More

    ಸಂಕಷ್ಟ ತಂದ ಅಕಾಲಿಕ ಮಳೆ

    ಮಂಗಳೂರು/ಉಡುಪಿ: ಗುರುವಾರ ಮುಂಜಾನೆ ಸುರಿದ ಅಕಾಲಿಕ ಮಳೆ ಜಿಲ್ಲೆಯ ವಿವಿಧಡೆ ರೈತರನ್ನು ಸಂಕಷ್ಟಕ್ಕೀಡು ಮಾಡಿತು. ಹವಾಮಾನ ಇಲಾಖೆ ಮೊದಲೇ ಸೂಚನೆ ನೀಡಿದ್ದರೂ, ಮಳೆಯಾಗುವ ಕುರಿತು ನಿರೀಕ್ಷೆ ಹೊಂದಿರದ ರೈತರು, ಅಡಕೆ-ಕಾಳುಮೆಣಸು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಅಂಗಳದಲ್ಲಿ ಒಣಗಲು ಹಾಕಿದ್ದರು. ಹಠಾತ್ ಆಗಿ ಸುರಿದ ಮಳೆ ಎಲ್ಲವನ್ನು ನೀರುಪಾಲು ಮಾಡಿದೆ.
    ಜಿಲ್ಲೆಯ ವಿವಿಧಡೆ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಧಿಕ 36.5 ಮಿ.ಮೀ. ಸುರಿದಿದೆ. ಕಡಬ ತಾಲೂಕಿನ ರಾಮಕುಂಜ, ಕೊಲ, ಹಳೆನೇರಿಂಕಿ, ಆಲಂಕಾರು ಪರಿಸರದಲ್ಲಿ ಗುರುವಾರ ಮುಂಜಾನೆ 1 ಗಂಟೆ ಧಾರಾಕಾರ ಮಳೆ ಸುರಿದಿದೆ. 5.15ರ ಹೊತ್ತಿಗೆ ದಿಢೀರ್ ಆರಂಭವಾದ ಮಳೆ 6.10ರ ತನಕ ನಿರಂತರ ಸುರಿದು, ಬಳಿಕ ಕಡಿಮೆಯಾಗಿದೆ.

    ವಿಟ್ಲದ ಪುಣಚ, ಕೇಪು, ಅಡ್ಯನಡ್ಕ, ಪೆರುವಾಯಿ ಭಾಗದಲ್ಲಿ ಅರ್ಧ ಗಂಟೆ ಎಡೆಬಿಡದೆ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಯ ಪರಿಣಾಮ 50ಕ್ಕೂ ಅಧಿಕ ದಿನ ಬಿಸಿಲಲ್ಲಿ ಒಣಗುತ್ತಿದ್ದ ಅಡಕೆ ಒದ್ದೆಯಾಗಿದೆ. ಶೇ.90ರಷ್ಟು ರೈತರು ಸಮಸ್ಯೆಗೆ ಒಳಗಾಗಿದ್ದಾರೆ. ಕೆಲವು ಭಾಗದಲ್ಲಿ ಕಾಳುಮೆಣಸು ಒಣಗಲು ಹಾಕಿದ್ದು, ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದೆ. ಫೆ.27ರಂದು ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ವರದಿ ತಿಳಿಸಿತ್ತು. ಮೊಬೈಲ್ ಮೂಲಕ ಇದನ್ನು ಗಮನಿಸಿದ್ದ ಕೆಲವು ರೈತರು ಅಡಕೆ ಮತ್ತು ಕಾಳುಮೆಣಸನ್ನು ಸೂಕ್ತ ರೀತಿಯಲ್ಲಿ ಶೇಖರಣೆ ಮಾಡಿ ಒದ್ದೆಯಾಗುವುದರಿಂದ ತಪ್ಪಿಸಿಕೊಂಡಿದ್ದಾರೆ.

    ಇನ್ನೆರಡು ದಿನ ಮಳೆ ಸಾಧ್ಯತೆ
    ಮಂಗಳೂರು ಸೇರಿದಂತೆ ಜಿಲ್ಲೆಯ ಇತರ ಭಾಗಗಳಲ್ಲಿ ಮಳೆಯಾಗದಿದ್ದರೂ, ಮುಂಜಾನೆಯಿಂದ ಮೋಡ ಕವಿದಿತ್ತು. ಮಧ್ಯಾಹ್ನ ವೇಳೆಗೆ ಮೋಡ ಕವಿದ ಬಿಸಿಲಿನ ವಾತಾವರಣ ಕಂಡು ಬಂತು. ಇನ್ನೆರಡು ದಿನ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು, ಇದು ದಕ್ಷಿಣ ಕರ್ನಾಟಕ ಭಾಗದತ್ತ ಬೀಸುತ್ತಿದೆ. ಆದ್ದರಿಂದ ದ.ಕ. ಕೊಡಗು, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್ ಗಾವಸ್ಕರ್ ತಿಳಿಸಿದ್ದಾರೆ. ಮುಂಜಾನೆ ಸುರಿದ ಮಳೆ ಹಿನ್ನೆಲೆಯಲ್ಲಿ ತಾಪಮಾನದಲ್ಲಿ ಸ್ವಲ್ವ ಇಳಿಕೆಯಾಗಿದ್ದು, ದಿನದ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
    ಉಡುಪಿ ಜಿಲ್ಲೆಯ ಸಿದ್ಧಾಪುರ ಕೆಳಸುಂಕ ಪರಿಸರದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಬೆಳ್ಮಣ್, ಪಡುಬಿದ್ರಿ, ಹೆಬ್ರಿ, ಕಾರ್ಕಳ, ಬ್ರಹ್ಮಾವರ, ಕೋಟ, ಕುಂದಾಪುರ, ಉಡುಪಿ ಭಾಗದಲ್ಲಿ ಮೋಡ ಕವಿದ ವಾತವರಣವಿತ್ತು.

    ಮಳೆ ಅವಾಂತರ, ಓಮ್ನಿ ಕಾರು ಪಲ್ಟಿ
    ಕಡಬ: ಕಡಬ ತಾಲೂಕಿನ ಕೊಲದಲ್ಲಿ ಗುರುವಾರ ಮುಂಜಾನೆ ಓಮ್ನಿ ಕಾರು ಪಲ್ಟಿ ಆಗಿ ಕಾರಿನಲ್ಲಿದ್ದವರು ಅದೃಷ್ಟವಶಾತ್ ಸಣ್ಣಪುಟ್ಟ ತರಚಿದ ಗಾಯಗೊಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬಂಟ್ವಾಳ ಸಿದ್ದಕಟ್ಟೆಯ ವಾಮದಪದವು ನಿವಾಸಿಗಳ ಕುಟುಂಟ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ ಕೊಲ ಹಾಲು ಉತ್ಪಾದಕರ ಸಂಘದ ಎದುರಿನಲ್ಲಿ ಈ ಅವಘಡ ಸಂಭವಿಸಿದೆ. ಮುಂಜಾನೆ ಮಳೆ ಸುರಿಯುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಮೊದಲ ಮಳೆಗೆ ರಸ್ತೆಯಲ್ಲಿದ್ದ ತೈಲ ಅಂಶಗಳಿಂದಾಗಿ ರಸ್ತೆ ಜಾರುತ್ತಿತ್ತು. ಕಾರು ಚಾಲಕ ಮುಂದೆ ತಿರುವು ಇದ್ದ ಕಾರಣ ಕಾರನ್ನು ನಿಧಾನ ತರುವ ಯತ್ನದಲ್ಲಿ ಬ್ರೇಕ್ ಹಾಕುತ್ತಿದ್ದಂತೆ ಕಾರು ಪಲ್ಟಿ ಆಗಿ ರಸ್ತೆ ಮಗುಚಿ ಬಿದ್ದಿದ್ದು, ಕಾರು ಜಖಂಗೊಂಡಿದೆ. ಕಾರು ಪಲ್ಟಿ ಆಗಿ ಅದರಲ್ಲಿದ್ದ ಜನರ ಬೊಬ್ಬೆ ಕೇಳುತ್ತಿದ್ದಂತೆ ಬೆಳಗ್ಗೆ ಮಸೀದಿಗೆ ಹೋಗುತ್ತಿದ್ದ ಯುವಕರ ತಂಡವೊಂದು ಕಾರಿನ ಅಡಿಯಲ್ಲಿ ಇದ್ದವರನ್ನು ಎಬ್ಬಿಸಿ ಉಪಚರಿಸಿದರು. ಕಾರು ಜಖಂಗೊಂಡಿದ್ದರಿಂದ ಮತ್ತೆ ಸುಬ್ರಹ್ಮಣ್ಯ ಯಾನ ಮುಂದುವರಿಸಲು ಅವರ ಊರಿನಿಂದ ಬೇರೆ ಕಾರು ಬರುವ ತನಕ ಕಾದು ಕುಳಿತ್ತಿದ್ದ ಅವರಿಗೆ ಬೆಳಗ್ಗಿನ ಚಹಾ ನೀಡಿ ಸಂತೈಸಿದರು.

    ದಿಢೀರ್ ಮಳೆಗೆ ಕೆಸರುಮಯವಾದ ರಸ್ತೆ
    ಕಾಸರಗೋಡು: ಜಿಲ್ಲೆಯ ವಿವಿಧೆಡೆ ಗುರುವಾರ ಬೆಳಗ್ಗೆ ಸಾಮಾನ್ಯ ಮಳೆಯಾಗಿದ್ದು, ಇಳೆಗೆ ತಂಪೆರೆದಿದೆ. ಮುಂಜಾನೆ ಏಕಾಏಕಿ ಸುರಿದ ಮಳೆಗೆ ಬಹುತೇಕ ಕೃಷಿಕರ ಒಣಗಿದ್ದ ಅಡಕೆ ಸಂಪೂರ್ಣ ಒದ್ದೆಯಾಗಿದೆ.
    ಕೆಲವರು ರಾಶಿಹಾಕಿ ಟಾರ್ಪಾಲ್ ಹೊದಿಸಿದ್ದರೆ, ಇನ್ನು ಸಣ್ಣ ಪ್ರಮಾಣದಲ್ಲಿದ್ದ ಅಡಕೆಯನ್ನು ಸಂಗ್ರಹಿಸಿ ಒಳಹಾಕುವಲ್ಲಿ ಯಶಸ್ವಿಯಾಗಿದ್ದರು. ಕಾಸರಗೋಡು ಅಡ್ಕತ್ತಬೈಲ್, ವಿದ್ಯಾನಗರ, ಮಂಜೇಶ್ವರ, ಉಪ್ಪಳ, ಸೋಂಕಾಲ್, ಪೆರ್ಲ, ಬದಿಯಡ್ಕ, ಉಪ್ಪಳ, ಬೆಳ್ಳೂರು ಸಹಿತ ವಿವಿಧೆಡೆ ಸಾಮಾನ್ಯ ಮಳೆಯಾಗಿದೆ. ಮೆಕ್ಕಡಾಂ ಡಾಂಬರು ರಸ್ತೆ ಕಾಮಗಾರಿ ನಡೆಯುವ ಚೆರ್ಕಳ- ಕಲ್ಲಡ್ಕ ರಸ್ತೆಯ ಪೆರ್ಲ ಭಾಗದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗಿತ್ತು. ಬೆಳ್ಳೂರು ಆಸುಪಾಸಿನ ನಿರ್ಮಾಣ ಹಂತದ ರಸ್ತೆಯಲ್ಲಿ ಕೆಸರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಪರದಾಡಬೇಕಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts