More

    ಮೂರು ವರ್ಷದೊಳಗೆ ಎತ್ತಿನಹೊಳೆ ಪೂರ್ಣ : ಸಚಿವ ಡಾ.ಸುಧಾಕರ್ ಭರವಸೆ

    ಕೋಲಾರ: ಎತ್ತಿನಹೊಳೆ ಯೋಜನೆ ಕಾಮಗಾರಿ ಶೀಘ್ರ ಮುಗಿಸಲು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು ಒಟ್ಟಾಗಿ ಸಿಎಂ ಮೇಲೆ ಒತ್ತಡ ತರುವ ಜತೆಗೆ ಸಾಲ ಮಾಡಿ, ಇಲ್ಲವೇ ನೀರಾವರಿ ಬಾಂಡ್ ಮಾರಿಯಾದರೂ ಯೋಜನೆಯನ್ನು ಮೂರು ವರ್ಷದೊಳಗೆ ಮುಗಿಸುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದರು.

    ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎತ್ತಿನಹೊಳೆ ಯೋಜನೆಗೆ ಕಾರ್ಯಾದೇಶ ನೀಡಿದ್ದು ಅಂದಿನ ಸಿಎಂ ಡಿ.ವಿ.ಸದಾನಂದಗೌಡ. ಯೋಜನೆ ಅವರ ಕನಸಿನ ಕೂಸು ಎಂದರು. ಎತ್ತಿನಹೊಳೆ ಯೋಜನೆ ಅನುಷ್ಠಾನಗೊಂಡಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರ ಬದುಕು ಹಸನಾಗಲಿದೆ. ಜಿಲ್ಲೆಯ ಕೆಲ ರಾಜಕಾರಣಿಗಳು ಬಾಯಿ ಚಪಲಕ್ಕೆ ಯೋಜನೆಯ ಕ್ರೆಡಿಟ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಛೇಡಿಸಿದರು.

    ಕರೊನಾ ತಡೆ ಕ್ರಮ: ಪ್ರಧಾನಿ ನರೇಂದ್ರ ಮೋದಿ, ಸಿಎಂ.ಯಡಿಯೂರಪ್ಪ ನೇತೃತ್ವದಲ್ಲಿ ಕರೊನಾ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದೇವೆ. ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತ. ಆದರೂ ಇತರ ರಾಷ್ಟ್ರಗಳಿಗಿಂತ ಇಲ್ಲಿ ಸೋಂಕು ಕಡಿಮೆ. ರಾಜ್ಯದಲ್ಲಿ ಸಾವಿನ ಪ್ರಮಾಣವೂ ಶೇ.1ಕ್ಕೆ ಇಳಿಯುತ್ತಿದೆ. ಲಸಿಕೆ ಸಂಶೋಧನೆ, ಪ್ರಯೋಗ ನಡೆಯುತ್ತಿದ್ದು, ಎಲ್ಲ ಟ್ರಯಲ್ಸ್ ಯಶಸ್ವಿಯಾದ ನಂತರವಷ್ಟೇ ಲಸಿಕೆ ಮಾರುಕಟ್ಟೆಗೆ ಬರಲಿದೆ ಎಂದರು.

    ಕರೊನಾ ಸಂಕಷ್ಟದ ನಡುವೆಯೂ ಹಲವು ರಾಜ್ಯಗಳು ನೌಕರರ ಸಂಬಳ ಕಡಿತ ಮಾಡಿದವು. ಆದರೆ ಯಡಿಯೂರಪ್ಪ ಸರ್ಕಾರ ಆ ಕೆಲಸ ಮಾಡಲಿಲ್ಲ, ನೌಕರರ ಪರವಾಗಿತ್ತು. ಆರ್ಥಿಕ ಸಂಕಷ್ಟದಲ್ಲೂ ನೌಕರರ ಕೈಬಿಡಲಿಲ್ಲ, ಸಂಕಷ್ಟಕ್ಕೆ ಕೆಲಸ ಮಾಡಿದ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ 125 ಕೋಟಿ ರೂ. ವಿಶೇಷ ಭತ್ಯೆ ನೀಡಿದ್ದೇವೆ ಎಂದು ಆಡಳಿತವನ್ನು ಸಮರ್ಥಿಸಿಕೊಂಡರು.

    ಪ್ರಧಾನಿ ನರೇಂದ್ರ ಮೋದಿ ಪ್ರತಿ ವಿದ್ಯಾರ್ಥಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ. ಶಿಕ್ಷಣ ಕ್ಷೇತ್ರದ ಕ್ರಾಂತಿಗೆ ಹಾಗೂ ಯುವ ಸಮುದಾಯದ ಭವಿಷ್ಯಕ್ಕೆ ಸಂಬಂಧಿಸಿದಂತೆ ಹೊಸ ಶಿಕ್ಷಣ ನೀತಿಗೆ ಕೈ ಜೋಡಿಸಬೇಕು ಎಂದರು. ಬಿಜೆಪಿ ಕೋರ್ ಕಮಿಟಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

    ಕೈಗಾರಿಕೆ ಹೂಡಿಕೆಯಲ್ಲಿ ರಾಜ್ಯ ದೇಶದಲ್ಲೇ ನಂ.1 ಆಗಿದೆ. ಆತ್ಮನಿರ್ಭರ ಭಾರತದ ಮೋದಿ ಕನಸು ನನಸಾಗಲು ಯತ್ನ ಸಾಗಿದೆ. ಮಾಲೂರಿನಲ್ಲಿ ಆ್ಯಪಲ್ ಕಂಪನಿ ಬರುತ್ತಿದ್ದು, 10 ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ.
    ಡಾ.ಸುಧಾಕರ್, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts