More

    ‘ಮೈಸೂರು ದಸರಾ’ಕ್ಕೆ ಈ ಬಾರಿ ‘ಕಾಗಿನೆಲೆ ಥೀಮ್’; ಶಂಖ ಊದುವ ಕನಕದಾಸರ ಭಾವಚಿತ್ರ, ಗದ್ದುಗೆ ಕಲಾಕೃತಿ; 8 ಲಕ್ಷ ರೂ. ವೆಚ್ಚದಲ್ಲಿ ತಯಾರಿ

    ಕುಲ ಕುಲವೆಂದು ಹೊಡದಾಡದಿರಿ
    ಕುಲದ ನೆಲೆಯೇನಾದರೂ ಬಲ್ಲಿರಾ?
    ಕುಲ ಕುಲವೆನ್ನತಿಹರು
    ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ
    ಆತ್ಮ ಯಾವ ಕುಲ ಜೀವ ಯಾವ ಕುಲ
    ತತ್ವೇಂದ್ರಿಯ ಕುಲ ಪೇಳಿರಯ್ಯ?

    ಹಾವೇರಿ: ಹೀಗೆ, ಕುಲ-ಗೋತ್ರ, ಮೇಲು- ಕೀಳು, ಜಾತಿ-ಭೇದ- ಭಾವಗಳ ಬಗ್ಗೆ ಬೆಳಕು ಚೆಲ್ಲಿದ, ಸಮಾನತೆಯ ತತ್ವ ಲೋಕಕ್ಕೆ ಸಾರಿದ ಕನಕದಾಸರ ಸಂದೇಶ ಸಾರುವ ಕನಕದಾಸರ ಶಂಖ ಊದುತ್ತಿರುವ ಭಾವಚಿತ್ರ ಹಾಗೂ ಕನಕದಾಸರ ಗದ್ದುಗೆಯ ಬಿಂಬಿಸುವ ಮಾದರಿಯ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದಲ್ಲಿ ಕಂಗೊಳಿಸಲಿದೆ.
    ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ 8 ಲಕ್ಷ ರೂ. ವೆಚ್ಚದಲ್ಲಿ ಬಂಡಿಪುರದ ಎಪಿಎಂಸಿ ಯಾರ್ಡ್‌ನಲ್ಲಿ ಈ ಟ್ಯಾಬ್ಲೋ ಸಿದ್ಧವಾಗುತ್ತಿದೆ. ಟ್ಯಾಬ್ಲೋ ನೋಡಲ್ ಅಧಿಕಾರಿಯಾಗಿ ಕೈಗಾರಿಕೆ ಇಲಾಖೆ ಉಪನಿರ್ದೇಶಕ ವಿನಾಯಕ ಜೋಶಿ ನೇಮಕಗೊಂಡಿದ್ದಾರೆ. ತುಮಕೂರು ಮೂಲದ ಕಲಾವಿದ ಯೋಗೀಶ ಅವರಿಗೆ ಕಲಾಕೃತಿ ನಿರ್ಮಾಣದ ಟೆಂಡರ್ ನೀಡಲಾಗಿದೆ. ಯೋಗೀಶ ನೇತೃತ್ವದ 25 ಕಲಾವಿದರ ತಂಡ ಟ್ಯಾಬ್ಲೋ ನಿರ್ಮಾಣದಲ್ಲಿ ನಿರತವಾಗಿದೆ.
    ಲಾರಿಯೊಂದರ ಮೇಲ್ಭಾಗ ತೆಗೆದು ಅದರ ಮೇಲೆ ಕನಕದಾಸರ ಟ್ಯಾಬ್ಲೋ ನಿರ್ಮಿಸಲಾಗುತ್ತಿದೆ. ಮಧ್ಯದಲ್ಲಿ ಕಾಗಿನೆಲೆಯಲ್ಲಿರುವ ಕನಕದಾಸರ ಗದ್ದುಗೆ ಅದರ ಎದರು ಮುಂಭಾಗದಲ್ಲಿ ಕನಕದಾಸರ ಪ್ರತಿಮೆ, ಹಿಂಭಾಗದಲ್ಲಿ ಶಂಖ ಊದುತ್ತಿರುವ ಕನಕದಾಸರ ಪ್ರತಿಮೆಯನ್ನು ಟ್ಯಾಬ್ಲೋದಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಶೇ.80ರಷ್ಟು ಟ್ಯಾಬ್ಲೋ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ.
    ಅ.24ರಂದು ಮೈಸೂರಿನ ಅರಮನೆ ಆವರಣದಲ್ಲಿ ಜರುಗಲಿರುವ ದಸರಾ ಮೆರವಣಿಗೆಯಲ್ಲಿ 31 ಜಿಲ್ಲೆಗಳಿಂದ 35 ಟ್ಯಾಬ್ಲೋಗಳು ಪಾಲ್ಗೊಳ್ಳಲಿವೆ. ಇದರಲ್ಲಿ ಹಾವೇರಿ ಜಿಲ್ಲೆಯನ್ನು ಕನಕದಾಸರ ಟ್ಯಾಬ್ಲೋ ಪ್ರತಿನಿಧಿಸಲಿದೆ.

    ಜಿಲ್ಲಾ ಪಂಚಾಯಿತಿ ವತಿಯಿಂದ ಕಾಗಿನೆಲೆ ಕನಕದಾಸರ ಥೀಮ್ ಇರುವ ಟ್ಯಾಬ್ಲೋ ತಯಾರಿ ಕೆಲಸ ಭರದಿಂದ ಸಾಗಿದೆ. ಈಗಾಗಲೇ ಶೇ.80ರಷ್ಟು ಕೆಲಸ ಪೂರ್ಣಗೊಂಡಿದೆ. ಅ.24ರಂದು ಜರುಗಲಿರುವ ದಸರಾ ಮೆರವಣಿಗೆಯಲ್ಲಿ ಈ ಟ್ಯಾಬ್ಲೋ ಜಿಲ್ಲೆಯನ್ನು ಪ್ರತಿನಿಧಿಸಲಿದೆ.
    ವಿನಾಯಕ ಜೋಶಿ, ಟ್ಯಾಬ್ಲೋ ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts