More

    ಹೆದ್ದಾರಿ ಸಂಪರ್ಕಕ್ಕಾಗಿ ಒಗ್ಗಟ್ಟಿನ ಹೋರಾಟ: ಸಮಾನ ಮನಸ್ಕರ ಸಭೆಯಲ್ಲಿ ತೀರ್ಮಾನ

    ಚನ್ನಪಟ್ಟಣ: ನೂತನವಾಗಿ ನಿರ್ಮಾಣವಾಗುತ್ತಿರುವ ಎನ್‌ಎಚ್ 275 ಬೈಪಾಸ್ ರಸ್ತೆಗೆ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಎಂಟ್ರಿ – ಎಕ್ಸಿಟ್ (ಲಿಂಕ್) ನಿರ್ಮಾಣದ ವಿಚಾರವಾಗಿ ಹಂತ ಹಂತವಾಗಿ ಹೋರಾಟ ರೂಪಿಸಲು ಬುಧವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

    ಈ ಸಂಬಂಧ ನಗರದ ಜ್ಯೋತಿ ನರೇಂದ್ರ ವಾಣಿಜ್ಯ ಸಮುಚ್ಚಯದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಹಾಗೂ ಆ ಭಾಗದ ಪ್ರಮುಖರು ಈ ನಿರ್ಧಾರ ಕೈಗೊಂಡರು.

    ಸಭೆಯಲ್ಲಿ ತಾಪಂ ಅಧ್ಯಕ್ಷ ಹರೂರು ರಾಜಣ್ಣ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ರಾಜ್ಯ ರೈತಸಂಘದ ಉಪಾಧ್ಯಕ್ಷ ಲಕ್ಷ್ಮಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಮಾದು, ಎ.ಸಿ.ವಿರೇಗೌಡ, ಕುಕ್ಕುಟ ಮಹಾಮಂಡಳದ ಅಧ್ಯಕ್ಷ ಡಿ.ಕೆ. ಕಾಂತರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ನಾಗವಾರ ರಂಗಸ್ವಾಮಿ, ಉಮಾಶಂಕರ್, ಶಂಭೂಗೌಡ, ಕಾಂಗ್ರೆಸ್ ಮುಖಂಡರಾದ ಶರತ್‌ಚಂದ್ರ, ಶಾರದಗೌಡ, ಕೆ.ಟಿ.ಲಕ್ಷ್ಮಮ್ಮ, ಪ್ರಮೋದ್, ಪಿ.ಡಿ. ರಾಜು, ವಕೀಲರ ಸಂಘದ ಅಧ್ಯಕ್ಷ ಟಿ.ವಿ. ಗಿರೀಶ್, ಕರವೇ ತಾಲೂಕು ಅಧ್ಯಕ್ಷ ಸಾಗರ್, ತಿಟ್ಟಮಾರನಹಳ್ಳಿ ಗ್ರಾಮದ ಮುಖಂಡರಾದ ಟಿಪಿ ಹನುಮಂತಯ್ಯ, ಟಿ.ಎಲ್ ರಾಜು, ಉಮಾಶಂಕರ್, ಶಿವಕುಮಾರ್, ಮಹದೇವ್, ಮಂಜೇಶ್, ರಾಜಣ್ಣ, ಮಳೂರು ಗ್ರಾಪಂ ಅಧ್ಯಕ್ಷ ರಮೇಶ್, ಬಿಜೆಪಿ ಮುಖಂಡ ವಿ.ಬಿ. ಚಂದ್ರು, ಡಿಎಸ್‌ಎಸ್‌ನ ವೆಂಕಟೇಶ್( ಶೇಠು), ವಕೀಲ ಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.

    ಇಡೀ ತಾಲೂಕಿಗೆ ಅನುಕೂಲ: ನೂತನವಾಗಿ ನಿರ್ಮಾಣವಾಗುತ್ತಿರುವ ಬೈಪಾಸ್ ರಸ್ತೆಯ ಕೆಳಗೆ ಚನ್ನಪಟ್ಟಣ- ಕುಣಿಗಲ್ ರಾಜ್ಯ ಹೆದ್ದಾರಿ ಹಾದುಹೋಗಲಿದ್ದು, ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಈ ಬೈಪಾಸ್ ರಸ್ತೆಯನ್ನು ಸಂಪರ್ಕಿಸುವಂತೆ ಲಿಂಕ್ ಕಲ್ಪಿಸಿದರೆ ನಗರ ಹಾಗೂ ತಾಲೂಕಿನ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ಅಧಿಕಾರಿಗಳು ರೂಪಿಸಿರುವ ಯೋಜನೆ ಅವೈಜ್ಞಾನಿಕವಾಗಿದ್ದು, ತಾಲೂಕಿನ ಜನತೆ ಈ ರಸ್ತೆಯನ್ನು ಸಂರ್ಪಕಿಸಲು ಹತ್ತಾರು ಕಿ.ಮೀ. ಬಳಸಿ ಬರಬೇಕಾದ ಅನಿವಾರ್ಯತೆ ಇದೆ.

    ಹೋರಾಟ ಅನಿವಾರ್ಯ: ಸಭೆಯಲ್ಲಿ ಮಾತನಾಡಿದ ಪ್ರಮುಖರು, ಈಗಾಗಲೇ ಈ ಲಿಂಕ್ ರಸ್ತೆಗಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದ ಡಿ.ಕೆ. ಸುರೇಶ್ ಹಲವಾರು ಪ್ರಯತ್ನಗಳನ್ನು ನಡೆಸಿದ್ದಾರೆ. ಸಂಸದರು ಖುದ್ದು ಕೇಂದ್ರ ಭೂಸಾರಿಗೆ ಸಚಿವರನ್ನು ಭೇಟಿ ಮಾಡಿ ಲಿಂಕ್ ರಸ್ತೆಯ ಅವಶ್ಯಕತೆಯನ್ನು ಮನದಟ್ಟು ಮಾಡಿದ್ದಾರೆ. ಆದರೆ, ಯಾವುದೇ ಪ್ರಗತಿ ಕಂಡುಬಂದಿಲ್ಲ. ಇನ್ನೊಂದೆಡೆ ಸದರಿ ಕಾಮಗಾರಿ ಭರದಿಂದ ಸಾಗಿದ್ದು, ಲಿಂಕ್ ರಸ್ತೆ ನೀಡುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

    ಕಾಮಗಾರಿಗೆ ತಡೆ: ಚನ್ನಪಟ್ಟಣ ತಾಲೂಕು ಮೂಲಭೂತ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಈ ಹೋರಾಟ ರೂಪಿಸಲು ನಿರ್ಧರಿಸಿದ್ದು, ಮೊದಲ ಹಂತವಾಗಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸುವುದು. ನಂತರ, ಹೆದ್ದಾರಿ ಅಧಿಕಾರಿಗಳು ಹಾಗೂ ಸಂಬಂಧಿಸಿದವರಿಗೆ ಮತ್ತೊಮ್ಮೆ ಮನವಿ ಸಲ್ಲಿಸುವುದು ಹಾಗೂ ದಿನಾಂಕ ನಿಗದಿಪಡಿಸಿ ಬೈಪಾಸ್ ರಸ್ತೆ ಕಾಮಗಾರಿಗೆ ಅಡ್ಡಿಪಡಿಸುವ ತೀರ್ಮಾನ ಕೈಗೊಳ್ಳಲಾಯಿತು. ರಸ್ತೆಗಾಗಿ ಪಕ್ಷಾತೀತ ಹೋರಾಟ ರೂಪಿಸುವ ತೀರ್ಮಾನ ಕೈಗೊಳ್ಳಲಾಯಿತು.

    ಹೆದ್ದಾರಿಗೆ ಲಿಂಕ್ ಕೊಡಿಸುತ್ತೇನೆ: ನನ್ನ ಕ್ಷೇತ್ರದ ಜನತೆಯ ಸಮಸ್ಯೆ ಏನೆಂದು ಗೊತ್ತು, ಅದಕ್ಕಾಗಿ ಬೀದಿಗಿಳಿಯುವ ಅಗತ್ಯವಿಲ್ಲ. ನಾನೇ ದೆಹಲಿಗೆ ತೆರಳಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ಹೆದ್ದಾರಿಗೆ ಉದ್ದೇಶಿತ ಜಾಗದಲ್ಲಿ ಎಂಟ್ರಿ ಮತ್ತು ಎಕ್ಸಿಟ್‌ಗೆ ಸಂಪರ್ಕ ಕೊಡಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

    ತಾಲೂಕಿನ ತಿಟ್ಟಮಾರನ ಹಳ್ಳಿ ಗ್ರಾಮದ ಬಳಿ ನಿರ್ಮಾಣ ಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದ ಅವರು, ಸ್ಥಳೀಯರ ಜತೆ ಮಾತನಾಡಿ, ಈ ಮುಖ್ಯ ರಸ್ತೆಗೆ ಲಿಂಕ್ ನೀಡಬೇಕು ಎಂಬುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಕೇಂದ್ರ ಸಚಿವರಿಗೆ ಪತ್ರವನ್ನು ಸಹ ಬರೆದಿದ್ದೇನೆ. ಆದರೆ ಈಗಾಗಲೇ ಯೋಜನೆ ರೂಪಿಸಲಾಗಿರುವ ಕಾರಣ ಇದು ಸಾಧ್ಯವಾಗುತ್ತಿಲ್ಲ. ಪುನರ್ಯೋಜನೆ ಮಾಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
    ಈ ರಸ್ತೆಯ ಕ್ರಿಯಾಯೋಜನೆಯನ್ನು ಪರಿಷ್ಕರಿಸಿ ಈ ಸ್ಥಳದಲ್ಲಿ ಲಿಂಕ್ ರಸ್ತೆ ನಿರ್ಮಿಸುವಂತೆ ಮಾಡುತ್ತೇನೆ ಎಂದು ತಿಳಿಸಿದರು.

    ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ಎಂ.ಸಿ.ಕರಿಯಪ್ಪ, ಕುಕ್ಕೂರುದೊಡ್ಡಿ ಜಯರಾಂ, ಬೋರ್‌ವೆಲ್ ರಾಮಚಂದ್ರು, ತಾಪಂ ಮಾಜಿ ಅಧ್ಯಕ್ಷ ಬಿ.ನಾಗೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts