More

    ಆರೋಗ್ಯವಿದ್ದರೆ ಸಾಧನೆ ಸಾಧ್ಯ – ಶ್ರೀಶೈಲ ಜಗದ್ಗುರು

    ಚಿಕ್ಕೋಡಿ: ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಆರೋಗ್ಯವಾಗಿದ್ದರೆ ಸಮಾಜಕ್ಕೆ ಒಳಿತು ಮಾಡಬಹುದು ಎಂದು ಶ್ರೀಶೈಲ-ಯಡೂರ ಕಾಡಸಿದ್ಧೇಶ್ವರ ಮಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದರು.

    ಸಮೀಪದ ಸುಕ್ಷೇತ್ರ ಯಡೂರ ಗ್ರಾಮದ ಕಾಡಸಿದ್ದೇಶ್ವರಮಠದ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ ಹಾಗೂ ಯಡೂರ ಕಾಡಸಿದ್ದೇಶ್ವರ ಮಠದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯದ ಅರಿವು ಮೂಡಿಸುವ ಬೆಳಗಾವಿ ವಿಭಾಗದ ಕಲಾ ತಂಡಗಳ 3 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಜಾನಪದ ಕಲೆಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ. ಕಲಾವಿದರನ್ನು ಬಳಸಿಕೊಂಡು ಆರೋಗ್ಯದ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಜಯಪುರ ಅಪರ ಜಿಲ್ಲಾ ನಿರ್ದೇಶಕ ಡಾ.ಅಪ್ಪಾಸಾಹೇಬ ನರಟ್ಟಿ ಮಾತನಾಡಿ, ಪ್ರತಿ ಹಳ್ಳಿಯಲ್ಲಿ ಆರೋಗ್ಯ ಸಮಸ್ಯೆ ಅರಿತು ಕಲಾ ತಂಡಗಳ ಮೂಲಕ ಅರಿವು ಮೂಡಿಸುವ ಕಾರ್ಯ ಇಂದಿನ ದಿನಗಳಲ್ಲಿ ಅತೀ ಅಗತ್ಯವಾಗಿದೆ ಎಂದರು.

    ಆರ್‌ಸಿಸಿ ಅಧಿಕಾರಿ ಡಾ. ಎಸ್.ಎಸ್.ಗಡೆದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶಶಿಕಾಂತ ಮುನ್ಯಾಳ, ವಿಭಾಗ ಸಹ ನಿರ್ದೇಶಕ ಡಾ.ಪ್ರಭು ಬಿರಾದಾರ, ಬೆಂಗಳೂರು ಡಿಎಇಒ ಜ್ಞಾನೇಶ್ವರ, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ರಾಜು ನಾಯಿಕ, ಡಾ.ಅನಿಲ ಕುರಬ, ಬಿ.ಬಿ.ಯಲಿಗಾರ, ಪ್ರಕಾಶ ಮಾನೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಬಳಣ್ಣವರ, ಬಸನಗೌಡ ಈಶ್ವರಪ್ಪಗೋಳ, ನಾಟಕಗಳ ಒಕ್ಕೂಟ ಅಧ್ಯಕ್ಷ ಪುರುಷೋತ್ತಮಗೌಡ, ಹಿರಿಯ ಕಲಾವಿದರಾದ ಮಲ್ಲಮ್ಮ ಮ್ಯಾಗೇರಿ, ಎಸ್.ಎಸ್.ಹಿರೇಮಠ, ಈಶ್ವರಚಂದ್ರ ಬೆಟಗೇರಿ ಉಪಸ್ಥಿತರಿದ್ದರು.

    ಬೆಳಗಾವಿ ವಿಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟ, ಗದಗ, ಹಾವೇರಿ, ಧಾರವಾಡ, ಕಾರವಾರ ಜಿಲ್ಲೆಯ ಬೀದಿ ನಾಟಕ ತಂಡದ ಪಾರಿಜಾತ, ಜಾನಪದ ಗೀಗಿ ಪದ, ಡೊಳ್ಳು ವೀರಗಾಸೆ ಮುಂತಾದ ಸುಮಾರು 200ಕ್ಕೂ ಹೆಚ್ಚು ಕಲಾವಿದರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts