More

    ಎರಡು ದಶಕದಲ್ಲಿ 9,230 ಸೋಂಕು ಪತ್ತೆ; 671 ಗರ್ಭಿಣಿಯರಿಗೂ ಕಾಡಿದ ಏಡ್ಸ್ ಮಹಾಮಾರಿ; ಜಿಲ್ಲೆಯಲ್ಲಿ ಇಳಿಕೆ ಪ್ರಮಾಣದಲ್ಲಿ ಎಚ್‌ಐವಿ

    ಕೇಶವಮೂರ್ತಿ ವಿ.ಬಿ. ಹಾವೇರಿ

    ಏಡ್ಸ್ ಕಾಯಿಲೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ 2030ರೊಳಗಾಗಿ ಭಾರತದಲ್ಲಿ ಏಡ್ಸ್ ಸೋಂಕು ಕೊನೆಗಾಣಿಸಲು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯೊಂದಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬಹುತೇಕ ಇಳಿಕೆ ಪ್ರಮಾಣದಲ್ಲಿದೆ.
    2002ರಿಂದ ಅಕ್ಟೋಬರ್ 2023ರವರೆಗೆ ಜಿಲ್ಲೆಯಲ್ಲಿ ಒಟ್ಟು 69,2,797 ಸಾಮಾನ್ಯ ಜನರ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 9,230 ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದಾರೆ. 56,016 ಗರ್ಭಿಣಿಯರ ಪರೀಕ್ಷೆಯಾಗಿದ್ದು, ಅದರಲ್ಲಿ 671 ಗರ್ಭಿಣಿಯರು ಸೋಂಕಿತರಾಗಿದ್ದಾರೆ. 2022ರ ಎಚ್‌ಎಸ್‌ಎಸ್ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಎಚ್‌ಐವಿ ಪ್ರಚಲಿತ ದರ 0.29ರಷ್ಟಿದೆ. ಗರ್ಭಿಣಿಯರಲ್ಲಿ 0.03 ರಷ್ಟಿದೆ.
    ಹಾವೇರಿ ಜಿಲ್ಲಾಸ್ಪತ್ರೆಯ ಎ.ಆರ್.ಟಿ. ಕೇಂದ್ರದಲ್ಲಿ ಇಲ್ಲಿಯವರೆಗೆ 8,612 ಎಚ್.ಐ.ವಿ. ಸೋಂಕಿತರು ನೋಂದಣಿಯಾಗಿದ್ದು, 7,178 ಸೋಂಕಿತರಿಗೆ ಎ.ಆರ್.ಟಿ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಪ್ರಸ್ತುತ 4,172 ಸೋಂಕಿತರು ಈ ಚಿಕಿತ್ಸೆ ಪಡೆಯುತ್ತಿದ್ದಾರೆ.
    1988ರಿಂದ ಡಿಸೆಂಬರ್ 1ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು 2030ರೊಳಗೆ ಭಾರತವನ್ನು ಏಡ್ಸ್ ಮುಕ್ತಗೊಳಿಸುವ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅಂಕಿ ಸಂಖ್ಯೆಗಳು ನಿಟ್ಟುಸಿರಿಗೆ ಕಾರಣವಾಗಿದ್ದರೂ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಡಿವಾಣ ಹಾಕಬೇಕಾದ ಅವಶ್ಯಕತೆ ಇದೆ. ಎಲ್ಲರಂತೆ ಸೋಂಕಿತರೂ ಬದುಕುವ ಹಕ್ಕು ಪಡೆಯಬೇಕು ಎಂಬ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ‘ಸಮುದಾಯಗಳು ಮುನ್ನಡೆಸಲಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ಏಡ್ಸ್ ದಿನ ಆಚರಿಸುತ್ತಿದೆ.
    ರೋಗದ ಲಕ್ಷಣಗಳು
    ಸೋಂಕಿನ ಹಂತವನ್ನು ಅವಲಂಬಿಸಿ ಎಚ್‌ಐವಿ ಲಕ್ಷಣಗಳು ಬದಲಾಗುತ್ತವೆ. ಆರಂಭಿಕ ಸೋಂಕಿನ ನಂತರದ ಮೊದಲ ಕೆಲವು ವಾರಗಳಲ್ಲಿ ಸಾಮಾನ್ಯ ರೋಗಲಕ್ಷಣಗಳಾದ ಜ್ವರ, ತಲೆನೋವು, ದದ್ದು ಅಥವಾ ನೋಯುತ್ತಿರುವ ಗಂಟಲು ಸೇರಿದಂತೆ ಇನ್‌ಪ್ಲೂಯೆಂಜಾ ತರಹದ ಅನಾರೋಗ್ಯವನ್ನು ಅನುಭವಿಸುತ್ತಾರೆ. ನಂತರದ ದಿನಗಳಲ್ಲಿ ಸೋಂಕು ಕ್ರಮೇಣ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವುದರಿಂದ ಜನರು ಊದಿಕೊಂಡ ದುಗ್ಧರಸ ಗ್ರಂಥಿಗಳು, ತೂಕ ನಷ್ಟ, ಜ್ವರ, ಅತಿಸಾರ ಮತ್ತು ಕೆಮ್ಮು ಮುಂತಾದ ಇತರೆ ರೋಗಲಕ್ಷಣಗಳನ್ನು ಕಾಣಬಹುದು. ಚಿಕಿತ್ಸೆ ಪಡೆಯದೇ ಇದ್ದರೆ ನಂತರ ಕ್ಷಯರೋಗ (ಟಿಬಿ), ಕ್ರಿಪ್ರೋಕೊಕಲ್ ಮೆನಿಂಜೈಟಿಸ್, ತೀವ್ರವಾದ ಬ್ಯಾಕ್ಟೀರಿಯಾ ಸೋಂಕುಗಳು, ಲಿಂಫೋಮಾಸ್ ಮತ್ತು ಕಪೋಸಿಯ ಸಾರ್ಕೋಮಾ, ಕ್ಯಾನ್ಸರ್‌ಗಳಂತಹ ತೀವ್ರವಾದ ಕಾಯಿಲೆಗಳನ್ನು ಕಾಣಬಹುದು.
    ರೋಗ ಹರಡುವ ವಿಧಾನಗಳು
    ರಕ್ತ, ಎದೆಹಾಲು, ವೀರ್ಯ ಮತ್ತು ಯೋನಿ ಸ್ರವಿಸುವಿಕೆಯಂತಹ ಸೋಂಕಿತ ದೇಹದ ದ್ರವಗಳ ವಿನಿಮಯದ ಮೂಲಕ ಪ್ರಸರಣವನ್ನು ಕಾಣಬಹುದು. ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುವುದು. ಚುಂಬಿಸುವುದು, ತಬ್ಬಿಕೊಳ್ಳುವುದು, ಕೈಕುಲುಕುವುದು ಅಥವಾ ವೈಯಕ್ತಿಕ ವಸ್ತುಗಳು, ಆಹಾರ ಅಥವಾ ನೀರನ್ನು ಹಂಚಿಕೊಳ್ಳುವಂತಹ ಸಾಮಾನ್ಯ ದೈನಂದಿನ ಸಂಪರ್ಕದ ಮೂಲಕ ವ್ಯಕ್ತಿಗಳು ಸೋಂಕಿಗೆ ಒಳಗಾಗುವುದಿಲ್ಲ.
    ತಡೆಗಟ್ಟುವಿಕೆ ಕ್ರಮಗಳು:
    1) ಸುರಕ್ಷಿತ ಲೈಂಗಿಕತೆಗಾಗಿ ಪುರುಷ ಮತ್ತು ಸ್ತ್ರೀ ಕಾಂಡೋಮ್ ಬಳಕೆ.
    2) ಪರೀಕ್ಷೆ ಮಾಡಿದ ಸುರಕ್ಷಿತ ರಕ್ತವನ್ನು ಪಡೆಯುವುದರಿಂದ.
    3) ಸಂಸ್ಕರಿಸಿದ ಸೂಜಿ, ಸಿರಿಂಜು, ಹರಿತವಾದ ಸಲಕರಣೆಗಳನ್ನು ಬಳಸುವುದು.
    4) ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುವಿಕೆಯನ್ನು ನಿರ್ಮೂಲನೆ ಮಾಡುವುದು.

    ಜಿಲ್ಲೆಯ ಅಂಕಿ- ಸಂಖ್ಯೆ
    ವರ್ಷ ಸಾಮಾನ್ಯ ಪರೀಕ್ಷೆ ಪಾಸಿಟಿವ್ ಗರ್ಭಿಣಿಯರ ಪರೀಕ್ಷೆ ಪಾಸಿಟಿವ್
    2021 60,260 184 30,745 05
    2022 82,691 190 35,312 13
    2023 52,021 153 22,766 07

    ಕೋವಿಡ್ ನಂತರದಲ್ಲಿ ಹೆಚ್ಚು ಎಚ್‌ಐವಿ ಪರೀಕ್ಷೆ ಮಾಡಲಾಗುತ್ತಿದೆ. ಗರ್ಭಿಣಿಯರೆಲ್ಲರಿಗೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ, ಔಷಧ, ಸಮಾಲೋಚನೆ ವ್ಯವಸ್ಥೆ ಮಾಡಲಾಗಿದೆ. ಅವರ ಹೆಸರನ್ನೂ ಗೌಪ್ಯವಾಗಿ ಇಡಲಾಗುತ್ತದೆ. ಹಾಗಾಗಿ, ಸೋಂಕಿತರು ಯಾವುದೇ ಆತಂಕವಿಲ್ಲದೇ ಚಿಕಿತ್ಸೆ ಪಡೆಯಬಹುದು.
    ಡಾ.ನೀಲೇಶ ಎಂ.ಎನ್., ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts