More

    ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ; ಈ ಕಾಲದಲ್ಲಿ ಸೇವಿಸಬಹುದಾದ ಪಾನೀಯಗಳು

    ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ; ಈ ಕಾಲದಲ್ಲಿ ಸೇವಿಸಬಹುದಾದ ಪಾನೀಯಗಳುಈ ಕಾಲವನ್ನು ಆಯುರ್ವೆದದಲ್ಲಿ ಆದಾನ ಕಾಲ ಎನ್ನುತ್ತಾರೆ. ಅಂದರೆ ಸೂರ್ಯ ನಮ್ಮ ಶಕ್ತಿಯನ್ನು ಹೀರಿಕೊಳ್ಳುವ ಕಾಲ ಎಂದರ್ಥ. ಬಹಳಷ್ಟು ಜನರು ಬೇಸಿಗೆಯಲ್ಲಿ ಸುಸ್ತು, ದೌರ್ಬಲ್ಯಗಳನ್ನು ಅನುಭವಿಸುತ್ತಾರೆ. ಆದರೆ ಕಾಲಕ್ಕೆ ತಕ್ಕಂತೆ ಆಹಾರ, ದಿನಚರಿಗಳನ್ನು ಇಟ್ಟುಕೊಂಡರೆ ತೊಂದರೆಗಳನ್ನು ಎದುರಿಸಲೇಬೇಕಿಲ್ಲ. ಹಾಗಾದರೆ ಬೇಸಿಗೆಯಲ್ಲಿ ಪಾಲಿಸಬೇಕಾದ ನಿಯಮಗಳೇನು, ಬೇಗೆಯನ್ನು ನಿವಾರಿಸಬಲ್ಲ ಪಾನಿಯಗಳಾವವು?

    ಮಣ್ಣಿನ ಮಡಕೆಯಲ್ಲಿ ಇರಿಸಿದ, ಪ್ರಾಕೃತಿಕವಾಗಿ ತಂಪಾದ ನೀರನ್ನು ಬೇಸಿಗೆಯಲ್ಲಿ ಸೇವಿಸಬೇಕೆಂದು ಆಯುರ್ವೆದ ಹೇಳುತ್ತದೆ. ರೆಫ್ರಿಜರೇಟರ್​ನಲ್ಲಿ ಇರಿಸಿದ ನೀರಿಗಿಂತ ಇದು ಉತ್ತಮ. ತೆಳುವಾದ ಹತ್ತಿ ಬಟ್ಟೆ ಧರಿಸುವುದು, ಶುದ್ಧ ಶ್ರೀಗಂಧವನ್ನು ದೇಹದ ಮೇಲೆ ಹಚ್ಚಿಕೊಳ್ಳುವುದು ಮುಂತಾದ ಕ್ರಿಯೆಗಳ ಮೂಲಕ ದೇಹವನ್ನು ತಂಪಾಗಿರಿಸಿಕೊಳ್ಳಲು ಆಯುರ್ವೆದ ಸಲಹೆ ನೀಡುತ್ತದೆ. ಬೊಜ್ಜು, ಕಫದ ಸಮಸ್ಯೆ ಇರುವವರು ಹಾಗೂ ಎಸಿಯಲ್ಲಿ ಕೆಲಸ ಮಾಡುವವರ ಹೊರತಾಗಿ ಕೃಶರು, ದೈಹಿಕ ಶ್ರಮದ ಕೆಲಸ ಮಾಡುವವರು ಮತ್ತು ಹಿರಿಯರು ಈ ಕಾಲದಲ್ಲಿ ಹಗಲುನಿದ್ದೆ ಮಾಡಬಹುದು. ಅತಿಯಾಗಿ ದೈಹಿಕ ವ್ಯಾಯಾಮ, ತುಂಬಾ ಹೊತ್ತು ಬಿಸಿಲಿಗೆ ಮೈಯೊಡ್ಡುವುದು, ಉಷ್ಣ ಗುಣವಿರುವ ಪದಾರ್ಥ, ಉಪ್ಪು-ಹುಳಿ-ಖಾರವನ್ನು ಹೆಚ್ಚಾಗಿ ಸೇವಿಸ ಬಾರದು.

    ಈ ಕಾಲದಲ್ಲಿ ಸೇವಿಸಬಹುದಾದ ಪಾನೀಯಗಳು ಮತ್ತು ಅವುಗಳ ವಿಶೇಷತೆಗಳು

    1. ಸುಖ ನಿದ್ರೆಗೆ ಒಂದೆಲಗದ ಜ್ಯೂಸ್: ಬೇಸಿಗೆಯಲ್ಲಿ ನಿದ್ದೆ ಸರಿಯಾಗಿ ಬರದಿರುವುದು ಮತ್ತು ಆ ಕಾರಣದಿಂದ ತೊಂದರೆಗಳಾಗುವುದು ಹಲವರ ಸಮಸ್ಯೆ. ಇದಕ್ಕೆ ಒಂದೆಲಗದ ಜ್ಯೂಸ್ ಪರಿಹಾರವಾಗಬಲ್ಲುದು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇದನ್ನು ಸೇವಿಸಬಹುದು. ಇದರಿಂದ ದೇಹ ತಂಪಾಗುವುದರ ಜೊತೆಗೆ ಮಿದುಳಿಗೆ ಶಕ್ತಿ ದೊರೆತು ನಿದ್ದೆ ಚೆನ್ನಾಗಿ ಬರುತ್ತದೆ; ಜತೆಗೆ ಇದು ಒಳ್ಳೆಯ ಟಾನಿಕ್ ಥರ ಕೆಲಸ ಮಾಡುತ್ತದೆ. ಮನೆಯಲ್ಲಿ ನಾಲ್ಕು ಜನರಿದ್ದರೆ ಒಂದು ಮುಷ್ಟಿಯಷ್ಟು ಒಂದೆಲಗವನ್ನು ತಂದು ಸ್ವಲ್ಪ ನೀರು ಹಾಕಿ ರುಬ್ಬಿ ರಸ ತೆಗೆದು ಅದಕ್ಕೆ ಹಾಲು ಮತ್ತು ಸಾವಯವ ಬೆಲ್ಲವನ್ನು ಹಾಕಿ ಸೇವಿಸಬಹುದು. ಇದಕ್ಕೆ ಕಫ ಹೆಚ್ಚಿಸುವ ಗುಣವಿರುವ ಕಾರಣ ಬೆಳಿಗ್ಗೆಯ ಸಮಯದಲ್ಲಿ ಸೇವಿಸುವುದು ಒಳಿತು. ತಾಜಾ ಒಂದೆಲಗದ ಲಭ್ಯತೆ ಇಲ್ಲದವರು ಗ್ರಂಧಿಗೆ ಅಂಗಡಿಗಳಿಂದ ಬ್ರಾಹ್ಮಿ ಚೂರ್ಣವನ್ನು ತಂದು ಬಳಸಬಹುದು.

    2. ಉಷ್ಣತೆ ತಗ್ಗಿಸುವ ಗರಿಕೆ ರಸ: ದೇಹ ಉಷ್ಣವಾಗಿಯೇ ಇರುತ್ತದೆ ಎಂಬುದು ಹಲವರ ದೂರು. ಇದಕ್ಕೆ ಗರಿಕೆ ಮದ್ದಾಗುತ್ತದೆ. ಗರಿಕೆಯನ್ನು ಒಂದು ಮುಷ್ಟಿಯಷ್ಟು ತಂದು ಹೆಚ್ಚಿ ನೀರಿನ ಜೊತೆ ರುಬ್ಬಿ ಸೋಸಿ ಅದಕ್ಕೆ ಒಂದು ಚಮಚದಷ್ಟು ತೇಯ್ದ ಶ್ರೀಗಂಧವನ್ನು ಹಾಕಿ, ಬೇಕೆನಿಸಿದರೆ ರುಚಿಗೆ ಜೋನಿಬೆಲ್ಲ ಸೇರಿಸಿ ಕುಡಿದರೆ ಕಣ್ಣುರಿ, ತಲೆ ಬಿಸಿ, ಪಾದದ ಉರಿ, ಹೊಟ್ಟೆ ಉರಿ, ಮಾನಸಿಕ ಕಿರಿಕಿರಿಗಳು ಕಡಿಮೆಯಾಗುತ್ತವೆ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನ 12 ರ ಒಳಗೆ ಸೇವಿಸುವುದು ಉತ್ತಮ. ಆಹಾರ ಸೇವಿಸಿದ ಕೂಡಲೇ ಅಥವಾ ಸಂಜೆಯ ಸಮಯದಲ್ಲಿ ಇದರ ಸೇವನೆ ಬೇಡ. ಕಫ ಅಥವಾ ಅಜೀರ್ಣದ ಸಮಸ್ಯೆ ಇರುವವರು ರಸ ತೆಗೆಯುವ ಬದಲು ಕಷಾಯ ಮಾಡಿ ಸೇವಿಸುವುದು ಉತ್ತಮ.

    3. ಲಾವಂಚ, ಚಂದನ, ಸೊಗದೇ ಬೇರಿನ ವಿಶೇಷ ನೀರು: ಬೇಸಿಗೆಯಲ್ಲಿ ರಾಸಾಯನಿಕ ಭರಿತ ಸಿದ್ಧ ತಂಪುಪಾನೀಯಗಳನ್ನು ಸೇವಿಸುವುದು ಹಲವರ ರೂಢಿ. ಆದರೆ ಇದರಿಂದ ಆರೋಗ್ಯ ಹಾಳಾಗುವುದು ಶತಃಸಿದ್ಧ. ಅದರ ಬದಲು ಆರೋಗ್ಯ ಹೆಚ್ಚಿಸುವ, ಚರ್ಮದ ತೊಂದರೆಗಳನ್ನು ನಿವಾರಿಸುವ, ಚರ್ಮದ ಸೌಂದರ್ಯವನ್ನು ಕಾಪಾಡುವ, ಉರಿಮೂತ್ರ, ಚರ್ಮದಲ್ಲಿ ಉರಿ, ತುರಿಕೆ, ಬೆವರುಸಾಲೆ, ಚರ್ಮ ಕಪ್ಪಾಗುವುದು ಮುಂತಾದ ಉಷ್ಣದಿಂದಾಗುವ ಸಮಸ್ಯೆಗಳನ್ನು ನಿವಾರಿಸುವ ಒಂದು ಪಾನೀಯವಿದೆ, ಅದನ್ನು ಬಳಸಿ.

    ಮಾಡುವ ವಿಧಾನ: ಲಾವಂಚ ಮತ್ತು ರಕ್ತ ಚಂದನಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಇಡೀ ದಿನಕ್ಕೆ ಮನೆಯವರಿಗೆಲ್ಲಾ ಸಾಲುವಷ್ಟು ನೀರಿಗೆ ಹಾಕಿ ಕುದಿಸಬೇಕು. ಕುದಿಯುವ ನೀರಿಗೆ ಸೊಗದೇ ಬೇರಿನ ಪುಡಿ ಅಥವಾ ಚೂರುಗಳನ್ನು ಹಾಕಿ ಪಾತ್ರೆಯನ್ನು ಮುಚ್ಚಿ ಬೆಂಕಿ ಆರಿಸಬೇಕು. ನೀರು ತಣಿದ ನಂತರ ಇಡೀ ದಿನ ಸೇವಿಸಬಹುದು. ನಾಲ್ಕು ಲೀಟರ್ ನೀರನ್ನು ತಯಾರಿಸುವುದಿದ್ದರೆ ಲಾವಂಚದ ತುಂಡುಗಳನ್ನು ನಾಲ್ಕು ಚಮಚದಷ್ಟು ಮತ್ತು ಸೊಗದೇ ಬೇರು ಹಾಗೂ ಚಂದನಗಳನ್ನು 1 ಚಮಚದಷ್ಟು ಬಳಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts