More

    ಚುನಾವಣೆಯಲ್ಲಿ ಲಿಂಗಾಯತ ಪ್ಲೇ ಕಾರ್ಡ್ ಬಿಜೆಪಿ ಕೈ ಹಿಡಿಯಲ್ಲ… ಹಿಂದುತ್ವ ಅಜೆಂಡಾ ಕೆಲಸ ಮಾಡಲ್ಲ; ಎಚ್​ಡಿಕೆ

    ಮೈಸೂರು: ಬಿಜೆಪಿ ಉರುಳಿಸಿರುವ ಲಿಂಗಾಯತ ಪ್ಲೇ ಕಾರ್ಡ್​ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೈ ಹಿಡಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

    ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತ ಮೀಸಲಾತಿ ಕುರಿತು ಬಿಜೆಪಿ ಹೇಗೆ ಸ್ಪಂದಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಡೀ ಸಮುದಾಯಕ್ಕೆ ಅಪಮಾನ ಮಾಡಿದೆ. ಬಿ.ಎಸ್​.ಯಡಿಯೂರಪ್ಪ ಅವರನ್ನು ಸೈಡ್​ಲೈನ್​ ಮಾಡಿದ್ದ ಬಿಜೆಪಿ, ಇದೀಗ ಆ ಸಮುದಾಯದ ಮತಕ್ಕಾಗಿ ಬಿಎಸ್​ವೈ ಅವರನ್ನು ಮುಖ್ಯವಾಹಿನಿಗೆ ಕರೆ ತರುತ್ತಿದೆ ಎಂದು ಕುಟುಕಿದರು.

    ಸಿಎಂ ಆಗಿದ್ದ ಯಡಿಯೂರಪ್ಪ ಅವರನ್ನು ಬಿಜೆಪಿಯವರು ದೆಹಲಿಯಲ್ಲಿ ಯಾವ ರೀತಿ ಗೌರವ ಕೊಟ್ಟರು, ಯಾವ ರೀತಿ ನಡೆಸಿಕೊಂಡರು ಎಂಬುದು ಎಲ್ಲರಿಗೂ ತಿಳಿದಿದೆ. ಸಿಎಂ ಸ್ಥಾನದಿಂದ ಕೆಳಗಿಳಿಸಿದ ಯಡಿಯೂರಪ್ಪ ಅವರನ್ನು ಈಗ ನರೇಂದ್ರ ಮೋದಿ ಆಲಿಂಗನ ಮಾಡುತ್ತಿದ್ದಾರೆ. ಇದರಿಂದ ಲಿಂಗಾಯತ ಮತಗಳು ಏನು ಬರಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಏನು ಬದಲಾವಣೆ ಆಗಿದೆ. ಹಾಗಾದರೆ, ಅವರನ್ನು ಆ ಸ್ಥಾನದಿಂದ ತೆಗೆದಿದ್ದು ಏಕೆ? ಕಮಿಷನ್​ ಹೆಚ್ಚಾಗಿರುವುದು ಬಿಟ್ಟರೆ ಏನು ಪರಿವರ್ತನೆಯಾಗಿಲ್ಲ ಎಂದು ಕಾಲೆಳೆದರು.

    ಬಿಜೆಪಿಯ ಹಿಂದುತ್ವ ಅಜೆಂಡಾ ಸಹ ಕೆಲಸ ಮಾಡಲ್ಲ. ಕಳೆದ ಬಾರಿ ಬಿಜೆಪಿಯೊಂದಿಗೆ ಹೋಗಿ ತಪ್ಪು ಮಾಡಿದ್ದವು ಎಂಬ ಅರಿವು ಯುವಜನರಿಗೆ ಆಗಿದೆ. ಅದಕ್ಕಾಗಿ ಈ ಸಲ ಹೋಗಲ್ಲ. ಅವರೆಲ್ಲ ತಿರುಗಿ ಬೀಳಲಿದ್ದಾರೆ ಎಂದು ಹೇಳಿದ ಎಚ್​ಡಿಕೆ, ಈಗಿನ ಬಿಜೆಪಿ ನಿಜವಾದ ಬಿಜೆಪಿಯಲ್ಲ. ಅದು ಮೋದಿ, ನಡ್ಡಾ, ಅಮಿತಾ ಷಾ ಬಿಜೆಪಿ. ಈ ಹಿಂದಿನ ಬಿಜೆಪಿ ಈಗಿಲ್ಲ ಎಂದರು.

    ಇದನ್ನೂ ಓದಿ: ಸಾಧು ಕೋಕಿಲ ಕೆಪಿಸಿಸಿ ಸಾಂಸ್ಕೃತಿಕ ಘಟಕದ ನೂತನ ಅಧ್ಯಕ್ಷ; ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎಂದ ಡಿಕೆಶಿ

    ಕೈ ಜೋಡಿಸುವುದಿಲ್ಲ

    ವಿಧಾನಸಭಾ ಚುನಾವಣೆಯ ಪೂರ್ವ ಮತ್ತು ನಂತರ ಜೆಡಿಎಸ್​ ಯಾವುದೇ ಪಕ್ಷದೊಂದಿಗೆ ಕೈಜೋಡಿಸುವುದಿಲ್ಲ. ಸ್ವಂತ ಬಲದಿಂದ 120 ಸ್ಥಾನಗಳಲ್ಲಿ ಗೆಲ್ಲಲಿದೆ. ಅನಿಶ್ಚಿತತೆ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

    ಕಳೆದ ಬಾರಿ ಮೈತ್ರಿ ಸರ್ಕಾರ ರಚಿಸಿದ್ದರಿಂದ ಜೆಡಿಎಸ್​ನ ಇಮೇಜ್​ ಅನ್ನು ಕಾಂಗ್ರೆಸ್​ನವರು ಹಾಳು ಮಾಡಿದರು. ಮುಂದಿನ ಸಲ ಬಿಜೆಪಿಯೊಂದಿಗೆ ಹೋದರೂ ಅವರು ಕೂಡ ಇದನ್ನೇ ಮಾಡುತ್ತಾರೆ. ಇವರಿಬ್ಬರ ಸಹವಾಸ ಸಾಕಾಗಿದೆ ಎಂದರು.
    ಈ ಚುನಾವಣೆ ಜೆಡಿಎಸ್​ಗಷ್ಟೇ ಅಲ್ಲ, ಬಿಜೆಪಿ, ಕಾಂಗ್ರೆಸ್​ಗೂ ಅಗ್ನಿಪರೀಕ್ಷೆಯೇ. ಮುಂದಿನ ಭವಿಷ್ಯವನ್ನು ಇದುವೇ ನಿರ್ಧರಿಸಲಿದ್ದು, ಮೂರು ಪಕ್ಷಗಳ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ ಎಂದರು.

    ಜನರು ಈಗಲೂ ಕೇಳುತ್ತಾರೆಯೇ?

    “ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ, ವೀರನೂ ಅಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ಕಾಲು ಮುರಿದ ಕುದುರೆಯನ್ನು ಏರುವುದು ಹೇಗೆ? ನಮ್ಮ ಹಳ್ಳಿ ಕಡೆ “ಕಾಲು ಮುರಿದ ಕುದುರೆಯನ್ನು ಕೊಟ್ಟವನನ್ನು ಮನೆ ಮುರುಕ’ ಎನ್ನುತ್ತಾರೆ ಎಂದು ತಿರುಗೇಟು ನೀಡಿದರು.

    ಜೆಡಿಎಸ್​ಗೆ ಹಾಕುವ ಮತ ವ್ಯರ್ಥ ಎಂದು ಹೇಳುವ ಸಿದ್ದರಾಮಯ್ಯ ಕಾಯಿಲೆ ಇದೀಗ ಅಮಿತ್​ ಷಾ ಅವರಿಗೂ ತಗುಲಿದೆ. ಇವರ ಮಾತುಗಳನ್ನೂ ಜನರು ಈಗಲೂ ಕೇಳುತ್ತಾರೆಯೇ? ಎಂದು ಹರಿಹಾಯ್ದರು.

    ಅಬಕಾರಿ ನೀತಿ ಹಗರಣ ಆರೋಪದಡಿ ದೆಹಲಿ ಸಚಿವರಾದ ಮನೀಶ್​ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್​ ಅವರನ್ನು ಸಿಬಿಐ ಬಂಧಿಸಿದೆ. ಅದೇ ರೀತಿ ಕ್ರಮ ರಾಜ್ಯದಲ್ಲೂ ಜಾರಿಯಾದರೆ 10&15ರಿಂದ ಸಚಿವರನ್ನು ಬಂಧಿಸಿ ಜೈಲಿಗೆ ಹಾಕಲು ಹೊಸದಾಗಿ ಪರಪ್ಪನ ಅಗ್ರಹಾರ ಕಟ್ಟಿಸಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

    ಇದನ್ನೂ ಓದಿ: ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts