More

    ಬಿಜೆಪಿ ನಾಯಕ ಸುಬ್ರಹ್ಮಣಿಯನ್​ ಸ್ವಾಮಿಯನ್ನು ಕೆಣಕಿ ಪೇಚಿಗೆ ಸಿಲುಕಿದ ಪಾಕ್​ ಪ್ರಧಾನಿ ; ಆರ್​ಎಸ್​ಎಸ್​, ನಾಜಿ ಎಂದ ಇಮ್ರಾನ್​​ಗೆ ಸ್ವಾಮಿ ಕೊಟ್ಟಿದ್ದು ಎಂಥಾ ಉತ್ತರ..!

    ನವದೆಹಲಿ: ಪಾಕಿಸ್ತಾನದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2500ಕ್ಕೆ ಏರಿದೆ. ಅಲ್ಲಿ ಲಾಕ್​ಡೌನ್​ ಇಲ್ಲ, ಸೂಕ್ತ ನಿಯಂತ್ರಣಾ ಕ್ರಮಗಳಿಲ್ಲ, ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವೂ ನಡೆಯುತ್ತಿಲ್ಲ. ಲಾಕ್​ಡೌನ್​ನಿಂದ ಕರೊನಾ ನಿಯಂತ್ರಣಕ್ಕೆ ಬರುತ್ತದೆ ಎಂದು ನನಗೆ ನಂಬಿಕೆ ಇಲ್ಲ ಎಂದಿರುವ ಪಾಕಿಸ್ತಾನ ಪ್ರಧಾನಿಯ ಕಣ್ಣು, ಬಾಯಿಯೆಲ್ಲ ಭಾರತದ ಕಡೆಗೇ ಇದೆ.

    ಇಂತಹ ಕರೊನಾ ಸಂದಿಗ್ಧ ಕಾಲದಲ್ಲೂ ಕೂಡ ಭಾರತ, ಆರ್​ಎಸ್​ಎಸ್​, ಬಿಜೆಪಿ, ನಾಜಿಗಳ ಬಗ್ಗೆ ಟ್ವೀಟ್​ ಮಾಡಿ, ಬಿಜೆಪಿ ನಾಯಕ ಸುಬ್ರಹ್ಮಣಿಯನ್​ ಸ್ವಾಮಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಅಷ್ಟಕ್ಕೂ ಸದ್ಯ ಬಿಜೆಪಿ ಸಂಸದ ಸುಬ್ರಹ್ಮಣಿಯನ್​ ಸ್ವಾಮಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ನಡುವೆ ಈಗ ಟ್ವಿಟರ್​ ವಾರ್ ನಡೆಯುತ್ತಿರಲು ಕಾರಣ ಏನು ಎಂಬ ಬಗ್ಗೆ ಕುತೂಹಲ ಇದ್ದರೆ ಮುಂದೆ ಓದಿ…

    ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಇತ್ತೀಚೆಗೆ ಯುಎಸ್​ ಮೂಲದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಇಂಟರ್​ವ್ಯೂ ಮಾಡುತ್ತಿದ್ದ ಜರ್ನಲಿಸ್ಟ್​, ಸುಬ್ರಹ್ಮಣಿಯನ್​ ಸ್ವಾಮಿ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಭಾರತದಲ್ಲಿರುವ ಮುಸ್ಲಿಂ ಸಮುದಾಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಸ್ವಾಮಿ, ಭಾರತದಲ್ಲಿ ಬಹುಕಾಲದಿಂದಲೂ ಪೆಂಡಿಂಗ್ ಇದ್ದಿದ್ದ ಬಿಲ್​ ಇದಾಗಿತ್ತು ಎಂದು ಹೇಳಿ, ಸಿಎಎ ಬಿಲ್​ ಪಾಸ್​ ಆಗಿದ್ದು, ಅದು ಕಾಯ್ದೆ ಆಗಿ ಬದಲಾದ ಬಗ್ಗೆ ವಿವರಿಸಿದರು.

    ಹಾಗೇ ಮಾತನಾಡುತ್ತ ಶೇ.30 ಹಾಗೂ ಅದಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯವನ್ನು ಹೊಂದಿರುವ ಎಲ್ಲ ದೇಶಗಳೂ ಅಪಾಯದಲ್ಲಿವೆ. ಆ ದೇಶಗಳು ಯಾವವು ಎಂದೂ ನಮಗೆ ಗೊತ್ತು. ಇಸ್ಲಾಂ ಸಿದ್ಧಾಂತವೇ ಹಾಗಿದೆ ಎಂದು ಸುಬ್ರಹ್ಮಣಿಯನ್​ ಸ್ವಾಮಿ ಈ ಇಂಟರ್​ವ್ಯೂದಲ್ಲಿ ಹೇಳಿದ್ದಾರೆ.

    ಸುಬ್ರಹ್ಮಣಿಯನ್​ ಸ್ವಾಮಿಯವರು ಮುಸ್ಲಿಮರ ಬಗ್ಗೆ ಮಾತನಾಡಿದ್ದ ಸಂದರ್ಶನದ ವಿಡಿಯೋ ಕ್ಲಿಪ್​​ನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​, ಈ ಆರ್​ಎಸ್​ಎಸ್​ ಪ್ರಭಾವಿತ, 21ನೇ ಶತಮಾನದ ಬಿಜೆಪಿ ನಾಯಕ 200 ಮಿಲಿಯನ್​ ಮುಸ್ಲಿಮರ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು. ಹಾಗೇ ಬಿಜೆಪಿಯನ್ನು ನಾಜಿಗಳಿಗೆ, ಮುಸ್ಲಿಮರನ್ನು ಯಹೂದಿಗಳಿಗೆ ಹೋಲಿಸಿದ್ದರು.

    ಅದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸುಬ್ರಹ್ಮಣಿಯನ್​ ಸ್ವಾಮಿ, ಖಂಡಿತವಾಗಿಯೂ ಹೇಳುತ್ತೇನೆ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ಗೆ ಮಾಡಲು ಏನೂ ಕೆಲಸವೇ ಇಲ್ಲ. ಅವರಿಗೆ ಪಾಕ್​ ಸೈನ್ಯ ಮತ್ತು ಐಎಸ್​ಐ ನೀಡಿದ ಒಂದೂ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಭಾರತದ ವಿರುದ್ಧ ಆರೋಪ ಮಾಡುವುದನ್ನು, ಕೆಟ್ಟದಾಗಿ ಮಾತನಾಡುವುದನ್ನು ಬಿಟ್ಟು ಬೇರೇನೂ ತೋಚುತ್ತಿಲ್ಲ ಎಂದು ಕುಟುಕಿದ್ದಾರೆ.

    ಪಾಕಿಸ್ತಾನದಲ್ಲಿ ಹಿಂದು ಮತ್ತು ಸಿಖ್​ರ ಮೇಲೆ ದೌರ್ಜನ್ಯ ಮಿತಿಮೀರಿದೆ. ಅವರಿಗೆ ಆಹಾರ ನೀಡಲು ನಿರಾಕರಿಸುತ್ತಿರುವುದನ್ನು ನೋಡಿದರೆ ನರಮೇಧದಿಂದ ಒಂದೇ ಹೆಜ್ಜೆ ದೂರದಲ್ಲಿದ್ದಂತೆ ಕಾಣುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts