More

    ಕ್ಷಣಿಕ ಸುಖಕ್ಕಾಗಿ ಘೋರ ಕೃತ್ಯ: ಆ ಕ್ಷಣ…

    ಕ್ಷಣಿಕ ಸುಖಕ್ಕಾಗಿ ಘೋರ ಕೃತ್ಯ: ಆ ಕ್ಷಣ...2018ರ ಒಂದು ಬೆಳಗ್ಗೆ ಜಿಲ್ಲಾ ಕೇಂದ್ರವೊಂದರ ಮಹಿಳಾ ಪೊಲೀಸ್ ಠಾಣೆಗೆ ಬಂದ ಬಸವರಾಜ್ ಎನ್ನುವವನು ಹೀಗೆ ದೂರಿತ್ತ: ‘‘ನಾನು ಇಲ್ಲಿಗೆ 20 ಕಿ.ಮೀ. ದೂರದ ಗ್ರಾಮವೊಂದರ ನಿವಾಸಿ. ಮನೆಯಲ್ಲಿ ಹೆಂಡತಿ, ಮಗನಾದ 20 ವರ್ಷದ ಅನಿಲ್ ಮತ್ತು ಮಗಳಾದ 16 ವರ್ಷದ ಸವಿತಾ ಇರುತ್ತಾರೆ. ಅನಿಲ್ ತೃತೀಯ ಬಿ.ಎ., ಸವಿತಾ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾರೆ. ಮಕ್ಕಳಿಬ್ಬರೂ ನಮ್ಮ ಗ್ರಾಮದಿಂದ ಪ್ರತಿದಿನ ಸರ್ಕಾರಿ ಬಸ್ಸಿನಲ್ಲಿ ಕಾಲೇಜಿಗೆ ಹೋಗಿಬರುತ್ತಾರೆ. ಸವಿತಾ ನಿನ್ನೆ ಬೆಳಗ್ಗೆ ಒಂಬತ್ತಕ್ಕೆ ಕಾಲೇಜಿಗೆಂದು ಹೋದವಳು ರಾತ್ರಿ ಏಳಾದರೂ ವಾಪಸ್ಸಾಗದಿದ್ದಾಗ ಅವಳ ಸೆಲ್​ಫೋನ್​ಗೆ ಕರೆ ಮಾಡಿದೆವು. ಅದು ಸ್ವಿಚ್​ಆಫ್ ಆಗಿತ್ತು. ಸವಿತಾಳನ್ನು ಅಂದು ಕಾಲೇಜಿನಲ್ಲಿ ತಾನು ನೋಡಿಲ್ಲ ಎಂದು ಮಗ ಹೇಳಿದಾಗ ಗಾಬರಿಯಾದ ನಾನು ಎಲ್ಲ ಕಡೆಯೂ ವಿಚಾರಿಸಿದೆ. ಆಕೆಯ ಬಗ್ಗೆ ಮಾಹಿತಿ ಸಿಗಲಿಲ್ಲ. ಮಗಳ ಜೊತೆಗೆ ಕಾಲೇಜಿಗೆ ಹೋಗುತ್ತಿದ್ದ ಅವಳ ಸಹಪಾಠಿ ಅಂಜುವನ್ನು ವಿಚಾರಿಸಿದಾಗ ನಿನ್ನೆಯ ದಿನ ತಾವಿಬ್ಬರೂ ಕಾಲೇಜಿಗೆ ಹೋಗುವಾಗ ದಾರಿ ಮಧ್ಯೆ ಸವಿತಾ ಬಸ್ಸಿನಿಂದಿಳಿದು ತನ್ನ ಸಂಬಂಧಿಕನಾದ ರಮೇಶ್ ಜೊತೆ ಕಾರಿನಲ್ಲಿ ಬರುತ್ತೇನೆ ಎಂದು ಹೇಳಿ ಹೋದಳೆಂದೂ ಆನಂತರ ಕಾಲೇಜಿಗೆ ಬರಲಿಲ್ಲವೆಂದೂ ತಿಳಿಸಿದಳು. ನನ್ನ ಸೋದರಸಂಬಂಧಿಯಾಗಿದ್ದು, ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದ ರಮೇಶ್​ನನ್ನು ವಿಚಾರಿಸಿದೆ. ಆತ ಸವಿತಾ ಬಸ್ಸಿನಿಂದಿಳಿದು ತನ್ನ ಜೊತೆ ಕಾರಿನಲ್ಲಿ ಬಂದ ನಂತರ ತಾವಿಬ್ಬರೂ ಇದೇ ಊರಿನಲ್ಲಿರುವ ತನ್ನ ಸೋದರಿ ಮನೆಗೆ ಹೋದೆವೆಂದೂ ಅಲ್ಲಿ ಚಹಾ ಕುಡಿದ ನಂತರ ಸವಿತಾ ಕಾಲೇಜಿಗೆ ಹೋದಳೆಂದು ತಿಳಿಸಿ ಮುಂದೇನಾಯಿತೆಂದು ತನಗೆ ಗೊತ್ತಿಲ್ಲವೆಂದ. ಇಲ್ಲಿಯವರೆಗೆ ಎಲ್ಲ ಕಡೆ ವಿಚಾರಿಸಿದರೂ ಮಗಳು ಪತ್ತೆಯಾಗಿಲ್ಲ. ಮಗಳನ್ನು ಬೇಗ ಹುಡುಕಿಕೊಡಿ’. ಇದರನ್ವಯ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಯಿತು.

    ಅದೇ ಬೆಳಗ್ಗೆ ಆ ಪಟ್ಟಣಕ್ಕೆ ಸುಮಾರು ಏಳೆಂಟು ಕಿಲೋಮೀಟರ್ ದೂರದಲ್ಲಿ ನದಿದಡದ ಮೇಲೆ ಶವ ಬಿದ್ದಿರುವುದನ್ನು ಕಂಡ ಹಾದಿಹೋಕರು ಪೊಲೀಸರಿಗೆ ಮಾಹಿತಿ ನೀಡಿದರು. ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಸೇತುವೆ ಕೆಳಗೆ 16 ರಿಂದ 20 ವರ್ಷದೊಳಗಿನ ಯುವತಿಯ ಶವ ಬಿದ್ದಿತ್ತು. ಶವದ ಮೇಲೆ ಪೆಟ್ರೋಲ್ ಸುರಿದು ಸುಡಲಾಗಿದ್ದರೂ ಮೃತಳ ಮುಖವನ್ನು ಗುರುತುಹಿಡಿಯಬಹುದಾಗಿತ್ತು. ಮೃತಳು ಸ್ಥಳೀಯ ಕಾಲೇಜಿನ ವಿದ್ಯಾರ್ಥಿನಿಯರು ಧರಿಸುವ ಸಮವಸ್ತ್ರ ತೊಟ್ಟಿದ್ದು, ಅವು ಭಾಗಶಃ ಸುಟ್ಟು ಹೋಗಿದ್ದವು. ಶವದ ಬಳಿ ಪ್ಲಾಸ್ಟಿಕ್ ಬಾಟಲ್ ಬಿದ್ದಿದ್ದು ಅದರಲ್ಲಿ ಸ್ವಲ್ಪ ಪೆಟ್ರೋಲ್ ಇತ್ತು. ಅನತಿ ದೂರದಲ್ಲಿಯೇ ಅರೆಬರೆ ಸುಟ್ಟಿದ್ದ ಚೀಲವೊಂದು ಬಿದ್ದಿತ್ತು. ಮೃತಳ ಆಭರಣಗಳು ಮತ್ತು ವಾಚು ದೇಹದ ಮೇಲೆಯೇ ಇದ್ದವು. ಆದರೆ ಸೆಲ್​ಫೋನ್ ಇರಲಿಲ್ಲ.

    ಗ್ರಾಮಾಂತರ ಪೊಲೀಸರು ಈ ಮಾಹಿತಿಯನ್ನು ಕಂಟ್ರೋಲ್ ​ರೂಮಿಗೆ ರವಾನಿಸಿದಾಗ ಈ ವಿಷಯವನ್ನರಿತ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ- ತನ್ನ ಮಗಳು ಕಾಣೆಯಾದಳೆಂದು ದೂರು ನೀಡಿದ್ದ ಬಸವರಾಜ್ ಆ ಸಮಯ ಠಾಣೆಯಲ್ಲಿಯೇ ಇದ್ದ ಕಾರಣ ಆತನನ್ನು ನದಿ ದಡದಲ್ಲಿ ಸಿಕ್ಕ ಅಪರಿಚಿತ ಶವವನ್ನು ಪರಿಶೀಲಿಸಲು ಸೂಚಿಸಿದರು. ಅದರಂತೆ ಬಸವರಾಜ್ ಸ್ಥಳಕ್ಕೆ ಹೋದ.

    ಶವವನ್ನು ನೋಡಿದ ಕೂಡಲೇ ಅದು ತನ್ನ ಮಗಳದೇ ಎಂದು ಬಸವರಾಜ್ ಗುರುತಿಸಿದ. ಈಗಾಗಲೇ ದಾಖಲಾಗಿದ್ದ ಕಾಣೆಯಾದ ಪ್ರಕರಣವನ್ನು ಅಪಹರಣ, ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣವನ್ನಾಗಿ ಪರಿವರ್ತಿಸಲಾಯಿತು. ಪಂಚನಾಮೆ ನಂತರ ಶವದ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲಿಯೇ ಮಾಡಿಸಲಾಯಿತು. ಮೃತಳ ಮೇಲೆ ಅತ್ಯಾಚಾರವಾಗಿರುವುದನ್ನು ವೈದ್ಯರು ಖಚಿತಪಡಿಸಿ ಅವಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದರು. ಶವವನ್ನು ಬಸವರಾಜನಿಗೆ ಹಸ್ತಾಂತರಿಸಿದ ತನಿಖಾಧಿಕಾರಿ ಮೃತ ಸವಿತಾ, ಆಕೆಯ ಗೆಳತಿ ಅಂಜು, ಆಕೆಯ ಜತೆಗಿದ್ದ ರಮೇಶ್ ಇವರ ಮೊಬೈಲ್ ಕರೆಗಳ ವಿವರ ಪಡೆದರು.

    ಸವಿತಾಳ ಸಹಪಾಠಿ ಅಂಜುವನ್ನು ಪ್ರಶ್ನಿಸಿದಾಗ, ‘ನಾವಿಬ್ಬರೂ ಪ್ರತಿದಿನ ಒಂದೇ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತೇವೆ. ಆ ದಿನ ಬಸ್​ನಿಲ್ದಾಣದಲ್ಲಿ ರಮೇಶ್ ಸವಿತಾಳನ್ನು ಭೇಟಿಯಾಗಿ, ನೀನು ಮಾರ್ಗಮಧ್ಯದಲ್ಲಿ ಬರುವ ನಿಲ್ದಾಣದಲ್ಲಿ ಇಳಿ, ಅಲ್ಲಿಂದ ನಿನ್ನನ್ನು ಕಾರಿನಲ್ಲಿ ಕರೆದುಕೊಂಡು ಕಾಲೇಜಿಗೆ ಹೋಗುತ್ತೇನೆ ಎಂದ. ದಾರಿಮಧ್ಯದ ನಿಲ್ದಾಣದಲ್ಲಿ ಸವಿತಾ ಇಳಿದು ರಮೇಶನ ಕಾರಿನಲ್ಲಿ ಕುಳಿತು ಹೋದಳು. ನಾನು ಕಾಲೇಜಿಗೆ ಹೋದ ನಂತರ ಸವಿತಾ ಇನ್ನೂ ತರಗತಿಗೆ ಬಾರದಿದ್ದುದನ್ನು ಕಂಡು ಅವಳಿಗೆ ವಾಟ್ಸಪ್ ಸಂದೇಶ ಕಳುಹಿಸಿದೆ. ಅದಕ್ಕೆ ಉತ್ತರವಾಗಿ ಅವಳು ತಾನು ರಮೇಶನ ಸೋದರಿಯ ಮನೆಯಲ್ಲಿರುವುದಾಗಿ ತಿಳಿಸಿ ಸ್ವಲ್ಪ ಹೊತ್ತಿನ ನಂತರ ಕಾಲೇಜಿಗೆ ಬರುವುದಾಗಿ ಮರುಸಂದೇಶ ಕಳುಹಿಸಿದಳು’ ಎಂದಳು. ಆ ಸಂದೇಶಗಳನ್ನು ಅಂಜು ಪೊಲೀಸರಿಗೆ ತೋರಿಸಿದಳು. ಪೊಲೀಸರು ರಮೇಶನನ್ನು ಕರೆಸಿ ಅವನ ತೀಕ್ಷ್ಣ ವಿಚಾರಣೆ ನಡೆಸಿದರು. ಪರಿಣಾಮ, ತಾನೇ ಸವಿತಾಳ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡ. ಆತ ಹೀಗೆ ಹೇಳಿದ:

    ‘ನನಗೆ 26 ವರ್ಷವಾಗಿದ್ದು, ಒಕ್ಕಲುತನ ಮಾಡಿಕೊಂಡಿದ್ದೇನೆ. ಇನ್ನೂ ಮದುವೆಯಾಗಿಲ್ಲ. ಸವಿತಾಳ ಅಜ್ಜಿ ಹಾಗೂ ನನ್ನ ತಾಯಿ ಖಾಸಾ ಸೋದರಿಯರು. ವಾರದ ಹಿಂದೆ ಸವಿತಾಳ ಸೋದರ ಅನಿಲ್ ಕಾಲೇಜಿನಲ್ಲಿ ಗಲಾಟೆ ಮಾಡಿದ್ದ ಕಾರಣ ಪ್ರಾಂಶುಪಾಲರು ಅವನನ್ನು ಹೊರಹಾಕಿ ಮನೆಯವರನ್ನು ಕರೆದುಕೊಂಡು ಬಂದರೆ ಮಾತ್ರ ಕಾಲೇಜಿಗೆ ಸೇರಿಸುವುದಾಗಿ ಹೇಳಿದ್ದರು. ಈ ವಿಷಯವನ್ನು ಮನೆಯಲ್ಲಿ ತಿಳಿಸಲು ಅನಿಲ್ ಹೆದರಿ ನನ್ನನ್ನು ಸಂರ್ಪಸಿ ನಾನು ಸಂಬಂಧದಲ್ಲಿ ಅವನ ಚಿಕ್ಕಪ್ಪನಾಗಿರುವ ಕಾರಣ ಕಾಲೇಜಿಗೆ ಬರಹೇಳಿದ. ಇದಕ್ಕೊಪ್ಪಿದ ನಾನು ನಿನ್ನೆ ಕಾಲೇಜಿಗೆ ಬರುವುದಾಗಿ ತಿಳಿಸಿದೆ. ಸವಿತಾಳನ್ನು ಬಸ್​ಸ್ಟಾಂಡಿನಲ್ಲಿ ಕಂಡ ನಾನು ಆ ದಿನ ಅವಳ ಕಾಲೇಜಿಗೆ ಕಾರಿನಲ್ಲಿ ಬರುತ್ತಿರುವುದಾಗಿ ತಿಳಿಸಿ, ಆಕೆ ನಮ್ಮ ಗ್ರಾಮದಿಂದಲೇ ನನ್ನೊಡನೆ ಬಂದರೆ ಬೇರೆಯವರಿಗೆ ಅನುಮಾನ ಬರಬಹುದೆಂದು ಹೇಳಿ ಮಾರ್ಗಮಧ್ಯದಲ್ಲಿ ಬಸ್ಸಿನಿಂದಿಳಿದು ನನ್ನ ಕಾರಿನಲ್ಲಿ ಬರಲು ಹೇಳಿದೆ. ಆಕೆ ಒಪ್ಪಿದಳು. ಅಂತೆಯೇ ಮಾರ್ಗಮಧ್ಯದಲ್ಲಿ ನಾನವಳನ್ನು ಕಾರಿನಲ್ಲಿ ಕೂರಿಸಿಕೊಂಡೆ. ಜಿಲ್ಲಾಕೇಂದ್ರವನ್ನು ತಲುಪಿದಾಗ ಕಾಲೇಜು ಆರಂಭವಾಗಲು ಸಮಯವಿತ್ತು. ಆ ಕಾರಣ ಅಲ್ಲಿಯೇ ಇದ್ದ ನನ್ನ ಸೋದರಿಯ ಮನೆಗೆ ಸವಿತಾಳನ್ನು ಕರೆತಂದೆ. ಸೋದರಿ ತೀರ್ಥಯಾತ್ರೆಗೆ ಹೋಗಿದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ. ಆ ಮನೆಯ ಕೀಲಿಕೈ ನನ್ನ ಬಳಿ ಇದ್ದಿದ್ದರಿಂದ ನಾವಿಬ್ಬರೂ ಮನೆಯೊಳಗೆ ಹೋಗಿ ಮಾತನಾಡುತ್ತ ಕುಳಿತೆವು.

    ನನಗೆ ಎರಡು-ಮೂರು ವರ್ಷಗಳಿಂದ ಸವಿತಾಳ ಮೇಲೆ ಪ್ರೀತಿಯ ಭಾವನೆ ಇದ್ದು, ಅವಳೊಡನೆ ದೈಹಿಕ ಸಂಪರ್ಕ ಮಾಡಬೇಕೆಂಬ ಮನಸ್ಸಿತ್ತು. ಸವಿತಾಳ ಜತೆ ಸ್ವಲ್ಪ ಹೊತ್ತು ಮಾತನಾಡುತ್ತ ಅವಳನ್ನು ಬೆಡ್​ರೂಂಗೆ ಕರೆದೊಯ್ದು ಅವಳ ಮೇಲೆ ಅತ್ಯಾಚಾರ ಮಾಡಿದೆ. ಆಕೆ ಚೀರಿದರೆ ಹೊರಗಿನವರಿಗೆ ಕೇಳಬಾರದೆಂದು ಮನೆಯಲ್ಲಿನ ಟಿ.ವಿ. ಆನ್ ಮಾಡಿ ಅದರ ಶಬ್ದವನ್ನು ಜೋರು ಮಾಡಿದ್ದೆ. ತೃಷೆ ತೀರಿದ ನಂತರ ನಾನು ಮಾಡಿದ ಕೃತ್ಯವನ್ನು ಸವಿತಾ ತನ್ನ ಮನೆಯವರಿಗೆ ಹೇಳಬಹುದೆಂದು ಹೆದರಿ ಅವಳ ಕುತ್ತಿಗೆಯನ್ನು ಹಿಸುಕಿ ಅವಳ ಕೊಲೆ ಮಾಡಿದೆ. ಮಾರುಕಟ್ಟೆಗೆ ಹೋಗಿ ಚೀಲವನ್ನು ಖರೀದಿಸಿ, ಅದರಲ್ಲಿ್ಲ ಸವಿತಾಳ ದೇಹವನ್ನು ತುರುಕಿದೆ. ಅದನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಕಾರನ್ನು ಸೇತುವೆಗೆ ತೆಗೆದುಕೊಂಡು ಬಂದು ಅಲ್ಲಿಂದ ಕೆಳಗೆಸೆದೆ. ಆದರೆ ಮೂಟೆ ನೀರಿಗೆ ಬೀಳದೇ ದಡಕ್ಕೆ ಬಿದ್ದು ಅದರ ಬಾಯಿ ತೆರೆದುಕೊಂಡು ಶವವು ಕಾಣಿಸತೊಡಗಿತು. ಆಗ ಹತ್ತಿರದ ಪೆಟ್ರೋಲ್ ಬಂಕ್​ಗೆ ಹೋಗಿ ಪೆಟ್ರೋಲ್ ತಂದು ದೇಹದ ಮೇಲೆ ಸುರಿದು, ಬೆಂಕಿ ಹಚ್ಚಿದೆ’ ಎಂದ.

    ಮುಂದಿನ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ಪೂರ್ವನಿಯೋಜಿತ ಅತ್ಯಾಚಾರ ಮಾಡಿ ಕೊಲೆಮಾಡಿದ್ದಲ್ಲದೆ ಸಾಕ್ಷ್ಯನಾಶ ಮಾಡಿದ ಅಪರಾಧಗಳಿಗಾಗಿ ರಮೇಶನಿಗೆ ನ್ಯಾಯಾಧೀಶರು ಮರಣದಂಡನೆ ವಿಧಿಸಿದರು. ಬಹುತೇಕ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಚಯವಿರುವವರೇ ಆರೋಪಿತರಾಗಿರುವ ಕಾರಣ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ಚಿಕ್ಕಂದಿನಿಂದಲೇ ಹೆಣ್ಣ್ಣುಮಕ್ಕಳಿಗೆ ಕಲಿಸಿದರೆ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಬಹುದಲ್ಲವೇ? ‘ನೋಡಲಾಗದು, ನುಡಿಸಲಾಗದು ಪರಸ್ತ್ರೀಯರ ಬೇಡ ಕಾಣಿರೋ, ಒಂದಾಸೆಗೆ ಸಾಸಿರ ವರುಷ ನರಕದಲ್ಲದ್ದುವ ಕೂಡಲಸಂಗಮದೇವಾ’ ಎಂಬ ನುಡಿಯಂತೆ ಕ್ಷಣಿಕ ಸುಖಕ್ಕಾಗಿ ಸವಿತಾಳ ಬಾಳನ್ನಲ್ಲದೆ ತನ್ನ ಬಾಳನ್ನೂ ರಮೇಶ್ ಹಾಳುಮಾಡಿಕೊಂಡ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts