More

    ಚಿತ್ರಾವತಿ ಪಾತ್ರದಲ್ಲಿ ಪ್ರವಾಹ ಭೀತಿ : ನೀರಿನಲ್ಲಿ ಕೊಚ್ಚಿಹೋಗಿವೆ ಬೆಳೆಗಳು, ಗ್ರಾಮಗಳು ಸಂಪರ್ಕ ಕಡಿತ

    ಬಾಗೇಪಲ್ಲಿ: ತಾಲೂಕಿನಲ್ಲಿ ಚಿತ್ರಾವತಿ ನದಿಯ ರುದ್ರನರ್ತನ ಮಾಡುತ್ತಿದ್ದು, ನದಿ ಪಾತ್ರದ ಮನೆ, ರಸ್ತೆ ಸೇರಿ ಕೃಷಿ ಜಮೀನುಗಳು ಚಿತ್ರಾವತಿಯ ತೆಕ್ಕೆಗೆ ಸೇರಿವೆ. ಬಾಗೇಪಲ್ಲಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಚಿಕ್ಕಬಳ್ಳಾಪುರ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.
    ವರುಣ ಆರ್ಭಟಕ್ಕೆ ವಿವಿಧೆಡೆ ಬೆಳೆಗಳು ನೆಲಕ್ಕಚ್ಚಿ ಅಪಾರ ನಷ್ಟ ಸಂಭವಿಸಿದ್ದು ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಕಳೆದ 25 ವರ್ಷಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬಹುತೇಕ ಕೆರೆ ಕುಂಟೆಗಳು ಮೈದಾನದಂತಾಗಿದ್ದವು, ಆದರೆ ಒಂದುವರೆ ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿದ್ದು ಸೇತುವೆಗಳ ಮೇಲೆ ಆಳೆತ್ತರ ನೀರು ಹರಿಯುತ್ತಿದೆ.

    ವಾಹನ ಸಂಚಾರಕ್ಕೆ ನಿರ್ಬಂಧ: ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್.ನಾಗರಾಜು ನೇತೃತ್ವದಲ್ಲಿ ಗುರುವಾರ ಬೆಳಗ್ಗೆಯಿಂದಲೆ ಕಾರ್ಯಾಚರಣೆಗೆ ಮುಂದಾದ ಪೊಲೀಸರು ಪಟ್ಟಣದ ಎಸ್‌ಬಿಎಂ ರಸ್ತೆ ಹಾಗೂ ಕೋರ್ಟ್ ಬಳಿಯ ಚಿತ್ರಾವತಿ ನದಿ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು.

    ಮಳೆಗೆ ಬೆಳೆ ನಾಷ: ತಾಲೂಕಿನ ಕೊತ್ತಕೋಟೆ ಗ್ರಾಪಂನ ವಾಡಪ್ಪಲ್ಲಿ, ಮುಮ್ಮಡಿವಾರಪಲ್ಲಿಗಳಲ್ಲಿ ಬೆಳೆದಿದ್ದ ಭತ್ತದ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮುಸಕಿನ ಜೋಳ, ನೆಲಗಡಲೆ ಜಡಿ ಮಳೆಗೆ ಕೊಳೆತು ನಾರುತ್ತಿವೆ, ಕೆಲವೆಡೆ ಪೈರಿನಲ್ಲಿ ಮೊಳಕೆಯೊಡೆದಿದೆ. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಲೂಗಡ್ಡೆ, ಟೊಮ್ಯಾಟೊ ಹಾಗೂ ಕ್ಯಾರೆಟ್ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಅಂಗವಾರಿ ಮತ್ತು ಬೆಂಕಿ ರೋಗಗಳಿಗೆ ತುತ್ತಾಗಿವೆ.

    ಸಂಪರ್ಕ ಕಡಿತ: ಗೂಳೂರು ಹೋಬಳಿಯ ಡಿ.ಕೊತ್ತಪಲ್ಲಿ ರಸ್ತೆ, ಮಿಟ್ಟೇಮರಿ ಹೋಬಳಿಯ ಪೋಲನಾಯಕನಹಳ್ಳಿ ಗ್ರಾಪಂಯ ಭತ್ತಲಹಳ್ಳಿ ರಸ್ತೆ, ಕಾನಗವಾಕಲಪಲ್ಲಿ ಗ್ರಾಪಂಯ ವರದಯ್ಯಗಾರಿಪಲ್ಲಿ-ಭೋಗೆಪಲ್ಲಿ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿದ್ದು ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

    ಮುನ್ನೆಚ್ಚರಿಕೆ ವಹಿಸಲು ಎಸ್‌ಪಿ ಸೂಚನೆ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಚಿತ್ರಾವತಿ ನದಿ ಪ್ರದೇಶಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುವಾರ್ ಶುಕ್ರವಾರ ಭೇಟಿ ನೀಡಿ ನೀರಿನ ಹರಿವು ಪರಿಶೀಲಿಸಿ, ಎಚ್ಚರಿಕೆ ವಹಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದರು.

    ಚಿತ್ರಾವತಿ ಅಣೆಕಟ್ಟು ನಿರ್ವಾಣಕ್ಕೂ ಹಿಂದೆ ಈ ರೀತಿಯ ಧಾರಕಾರ ಮಳೆಯಾಗಿತ್ತು. 25 ವರ್ಷಗಳಿಂದ ಇಂತಹ ಮಳೆ ನಾವು ನೋಡಿಲ್ಲ. ಉತ್ತಮ ಮಳೆಯಾಗಿರುವುದು ರೈತರಿಗೆ ವರದಾನವಾದರೆ, ಧಾರಕಾರ ಮಳೆಯಿಂದ ಹಲವು ಬೆಳೆ ನಾಶವಾಗಿರುವುದು ನುಂಗಲಾಗದ ತುತ್ತಾಗಿದೆ.
    ಜಿ.ಎಂ.ರಾಮಕೃಷ್ಣಪ್ಪ, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts