More

    ಭರ್ಜರಿ ಮಳೆ ಸುರಿಸಿದ ಪೂರ್ವ ಮುಂಗಾರು

    ಭರತ್ ಶೆಟ್ಟಿಗಾರ್, ಮಂಗಳೂರು

    ಕರಾವಳಿಯಲ್ಲಿ ಈ ಬಾರಿ ಬಿಸಿಲಿನ ಮಧ್ಯೆಯೂ ಉತ್ತಮ ಮಳೆಯಾಗಿದ್ದು, ಪೂರ್ವ ಮುಂಗಾರು ಭರ್ಜರಿ ಮಳೆಯನ್ನೇ ಸುರಿಸಿದೆ. ಘಟ್ಟದ ತಪ್ಪಲಿನ ಪ್ರದೇಶಗಳು ಸೇರಿ ಉಭಯ ಜಿಲ್ಲೆಗಳ ಎಲ್ಲ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಬಾರಿ ಪೂರ್ವ ಮುಂಗಾರಿನಲ್ಲಿ ಉಭಯ ಜಿಲ್ಲೆಗಳು ತೀವ್ರ ಮಳೆ ಕೊರತೆ ಅನುಭವಿಸಿತ್ತು.

    ಮಾ 1ರಿಂದ ಆರಂಭವಾಗುವ ಪೂರ್ವ ಮುಂಗಾರು ಅವಧಿಯಿಂದ ಮೇ 18ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 400.3 ಮಿ.ಮೀ. ಮಳೆ ಸುರಿದಿದೆ. ಸರಾಸರಿ ಮಳೆ 137.3 ಮಿ.ಮೀ. ಅಂದರೆ ಶೇ.192ರಷ್ಟು ಹೆಚ್ಚು ಮಳೆ ದಾಖಲಾಗಿದೆ. ಇದೇ ವೇಳೆ ಉಡುಪಿ ಜಿಲ್ಲೆಯಲ್ಲಿ ಸರಾಸರಿ 89.8 ಮಿ.ಮೀ ಮಳೆ ಸುರಿಯಬೇಕಾಗಿದ್ದು, 360.2 ಮಿ.ಮೀ ಮಳೆಯಾಗಿದೆ. ಇದು ಶೇ.301ರಷ್ಟು ಹೆಚ್ಚಳ. ಹಗಲು ವೇಳೆಯಲ್ಲಿ ಉರಿಬಿಸಿಲಿದ್ದರೂ, ಸಾಯಂಕಾಲ, ರಾತ್ರಿ ವೇಳೆ ಗುಡುಗು ಸಹಿತ ಮಳೆ ಸುರಿದಿದೆ. ಮುಖ್ಯವಾಗಿ ಘಟ್ಟದ ತಪ್ಪಲಿನ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆ ಸುರಿದ ಕಾರಣ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ಕೃಷಿಕರೂ ತೋಟಗಳಿಗೆ ನೀರು ಬಿಡುವ ಕೆಲಸದಿಂದ ಮುಕ್ತರಾಗಿದ್ದಾರೆ. ನಗರ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಯೂ ದೂರವಾಗಿದೆ.

    ಕಳೆದ ವರ್ಷ ಕೊರತೆ: ಕಳೆದ ವರ್ಷ ಉಭಯ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಕೊರತೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ ಅಂತ್ಯದವರೆಗೆ 225 ಮಿ.ಮೀ ಮಳೆಯಾಗಿದ್ದು, ಶೇ.7ರಷ್ಟು ಮಳೆ ಕೊರತೆಯಾಗಿತ್ತು. ಉಡುಪಿ ಜಿಲ್ಲೆಯಲ್ಲಿ 172 ಮಿ.ಮೀ. ಮಳೆಯಾಗಿದ್ದು, ಶೇ.15ರಷ್ಟು ಮಳೆ ಕಡಿಮೆಯಾಗಿತ್ತು. ಘಟ್ಟದ ತಪ್ಪಲು ಸೇರಿದಂತೆ ಇತರೆಡೆ ಮಳೆ ಸುರಿದಿರಲಿಲ್ಲ. ಈ ಬಾರಿ ಪೂರ್ವ ಮುಂಗಾರು ಮಳೆ ಅವಧಿ ಮುಗಿಯಲು ಇನ್ನೂ ಹಲವು ದಿನಗಳ ಬಾಕಿ ಇದ್ದು, ಚಂಡಮಾರುತ ಸಾಧ್ಯತೆಯೂ ಇರುವುದರಿಂದ ದಾಖಲೆ ಮಳೆ ನಿರೀಕ್ಷೆಯಿದೆ.

    ಕಾರ್ಕಳದಲ್ಲಿ ಗರಿಷ್ಠ ಪ್ರಮಾಣ: ತಾಲೂಕುವಾರು ಮಳೆ ವಿವರ ಗಮನಿಸಿದರೆ ಕಾರ್ಕಳ ತಾಲೂಕಿನಲ್ಲಿ ಅತ್ಯಧಿಕ 462 ಮಿ.ಮೀ. ಮಳೆ ಸುರಿದಿದ್ದು, ಕಡಬದಲ್ಲಿ 459 ಮಿ.ಮೀ., ಪುತ್ತೂರಿನಲ್ಲಿ 427 ಮತ್ತು ಬೆಳ್ತಂಗಡಿಯಲ್ಲಿ 422 ಮಿ.ಮೀ ಮಳೆಯಾಗಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಪ್ರತಿದಿನ ಎಂಬಂತೆ ಗುಡುಗು-ಮಿಂಚು ಸಹಿತ ಮಳೆ ಸುರಿದು, ಮುಂಗಾರಿನ ವಾತಾವರಣ ಕಂಡುಬರುತ್ತಿದೆ. ಬಂಗಾಳಕೊಲ್ಲಿಯಲ್ಲಿ ಇನ್ನೊಂದು ಚಂಡಮಾರುತ ಕಾಣಿಸಿಕೊಂಡಿರುವುದು, ಮಳೆಯ ಪ್ರಮಾಣವನ್ನು ಇನ್ನಷ್ಟು ಹೆಚ್ಚು ಮಾಡುವ ಸಾಧ್ಯತೆಯಿದೆ.

    ಮುಂಗಾರು ವಿಳಂಬ?: ಈ ಬಾರಿ ನಿಗದಿತ ಸಮಯಕ್ಕೆ ಅಂದರೆ ಜೂನ್ 1ಕ್ಕೆ ಮುಂಗಾರು ಕೇರಳ ಪ್ರವೇಶಿಸಿ, 3-4ಕ್ಕೆ ಕರಾವಳಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದರು. ಆದರೆ ಪ್ರಸ್ತುತ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಕಾರಣ ಮುಂಗಾರಿನ ಆರಂಭದ ಮೇಲೆ ಪರಿಣಾಮ ಬೀಳುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಕಾಣಿಕೊಂಡಿರುವ ಚಂಡಮಾರುತ ಕ್ಷೀಣಿಸಿದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

    ಮಳೆ-ಬಿಸಿಲಿನ ವಾತಾವರಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮಳೆ, ಬಿಸಿಲಿನ ವಾತಾವರಣವಿತ್ತು. ಬೆಳಗ್ಗೆ ಮಳೆಯಿದ್ದರೆ, ಮಧ್ಯಾಹ್ನ ವೇಳೆಗೆ ಬಿಸಿಲಿನ ವಾತಾವರಣ ಕಂಡು ಬಂತು. ಸಾಯಂಕಾಲ ಮತ್ತೆ ಕೆಲವೆಡೆ ಮಳೆಯಾಗಿದೆ. ಆಕಾಶದಲ್ಲಿ ದಟ್ಟ ಮೋಡಗಳ ಚಲನೆ ಮುಂದುವರಿದಿದೆ. ಸದ್ಯ ತೌಕ್ತೆ ಚಂಡಮಾರುತದಿಂದ ಉಂಟಾಗಿದ್ದ ಆತಂಕ ಸಂಪೂರ್ಣ ದೂರವಾಗಿದೆ. ಆದರೆ ಬಂಗಾಳಕೊಲ್ಲಿಯ ಯಾಸ್ ಚಂಡಮಾರುತ ಮತ್ತೆ ಮಳೆ ಸುರಿಸಲಿದೆ. ಶನಿವಾರ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿ ಎರಡು ದಿನದಲ್ಲಿ ಸೈಕ್ಲೋನ್ ಸೃಷ್ಟಿಯಾಗಲಿದೆ ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ. ಶುಕ್ರವಾರ ದಿನದ ಗರಿಷ್ಠ ತಾಪಮಾನ 29.8 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಡುಪಿಯಲ್ಲಿಯೂ ಸಾಮಾನ್ಯ ಮಳೆಯಾಗಿದೆ.

    ಕರಾವಳಿಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಚಂಡಮಾರುತ ಕಾರಣದಿಂದ ಮಳೆಯಬ್ಬರ ಮತ್ತಷ್ಟು ಹೆಚ್ಚಳವಾಗಿದೆ. ಇನ್ನೊಂದು ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ನಿರ್ಮಾಣ ಆಗಿರುವುದರಿಂದ, ಮುಂಗಾರು ಆರಂಭಕ್ಕೆ ಮುನ್ನ ಮತ್ತಷ್ಟು ಮಳೆ ನಿರೀಕ್ಷಿಸಬಹುದು.

    ಸುನೀಲ್ ಗಾವಸ್ಕರ್
    ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts