More

    ಏರು ಹಾದಿಯಲ್ಲಿ ತಾಪಮಾನ: 35 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ

    ಭರತ್ ಶೆಟ್ಟಿಗಾರ್, ಮಂಗಳೂರು
    ಕರಾವಳಿಯಲ್ಲಿ ಮುಂಗಾರು ಕ್ಷೀಣವಾಗುತ್ತಿರುವ ಹೊತ್ತಿನಲ್ಲೇ, ಬಿಸಿಲ ಝಳ ಹೆಚ್ಚಾಗುತ್ತಿದೆ. ಒಂದೆಡೆ ಸಾಯಂಕಾಲದ ಹೊತ್ತಿಗೆ ಅಬ್ಬರದ ಮಳೆ ಸುರಿಯುತ್ತಿದ್ದರೂ, ಹಗಲು ತಾಪಮಾನ ವಿಪರೀತ ಏರಿಕೆಯಾಗುತ್ತಿದ್ದು, ಬೇಸಿಗೆ ತಿಂಗಳೇನೋ ಎನ್ನುವಂತೆ ಭಾಸವಾಗುತ್ತಿದೆ.

    ಮಳೆ ಕಡಿಮೆಯಾಗುತ್ತಿದ್ದಂತೆ ದಿನದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಅ.2ರಂದು ಮಂಗಳೂರಿನಲ್ಲಿ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇತ್ತೀಚಿನ ದಿನಗಳಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನವಿದು. ರಾತ್ರಿ ಕೆಲವೆಡೆ ಮಳೆಯಾಗುವುದರಿಂದ ಹಗಲು ಸೆಕೆ ಹೆಚ್ಚಿದ್ದರೂ ರಾತ್ರಿ ವೇಳೆ ಕನಿಷ್ಠ 23-22 ಡಿಗ್ರಿಗೆ ಇಳಿಯುತ್ತಿದೆ. ಇದರಿಂದ ರಾತ್ರಿ ವೇಳೆ ಸ್ವಲ್ಪ ತಣ್ಣನೆಯ ಅನುಭವವಾಗುತ್ತಿದೆ. ಬೆಳಗ್ಗೆ ಬಿಸಿಲೇರುತ್ತಿದ್ದಂತೆ ಸೆಖೆ ಹೆಚ್ಚಾಗುತ್ತಿದ್ದು, ಹೊರಗಡೆ ಒಂದು ಸುತ್ತು ಹಾಕಿ ಬಂದರೆ ಬಳಲಿ ಬೆಂಡಾಗುವ ಸ್ಥಿತಿಯಿದೆ

    ದೇಶದಲ್ಲೇ ಗರಿಷ್ಠ ತಾಪಮಾನ: ಕಳೆದ ವರ್ಷ ಅಕ್ಟೋಬರ್-ನವೆಂಬರ್ ತಿಂಗಳ ಕೆಲ ದಿನಗಳಲ್ಲಿ ದೇಶದಲ್ಲೇ ಗರಿಷ್ಠ ತಾಪಮಾನ ಮಂಗಳೂರಿನಲ್ಲಿ ದಾಖಲಾಗಿತ್ತು. ಹಲವು ಬಾರಿ 35 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ನವೆಂಬರ್ ತಿಂಗಳಲ್ಲಿ ಗರಿಷ್ಠ 36.4 ಡಿಗ್ರಿ ಸೆಲ್ಸಿಯಸ್ ವರೆಗೂ ತಲುಪಿತ್ತು. ಈ ಬಾರಿಯೂ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌ವರೆಗೆ ಸದ್ಯದಲ್ಲೇ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಡುತ್ತಾರೆ.

    ನೀರಿನ ಸಮಸ್ಯೆ ಕಾಡಬಹುದೇ?: ಕಳೆದ ಕೆಲವು ವರ್ಷಗಳಲ್ಲಿ ಮುಂಗಾರು ಮಳೆ ಉತ್ತಮವಾಗಿತ್ತು. ಆದರೆ ಈ ಬಾರಿ ಸರಾಸರಿ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಆತಂಕವೂ ಎದುರಾಗಿದೆ. ಆದರೆ ಘಟ್ಟದ ತಪ್ಪಲು ಭಾಗ ದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಸದ್ಯ ಯಥೇಚ್ಛವಾಗಿದೆ. ಜತೆಗೆ ಹಿಂಗಾರು ಮಳೆಯೂ ಉತ್ತಮವಾಗಿ ಸುರಿದರೆ ನೀರಿಗೆ ಸಮಸ್ಯೆಯಾಗದು ಎನ್ನುವ ನಿರೀಕ್ಷೆಯೂ ಇದೆ. ಕಳೆದ ವರ್ಷ ಹಿಂಗಾರು ಉತ್ತಮವಾಗಿತ್ತು. ಜತೆಗೆ ಜನವರಿಂದಲೇ ಬೇಸಿಗೆ ಮಳೆ ನಿರಂತರವಾಗಿ ಸುರಿದು, ನದಿ ಹರಿವು ಇದ್ದುದರಿಂದ ನೀರಿನ ಅಭಾವ ಕಾಡಿಲ್ಲ.

    4 ವರ್ಷಗಳಲ್ಲಿ ಅಕ್ಟೋಬರ್ ತಿಂಗಳ ಗರಿಷ್ಠ ತಾಪಮಾನ
    2020-33.5 ಡಿಗ್ರಿ ಸೆಲ್ಸಿಯಸ್
    2019-34.3 ಡಿಗ್ರಿ ಸೆಲ್ಸಿಯಸ್
    2018-36.1 ಡಿಗ್ರಿ ಸೆಲ್ಸಿಯಸ್
    2017-34 ಡಿಗ್ರಿ ಸೆಲ್ಸಿಯಸ್

    ಮುಂಗಾರು ಮಾರುತ ದುರ್ಬಲವಾಗುತ್ತಿದೆ. ಕೆಲವೇ ದಿನಗಳಲ್ಲಿ ಹಿಂಗಾರಿನ ಆಗಮನವಾಗಲಿದೆ. ಸಾಯಂಕಾಲ, ರಾತ್ರಿ ಗುಡುಗು ಸಹಿತ ಮಳೆಯಾದರೂ, ಹಗಲು ವೇಳೆಯಲ್ಲಿ ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ.
    ಸುನೀಲ್ ಗವಾಸ್ಕರ್ ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts