More

    ರಾಜ್ಯದಲ್ಲಿ ಹೆಚ್ಚಾದ ಬಿಸಿಲು ಧಗೆ; ಎದುರಾಗಿದೆ ಹೀಟ್‌ವೇವ್ ಆತಂಕ

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಧಗೆ ಏರುತ್ತಿದೆ. ಮಳೆ ಮನ್ಸೂಚನೆ ಇಲ್ಲದಿರುವುದು ಹಾಗೂ ವಾತಾವರಣದಲ್ಲಿ ತೇವಾಂಶ ಕಡಿಮೆ ಹಿನ್ನೆಲೆಯಲ್ಲಿ ಬಿಸಿಲಿನ ಝಳದ ಜತೆಗೆ ಸೆಖೆಯ ಅನುಭವವಾಗುತ್ತಿದೆ.

    ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸದ್ಯ 35-37ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾದರೆ, ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ 30-34 ಡಿಗ್ರಿ ಸೆಲ್ಸಿಯಸ್ ಹಾಗೂ ಗೋಕಾರ್ಣದಲ್ಲಿ 37.6 ಉಷ್ಣಾಂಶ ದಾಖಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಗಿಂತ ಕಾರವಾರ, ಗೋಕಾರ್ಣ ಮತ್ತು ಮಂಗಳೂರಿನಲ್ಲಿ ಹೆಚ್ಚು ತಾಪಮಾನ ಇದೆ.

    ಇದನ್ನೂ ಓದಿ: ತೇವಾಂಶ ಮಿತಿ ಹೆಚ್ಚಿಸಿ ಹೆಸರು ಖರೀದಿಸಿ

    ಪ್ರಸ್ತುತ ತಿಂಗಳಿಂದ ಮೇನೊಳಗೆ ಹೀಟ್‌ವೇವ್ (ಶಾಖದ ಅಲೆ) ಆತಂಕ ಶುರುವಾಗಲಿದೆ. ಗರಿಷ್ಠ ತಾಪಮಾನದಲ್ಲಿ ವಾಡಿಕೆಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿರುವುದು ಹಾಗೂ ವಾತಾವರಣದಲ್ಲಿ ತೇವಾಂಶ ಇಲ್ಲದಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಧಾನವಾಗಿ ಉಷ್ಣಾಂಶ ಏರಿಕೆಯಾಗುತ್ತಿದೆ. ತಾಪಮಾನ ಹೆಚ್ಚಾದಂತೆ ಜನರಿಗೆ ಊತ, ತಲೆನೋವು, ವಾಕರಿಕೆ, ನಿರ್ಜಲೀಕರಣ, ಸುಸ್ತು, ವಾಂತಿ ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆಗಳು ಕಾಡಲಿವೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ವಿದ್ಯುತ್​ಗೆ ಅಧಿಕ ಬೇಡಿಕೆ

    ದಕ್ಷಿಣ ಕರ್ನಾಟಕದ ಜಿಲ್ಲೆಗಳಕ್ಕಿಂತ ಪ್ರತಿ ವರ್ಷವೂ ಉತ್ತರ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಧಾರವಾಡ, ಕೊಪ್ಪಳ, ಗದಗ, ಬಳ್ಳಾರಿ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 40 ಡಿಗ್ರಿಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಆದ್ದರಿಂದ, ಶಾಖ ತರಂಗ ಉಂಟಾಗುವ ಸಾಧ್ಯತೆ ಇದೆ.

    ಪ್ರತಿ ವರ್ಷ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಿರು ಬಿಸಿಲಿಗೆ ಅನೇಕ ಸಾವುಗಳು ಸಂಭವಿಸಿತ್ತು. ಹಲವು ವರ್ಷಗಳಿಂದಲೂ ಉತ್ತರ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹೆಚ್ಚು ತಾಪಮಾನ ಉಂಟಾಗುತ್ತಿದೆ.

    ಕರ್ನಾಟಕ ಹೆಚ್ಚಿನ ಭಾಗಗಳು ಶುಷ್ಕ ಮತ್ತು ಅರೆ ಶುಷ್ಕ ಸ್ಥಿತಿಯಲ್ಲಿ ಇರುವ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಬಿಸಿಲು ದಾಖಲಾಗುತ್ತಿದೆ. ಹಾಗಾಗಿ, ಇಲ್ಲಿನ ಬಿಸಿಲು ಬಗ್ಗೆ ಎಚ್ಚರಿಕೆ ಇರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts