿಗೆ ಮಹಾತ್ಮ ಗಾಂಧಿ ಬಗ್ಗೆ ಅಭಿಮಾನವಿದ್ದರೆ ಅವರು ಕೂಡಲೇ ಠಾಕೂರ್ ಮತ್ತು ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಪ್ರಧಾನಿಯವರ ಬದ್ಧತೆ ಗಾಂಧಿ ಕಡೆಗೋ ಗೋಡ್ಸೆ ಕಡೆಗೋ ಎಂಬುದನ್ನು ಸಾಬೀತು ಮಾಡಲು ಇದು ಸಕಾಲ ಎಂದು ಶರ್ಮಾ ಸವಾಲು ಹಾಕಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts